Headlines

ಆಟವಾಡುತ್ತಿದ್ದ ಬಾಲಕಿಯ ಮೇಲೆ ಬೀದಿ ನಾಯಿಯ ದಾಳಿ : 4 ವರ್ಷದ ಬಾಲಕಿಗೆ ಗಂಭೀರ ಗಾಯ

ಆಟವಾಡುತ್ತಿದ್ದ ಬಾಲಕಿಯ ಮೇಲೆ ಬೀದಿ ನಾಯಿಯ ದಾಳಿ : 4 ವರ್ಷದ ಬಾಲಕಿಗೆ ಗಂಭೀರ ಗಾಯ

A stray dog attacked a 4-year-old girl and another man in Shivamogga’s Sominakoppa area, leaving them injured. Residents have urged authorities to control the growing stray dog menace.

ಶಿವಮೊಗ್ಗ, ಮೇ 07: ಮನೆ ಮುಂಭಾಗ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ನಗರದ ಪಾಲಿಕೆ 1ನೇ ವಾರ್ಡ್ ವ್ಯಾಪ್ತಿಯ ಸೋಮಿನಕೊಪ್ಪ ಬಡಾವಣೆಯಲ್ಲಿ ನಡೆದಿದೆ.

ಇರ್ಜಾ ಕೌನೇನ್ (4) ಹಾಗೂ ಕೃಷ್ಣಾನಾಯ್ಕ್ ಎಂಬುವರು ಬೀದಿ ನಾಯಿ ದಾಳಿಗೆ ತುತ್ತಾದವರು ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೇ 6ರ ಸಂಜೆ ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಬಾಲಕಿಯ ಮೇಲೆ ದಾಳಿ ನಡೆಸಿದ ನಾಯಿ, ಐದಾರು ಕಡೆ ಕಚ್ಚಿ ಗಾಯಗೊಳಿಸಿದೆ. ಬಾಲಕಿಯ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿ ನಾಯಿಯನ್ನು ಓಡಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಸ್ಥಳೀಯ ಮುಖಂಡ ಶಾಮೀರ್ ಪಾಷಾ ಮಾತನಾಡಿ, “ಸೋಮಿನಕೊಪ್ಪ ಬಡಾವಣೆ ಸುತ್ತಮುತ್ತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕರು ಆತಂಕದಲ್ಲಿ ಬದುಕುವಂತಾಗಿದೆ. ತಕ್ಷಣವೇ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡು ಬೀದಿ ನಾಯಿಗಳನ್ನು ನಿಯಂತ್ರಿಸಬೇಕು” ಎಂದು ಆಗ್ರಹಿಸಿದರು.

ಇದೇ ನಾಯಿ ಮೇ 7ರ ಬೆಳಿಗ್ಗೆ ರಸ್ತೆ ಮೂಲಕ ನಡೆದು ಹೋಗುತ್ತಿದ್ದ ಕೃಷ್ಣಾನಾಯ್ಕ್ ಅವರ ಮೇಲೂ ದಾಳಿ ನಡೆಸಿ ಕಾಲಿಗೆ ಗಾಯಗೊಳಿಸಿದೆ. ಅಲ್ಲದೆ, ಆಕಳ ಕರುವೊಂದರ ಮೇಲೆಯೂ ದಾಳಿ ನಡೆಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಬೀದಿ ನಾಯಿಯನ್ನು ತಕ್ಷಣವೇ ಹಿಡಿದು ಸಾರ್ವಜನಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

About The Author

Exit mobile version