Headlines

ಗಾಳಿ ಮಳೆ ಆರ್ಭಟಕ್ಕೆ ಕಾಲೇಜಿನ ಸಭಾಂಗಣದ ಮೇಲ್ಚಾವಣಿ ನಾಶ – ಸ್ಥಳಕ್ಕೆ ಅಧಿಕಾರಿಗಳ ಭೇಟಿ

ಗಾಳಿ ಮಳೆ ಆರ್ಭಟಕ್ಕೆ ಕಾಲೇಜಿನ ಸಭಾಂಗಣದ ಮೇಲ್ಚಾವಣಿ ನಾಶ – ಸ್ಥಳಕ್ಕೆ ಅಧಿಕಾರಿಗಳ ಭೇಟಿ

Heavy wind and rain in Ripponpet caused severe damage as the roof of the Government PU College auditorium was blown away. Officials visited the spot and emergency repair work was initiated.

ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಶನಿವಾರ ಸಂಜೆ ಸುರಿದ ಭಾರಿ ಗಾಳಿ ಮಳೆ ಹಲವು ಅನಾಹುತಗಳಿಗೆ ಕಾರಣವಾಗಿದ್ದು, ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದ ಮೇಲ್ಚಾವಣಿ ಸಂಪೂರ್ಣವಾಗಿ ಕಿತ್ತುಹಾರಿದ ಘಟನೆ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಸೂಚನೆ ಮೇರೆಗೆ ಶಾಸಕರ ವಿಶೇಷ ಕರ್ತವ್ಯಾಧಿಕಾರಿ ಟಿ.ಪಿ. ರಮೇಶ್ ಹಾಗೂ ಆಪ್ತ ಸಹಾಯಕ ಸಣ್ಣಕ್ಕಿ ಮಂಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭಾರೀ ಗಾಳಿಯ ತೀವ್ರತೆಗೆ ಸಭಾಂಗಣದ ಮೇಲ್ಛಾವಣಿಗೆ ಅಳವಡಿಸಲಾಗಿದ್ದ ಶೀಟ್‌ಗಳು ಹಾಗೂ ಕಬ್ಬಿಣದ ಆಂಗಲರ್‌ಗಳು ಕಿತ್ತುಹಾರಿ ಕೆರೆಹಳ್ಳಿ ರಸ್ತೆಯ ಮೇಲೆ ಬಿದ್ದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರಸ್ತೆಯ ಮಧ್ಯಭಾಗದಲ್ಲಿ ಮೇಲ್ಚಾವಣಿಯ ಅವಶೇಷಗಳು ಬಿದ್ದಿದ್ದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ಸ್ಥಳೀಯರು ಕೂಡ ತಕ್ಷಣವೇ ರಸ್ತೆಯಲ್ಲಿ ಸಂಚಾರವನ್ನು ನಿಯಂತ್ರಿಸಿ ಸುರಕ್ಷತಾ ಕ್ರಮ ಕೈಗೊಂಡರು.

ಘಟನೆ ಸಂಭವಿಸಿದ ಸಮಯದಲ್ಲಿ ರಸ್ತೆಯಲ್ಲಿ ಸಾರ್ವಜನಿಕರು ಅಥವಾ ವಾಹನಗಳ ಸಂಚಾರ ಇರದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸದೇ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಕಾಲೇಜು ಆವರಣದಲ್ಲಿ ಸಹ ಕೆಲವೊಂದು ಮೂಲಸೌಕರ್ಯಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಿ ತುರ್ತು ಕಾಮಗಾರಿಗೆ ಚಾಲನೆ ನೀಡಿದರು. ಮೇಲ್ಚಾವಣಿಯ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯವನ್ನು ಕೂಡ ತಕ್ಷಣ ಆರಂಭಿಸಲಾಗಿದ್ದು, ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಭಾರಿ ಗಾಳಿ ಮಳೆಯಿಂದಾಗಿ ಪಟ್ಟಣದ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಹಾಗೂ ಮರಗಳು ಉರುಳಿದ ಘಟನೆಗಳೂ ವರದಿಯಾಗಿವೆ.

ಈ ಸಂಧರ್ಭದಲ್ಲಿ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಜಿ ಆರ್ ಗೋಪಾಲಕೃಷ್ಣ , ಗ್ರಾಪಂ ಮಾಜಿ ಸದಸ್ಯ ನಿರೂಪ್ ಕುಮಾರ್ , ಆಸೀಫ್ ಭಾಷಾ , ಸಿಡಿಸಿ ಸದಸ್ಯರಾದ ರಫಿ ರಿಪ್ಪನ್ ಪೇಟೆ , ನಾಗಪ್ಪ ಕಟ್ಟೆ , ಷಣ್ಮುಖ , ಬೋರಪ್ಪ ಬಿಳಿಕಿ ಹಾಗೂ ಇನ್ನಿತರರು ಇದ್ದರು.

About The Author

Exit mobile version