A heartbreaking incident in Shivamogga where a student appeared for SSLC exam despite his father’s death due to suicide caused by debt burden, drawing praise for his courage.
ಶಿವಮೊಗ್ಗ : ವೈಯಕ್ತಿಕ ದುಃಖದ ನಡುವೆಯೂ ತನ್ನ ಭವಿಷ್ಯಕ್ಕಾಗಿ ಹೋರಾಟ ಮುಂದುವರಿಸಿದ ವಿದ್ಯಾರ್ಥಿಯೊಬ್ಬನ ಕಥೆ ಜಿಲ್ಲೆಯಲ್ಲೆಲ್ಲ ಮನಮುಟ್ಟುವಂತೆ ಮಾಡಿದೆ. ತಾಲೂಕಿನ ದ್ಯಾವಿನಕೆರೆ ಗ್ರಾಮದಲ್ಲಿ ನಡೆದ ಈ ಘಟನೆ ಸಮಾಜದ ಗಮನ ಸೆಳೆದಿದೆ.
ದ್ಯಾವಿನಕೆರೆ ಗ್ರಾಮದ ನಿವಾಸಿ ಮಂಜುನಾಥ್ (45) ಅವರು ಸಾಲದ ಬಾಧೆಯಿಂದಾಗಿ ಎರಡು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಅವರು ರಾತ್ರಿ ಮೃತಪಟ್ಟಿದ್ದಾರೆ.
ಇದರಿಂದ ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದರೂ, ಅವರ ಪುತ್ರ ಪ್ರೀತಮ್ ತನ್ನ ವಿದ್ಯಾಭ್ಯಾಸದ ಮಹತ್ವವನ್ನು ಅರಿತು ಧೈರ್ಯದಿಂದ ಮುಂದೆ ಬಂದಿದ್ದಾನೆ. ತಂದೆಯ ಅಂತಿಮ ಕ್ಷಣಗಳ ನಡುವೆಯೂ ಮನಸ್ಸಿನ ನೋವನ್ನು ಮೀರಿ, ಇಂದು ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿದ್ದಾನೆ.
ಮಂಡಘಟ್ಟದಲ್ಲಿ ಅಭ್ಯಾಸ ಮಾಡುತ್ತಿದ್ದ ಪ್ರೀತಮ್, ಆಯನೂರಿನ ಶಾಲೆಗೆ ತೆರಳಿ ಪರೀಕ್ಷೆ ಬರೆದಿದ್ದಾನೆ. ತಂದೆಯ ಕಳೆದುಕೊಂಡ ದುಃಖದ ನಡುವೆಯೂ ಆತ ತೋರಿದ ಮನೋಬಲ ಹಾಗೂ ಹೊಣೆಗಾರಿಕೆಯು ಎಲ್ಲರ ಮನ ಗೆದ್ದಿದೆ.
ಈ ಘಟನೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಸಂಕಷ್ಟಗಳ ನಡುವೆಯೂ ಗುರಿ ಸಾಧನೆಗೆ ಮುಂದಾಗಬೇಕೆಂಬ ಸಂದೇಶ ನೀಡುತ್ತದೆ. ಪ್ರೀತಮ್‌ನ ಈ ಧೈರ್ಯಶಾಲಿ ನಡೆಗೆ ಶಿಕ್ಷಕರು, ಸ್ಥಳೀಯರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಯುವಕನ ಈ ಮನೋಬಲ ಹಾಗೂ ಸಂಕಷ್ಟದ ನಡುವೆಯೂ ವಿದ್ಯಾಭ್ಯಾಸದ ಮೇಲಿನ ಅವನ ಬದ್ಧತೆಯನ್ನು ಗಮನಿಸಿದ ಕಾಂಗ್ರೆಸ್ ಮುಖಂಡ ಸೂಡೂರು ಶಿವಣ್ಣ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂತಹ ಸಂದರ್ಭದಲ್ಲೂ ಪರೀಕ್ಷೆ ಬರೆಯಲು ಮುಂದಾದುದು ಎಲ್ಲ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.




