ರಿಪ್ಪನ್‌ಪೇಟೆಯಲ್ಲಿ ನಿವೃತ್ತ ಸೇನಾಧಿಕಾರಿ ಎ. ಕುಮಾರ್‌ಗೆ ಅದ್ದೂರಿ ಸ್ವಾಗತ
A grand welcome was organized in Ripponpet to honor retired Army officer A. Kumar and his wife Padma Kumar for their 36 years of dedicated service to the nation.
ರಿಪ್ಪನ್‌ಪೇಟೆ: ಸುಮಾರು 36 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎ. ಕುಮಾರ್ ಅವರು ತಮ್ಮ ಹುಟ್ಟೂರಾದ ರಿಪ್ಪನ್‌ಪೇಟೆಗೆ ವಾಪಸ್ಸಾಗುತ್ತಿದ್ದಂತೆಯೇ ಸ್ಥಳೀಯ ನಾಗರಿಕರು ಭರ್ಜರಿ ಸ್ವಾಗತ ನೀಡಿ ಗೌರವಿಸಿದರು.
ದೇಶದ ಗಡಿ ಪ್ರದೇಶಗಳಲ್ಲಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ, ಪ್ರಾಮಾಣಿಕ ಸೇವೆ ಸಲ್ಲಿಸಿರುವ ಎ. ಕುಮಾರ್ ಅವರ ದೇಶಭಕ್ತಿ ಮತ್ತು ಕರ್ತವ್ಯನಿಷ್ಠೆಯನ್ನು ಸ್ಮರಿಸಿ ಜನತೆ ಅಭಿನಂದನೆ ಸಲ್ಲಿಸಿದರು.
ಎ. ಕುಮಾರ್ ಅವರೊಂದಿಗೆ ಅವರ ಪತ್ನಿ ಪದ್ಮಾ ಕುಮಾರ್ ಕೂಡ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಈ ದಂಪತಿಯ ದೇಶ ಸೇವೆಗೆ ರಿಪ್ಪನ್‌ಪೇಟೆ ಜನತೆ ಹೃತ್ಪೂರ್ವಕವಾಗಿ ‘ಸೆಲ್ಯೂಟ್’ ಸಲ್ಲಿಸಿದರು. ಇವರಿಬ್ಬರೂ ದೀರ್ಘಕಾಲ ದೇಶಕ್ಕಾಗಿ ದುಡಿದಿರುವುದು ಸ್ಥಳೀಯರಲ್ಲಿ ಹೆಮ್ಮೆ ಮೂಡಿಸಿದೆ.
ನಿವೃತ್ತ ಸೇನಾಧಿಕಾರಿ ದಂಪತಿಗೆ ಸ್ವಾಗತ ನೀಡಲು ಸ್ಥಳೀಯ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು, ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಮೀಪದ ಸಿದ್ದಪ್ಪನ ಗುಡಿಯ ಬಳಿ ತೆರೆದ ವಾಹನದಲ್ಲಿ ಮೆರವಣಿಗೆ ಪ್ರಾರಂಭಗೊಂಡಿದ್ದು, ಡೊಳ್ಳು-ಕುಣಿತದ ಕಲಾ ತಂಡಗಳು ಮೆರವಣಿಗೆಯ ವೈಭವವನ್ನು ಮತ್ತಷ್ಟು ಹೆಚ್ಚಿಸಿತು.
ಮೆರವಣಿಗೆ ಬಳಿಕ ದಂಪತಿ ಇತಿಹಾಸ ಪ್ರಸಿದ್ಧ ಶ್ರೀ ಸಿದ್ದಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ವಿನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ನಾಗರಿಕರು ಹಾರ-ಶಾಲು ಹಾಕಿ ಎ. ಕುಮಾರ್ ಮತ್ತು ಪದ್ಮಾ ಕುಮಾರ್ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು.
ಪಕ್ಷಾತೀತವಾಗಿ ನಡೆದ ಈ ಸ್ವಾಗತ ಸಮಾರಂಭವು ರಿಪ್ಪನ್‌ಪೇಟೆಯ ಏಕತೆ ಮತ್ತು ದೇಶಭಕ್ತಿಯ ಪ್ರತೀಕವಾಗಿ ಹೊರಹೊಮ್ಮಿತು. ನಿವೃತ್ತ ಯೋಧರ ಸೇವೆಯನ್ನು ಕೊಂಡಾಡಿದ ಈ ಕಾರ್ಯಕ್ರಮ ಸ್ಥಳೀಯರಲ್ಲಿ ದೇಶಸೇವೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿತು.




