ರಿಪ್ಪನ್‌ಪೇಟೆಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಶೀಘ್ರವೇ ಪ್ರಸ್ತಾವನೆ: ವಿವಿಧ ಕಾಮಗಾರಿಗಳಿಗೆ ಶಾಸಕ ಬೇಳೂರು ಚಾಲನೆ
MLA Gopalakrishna Belur inaugurates ₹75 lakh development works in Ripponpet, announces plans to upgrade the Gram Panchayat to a Town Panchayat, and highlights the swift completion of ₹27 crore infrastructure projects by June.
ರಿಪ್ಪನ್‌ಪೇಟೆ: ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಜೊತೆಗೆ ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವ ಬಹು ದಿನಗಳ ಕನಸನ್ನು ಸಾಕಾರಗೊಳಿಸಲು ಶೀಘ್ರವೇ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಘೋಷಿಸಿದರು.
ಅವರು ಸಣ್ಣ ನೀರಾವರಿ ಇಲಾಖೆಯ ಯೋಜನೆಯಡಿ ಚಿಕ್ಕಜೇನಿ ಗ್ರಾ.ಪಂ. ವ್ಯಾಪ್ತಿಯ ಮುತ್ತಲ ಗ್ರಾಮದ ಬ್ಯಾರೇಜ್ ಬಳಿ 35 ಲಕ್ಷ ರೂ. ವೆಚ್ಚದ ಪ್ರವಾಹ ಸಂರಕ್ಷಣಾ ಕಾಮಗಾರಿ ಹಾಗೂ ರಿಪ್ಪನ್‌ಪೇಟೆ ಗ್ರಾ.ಪಂ. ವ್ಯಾಪ್ತಿಯ ಗವಟೂರು ತಾವರೆಕೆರೆಯಲ್ಲಿ 40 ಲಕ್ಷ ರೂ. ವೆಚ್ಚದ ಕೆರೆ ಹೂಳೆತ್ತುವ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಆದರ್ಶಗಳನ್ನು ಸ್ಮರಿಸಿದ ಶಾಸಕರು, “ಕೇವಲ ಅಭಿವೃದ್ಧಿ ಮಾಡುವುದು ಮಾತ್ರವಲ್ಲದೆ, ಬಡವರ ಕಣ್ಣೀರು ಒರೆಸಿ ಜನರ ಪ್ರೀತಿ-ವಿಶ್ವಾಸ ಗಳಿಸುವುದು ಮುಖ್ಯ. ಆ ಹಾದಿಯಲ್ಲಿ ನಡೆಯುತ್ತಿರುವ ನನಗೆ, ಜನರ ಪ್ರೀತಿಯ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೂ ಅನುದಾನದ ಯಾವುದೇ ಕೊರತೆಯಿಲ್ಲ” ಎಂದರು. ಅಲ್ಲದೆ, ಕೆರೆಗಳ ಹೂಳೆತ್ತುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಲಿದ್ದು, ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ಆಸರೆಯಾಗಲಿದೆ ಎಂದು ವಿವರಿಸಿದರು.
ರಿಪ್ಪನ್‌ಪೇಟೆ ಭಾಗದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು, ಮಾರುತಿಪುರ ಬಳಿ ವಿದ್ಯುತ್ ಗ್ರಿಡ್ ನಿರ್ಮಾಣ ಶೀಘ್ರವೇ ಉದ್ಘಾಟನೆಗೊಳ್ಳಲಿದೆ. ಎಡೆಹಳ್ಳಿಯಿಂದ ರಿಪ್ಪನ್‌ಪೇಟೆವರೆಗಿನ 10 ಕಿ.ಮೀ. ರಸ್ತೆ, ವಿನಾಯಕ ವೃತ್ತದ ಬಳಿ ನಾಲ್ಕು ಸಂಪರ್ಕ ರಸ್ತೆಗಳ ಅಗಲೀಕರಣ, ಡಿವೈಡರ್, ಒಳಚರಂಡಿ, ಪಾದಚಾರಿ ಮಾರ್ಗ ಹಾಗೂ ವಿದ್ಯುತ್ ದೀಪ ಅಳವಡಿಕೆಗೆ ಬರೋಬ್ಬರಿ 27 ಕೋಟಿ ರೂ. ಅನುದಾನ ತರಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, ಜೂನ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
“ಬೇರೆಯವರು ಮಾಡಿದ ಕಾಮಗಾರಿಯನ್ನು ನಾನು ಮಾಡಿಸಿದ್ದು ಎಂದು ಹೇಳಿಕೊಳ್ಳುವ ಚಾಳಿ ಈ ಬೇಳೂರಿಗೆ ಇಲ್ಲ” ಎಂದು ವಿರೋಧಿಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದ ಶಾಸಕರು, ಸರ್ಕಾರದ ಗ್ಯಾರಂಟಿ ಯೋಜನೆಗಳ ಹೊರೆಯ ನಡುವೆಯೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ. ಯಾವುದೇ ಜಾತಿ ಭೇದಭಾವವಿಲ್ಲದೆ ಜನಪರವಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ ಎಂದರು.
ಈ ಸಂದರ್ಭದಲ್ಲಿ ಹೊಸನಗರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ಚಂದ್ರಮೌಳಿಗೌಡ, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ್ ಹಾಗೂ ರಿಪ್ಪನ್‌ಪೇಟೆ ಮತ್ತು ಚಿಕ್ಕಜೇನಿ ಗ್ರಾಮ ಪಂಚಾಯಿತಿಗಳ ಹಾಲಿ, ಮಾಜಿ ಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಈದ್ ಮಿಲಾದ್ ಮೆರವಣಿಗೆ: ಪಾನೀಯ, ಕೇಕ್ ವಿತರಿಸಿ ಸೌಹಾರ್ದತೆ ಮೆರೆದ ಹಿಂದೂ ಸಂಘಟನೆ ಕಾರ್ಯಕರ್ತರು ರಿಪ್ಪನ್ ಪೇಟೆ : ಬಾಳಿನ…
ಸೆ.5ರ ಶಿಕ್ಷಕರ ದಿನಾಚರಣೆಗೆ ಗೈರು; ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಬಿಜೆಪಿ ಆರೋಪ BJP leaders in Sagar have…
ಯುವಶಕ್ತಿಯೇ ಎಚ್ಚೆತ್ತುಕೋ: ಈದ್ ಮಿಲಾದ್ ಸಂಭ್ರಮದಲ್ಲಿ ಮೊಳಗಿದ ‘ನಶಾಮುಕ್ತ ಭಾರತ’ ಸಂದೇಶ Ripponpete Police launched an anti-drug awareness…
ಅಂಗವಿಕಲ ಯುವಕನ ಸೈಟ್ ತೆರವಿಗೆ ಅರಣ್ಯ ಇಲಾಖೆ ಯತ್ನ – ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ, ಹೈಡ್ರಾಮಾ High drama…
ರಿಪ್ಪನ್ ಪೇಟೆ ಸಮೀಪದ ಅರಣ್ಯದಲ್ಲಿ ಕುಡುಮಲ್ಲಿಗೆ ಸೊಸೈಟಿ ಸಿಇಒ ನಾಪತ್ತೆ ರಹಸ್ಯವೇನು? ಅನಾಹುತವೋ, ಪಲಾಯನವೋ? ಮುಂದುವರಿದ ತೀವ್ರ ಶೋಧ! An…
ರಿಪ್ಪನ್‌ಪೇಟೆಯಲ್ಲಿ ಅರಣ್ಯಾಧಿಕಾರಿಗಳ ದಾಳಿ : 21 ಕೆ.ಜಿ. ಜಿಂಕೆ ಮಾಂಸ ವಶ, ಆರೋಪಿಗಳು ಪರಾರಿ Forest Flying Squad officials…