ಗಾಳಿ-ಮಳೆಗೆ ಅಡಿಕೆ ಬೆಳೆ ಹಾನಿ: ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಕೆಡಿಪಿ ಸಭೆಯಲ್ಲಿ ನಿರ್ಣಯ
ಶಿವಮೊಗ್ಗ, ಮೇ 22: ಜಿಲ್ಲೆಯ ಹೊಳೆಹೊನ್ನೂರು ಸೇರಿದಂತೆ ಹಲವು ಭಾಗಗಳಲ್ಲಿ ಇತ್ತೀಚೆಗೆ ಸುರಿದ ಭಾರಿ ಗಾಳಿ-ಮಳೆಯಿಂದ ಅಡಿಕೆ ಬೆಳೆಗಳಿಗೆ ಉಂಟಾದ ಹಾನಿಗೆ ಸರ್ಕಾರ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂದು ಜಿಲ್ಲಾ ಮಟ್ಟದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶುಕ್ರವಾರ ಜಿಪಂನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಡಿಕೆ ಮರಗಳು ಧರೆಗುರುಳಿದ ಪರಿಣಾಮ ಅನೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈ ಕುರಿತು ಸರ್ಕಾರದ ಗಮನ ಸೆಳೆಯಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಮಾತನಾಡಿ, ಮಳೆ-ಗಾಳಿ ಹಾನಿಗೆ ಎಕರೆಗೆ ರೂ.9 ಸಾವಿರ ಪರಿಹಾರ ನಿಗದಿ ಮಾಡಿರುವುದು ರೈತರಿಗೆ ಯಾವುದೇ ರೀತಿಯ ಸಹಾಯವಾಗುವುದಿಲ್ಲ. ಅಡಿಕೆ ಮರಗಳನ್ನು ಸಂಪೂರ್ಣ ಕಳೆದುಕೊಂಡ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಅಗತ್ಯ ಎಂದು ಒತ್ತಾಯಿಸಿದರು.
ಶಾಸಕಿ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಅಡಿಕೆ ಬೆಳೆ ಹಾನಿ ವಿಮೆ ವ್ಯಾಪ್ತಿಗೆ ಬರುತ್ತಿಲ್ಲ. ಆದ್ದರಿಂದ ಈ ಬೆಳೆಗೂ ವಿಮೆ ಸೌಲಭ್ಯ ಸೇರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಮಾತನಾಡಿ, ಗಾಳಿ-ಮಳೆಯಿಂದಾದ ಬೆಳೆ ಹಾನಿ ಕುರಿತು ಪರಿಹಾರ ಪೋರ್ಟಲ್‌ನಲ್ಲಿ ವರದಿ ದಾಖಲಿಸಲಾಗಿದ್ದು, ಮುಂದಿನ 15ರಿಂದ 20 ದಿನಗಳಲ್ಲಿ ಪರಿಹಾರ ಮಂಜೂರಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಅಡಿಕೆ ಬೆಳೆ ಹಾನಿಯ ಮೌಲ್ಯಮಾಪನ ಈಗಾಗಲೇ ಪೂರ್ಣಗೊಂಡಿದ್ದು, ಈ ವಿಷಯ ಮುಖ್ಯಮಂತ್ರಿ ಗಮನಕ್ಕೂ ತರಲಾಗಿದೆ. ತಾವು ಹಾಗೂ ಸಾಗರ ಶಾಸಕರು ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ ಮಾಡಿರುವುದಾಗಿ ಹೇಳಿದರು. ಜೊತೆಗೆ ಕೇಂದ್ರ ಸರ್ಕಾರದಿಂದಲೂ ವಿಶೇಷ ನೆರವು ಪಡೆಯಲು ಒತ್ತಾಯಿಸಲಾಗುವುದು ಎಂದರು.
ಈ ವೇಳೆ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮಲೆನಾಡು ಭಾಗದಲ್ಲಿ ಎಲೆಚುಕ್ಕಿ ರೋಗದಿಂದ ಅಡಿಕೆ ಬೆಳೆ ಗಂಭೀರವಾಗಿ ಹಾನಿಗೊಳಗಾಗಿದೆ. ಮೊದಲು 40 ಕ್ವಿಂಟಾಲ್ ಅಡಿಕೆ ಬೆಳೆಯುತ್ತಿದ್ದ ರೈತರು ಈಗ 4-5 ಕ್ವಿಂಟಾಲ್ ಮಾತ್ರ ಉತ್ಪಾದಿಸುವಂತಾಗಿದೆ. ಆದ್ದರಿಂದ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಚಿವರು ಪ್ರತಿಕ್ರಿಯಿಸಿ, ಎಲೆಚುಕ್ಕಿ ರೋಗ ನಿಯಂತ್ರಣ ಮತ್ತು ನಿರ್ಮೂಲನೆಗಾಗಿ ಸಂಶೋಧನೆಗಳು ನಡೆಯುತ್ತಿದ್ದು, ಮುಂದಿನ ವರ್ಷಕ್ಕೆ ಪರಿಣಾಮಕಾರಿ ಔಷಧಿ ಲಭ್ಯವಾಗುವ ನಿರೀಕ್ಷೆ ಇದೆ ಎಂದರು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ಸರ್ಕಾರ ಸಂಶೋಧನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಶೀಘ್ರದಲ್ಲೇ ಪರಿಹಾರೋಪಾಯ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಅತಿಥಿ ಶಿಕ್ಷಕರ ನೇಮಕಾತಿ ಕುರಿತೂ ಚರ್ಚೆ ನಡೆಯಿತು. ಪಿಯು ಕಾಲೇಜುಗಳಿಗೆ ಈಗಾಗಲೇ ಆದೇಶ ಹೊರಡಿಸಲಾಗಿದ್ದು, ಎಸ್‌ಎಸ್‌ಎಲ್‌ಸಿ ಶಾಲೆಗಳಿಗೂ ಆದೇಶ ನೀಡಲಾಗುವುದು ಎಂದು ಸಚಿವರು ಹೇಳಿದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಫಲಿತಾಂಶದಲ್ಲಿ ಜಿಲ್ಲೆಯ ಉತ್ತಮ ಸಾಧನೆಗೆ ಶಾಲಾ ಶಿಕ್ಷಣ ಸಚಿವರು ಹಾಗೂ ಜಿಪಂ ಸಿಇಒ ಕಾರ್ಯವೈಖರಿಯನ್ನು ಶಾಸಕರು ಅಭಿನಂದಿಸಿದರು.
ಸಭೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ , ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಸಿಇಒ ಹೇಮಂತ್ ಎನ್., ಎಎಸ್‌ಪಿ ಕಾರಿಯಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸಚಿವ ಸಂಪುಟದ ಖಾತೆ ಹಂಚಿಕೆ ಫೈನಲ್: ಹಿರಿಯ ಸಚಿವರ ಖಾತೆಗಳಲ್ಲೂ ಭಾರೀ ಬದಲಾವಣೆ!10 ದಿನಗಳ ಕುತೂಹಲಕ್ಕೆ ತೆರೆ - ಇಲ್ಲಿದೆ…
ರಸ್ತೆಯಲ್ಲೇ ಭತ್ತ ನಾಟಿ ಮಾಡಿ ಗ್ರಾಮಸ್ಥರ ಪ್ರತಿಭಟನೆ; ಹೆದ್ದಾರಿಪುರ ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹ Villagers protest by planting…
ಉಳ್ಳೂರು ಕೆರೆ ಬಳಿ ಮರಕ್ಕೆ ಢಿಕ್ಕಿ ಹೊಡೆದ ಕಂಟೇನರ್ ಲಾರಿ A container lorry lost control and collided…
ರಾಜ್ಯಾದ್ಯಂತ ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ತಂಬಾಕು–ನಿಕೋಟಿನ್ ಉತ್ಪನ್ನಗಳ ಸಂಪೂರ್ಣ ನಿಷೇಧ Karnataka government bans manufacture, storage, transport,…
ಕೆಂಚನಾಲ ಮಾರಿಕಾಂಬಾ ಜಾತ್ರಾ ಮಹೋತ್ಸವ: ಭಕ್ತಿಭಾವದ ಸಾಗರದಲ್ಲಿ ಮಿಂದೆದ್ದ ಭಕ್ತ ಸಮೂಹ Kenchanaala Marikamba Jatre was celebrated with…
ಹಸೆಮಣೆಗಿಂತ ವೃತ್ತಿಜೀವನಕ್ಕೆ ಆದ್ಯತೆ: ಬದಲಾಗುತ್ತಿರುವ ಭಾರತೀಯ ಮಹಿಳೆಯರ ಮನಸ್ಥಿತಿ! Changing trends among Indian women show a growing…