Headlines

300 ಚೀಲ ಅಕ್ಕಿ ಸಮೇತ ಲಾರಿ ಕಣ್ಮರೆ; ಚಾಲಕನ ವಿರುದ್ಧ ದೂರು ದಾಖಲು

300 ಚೀಲ ಅಕ್ಕಿ ಸಮೇತ ಲಾರಿ ಕಣ್ಮರೆ; ಚಾಲಕನ ವಿರುದ್ಧ ದೂರು ದಾಖಲು

A lorry carrying 300 bags of rice worth ₹4.20 lakh has gone missing in Bhadravathi. Police have registered a case against the driver after the consignment failed to reach two rice mills.

ಭದ್ರಾವತಿ: ರೈಸ್ ಮಿಲ್‌ಗಳಿಗೆ ತಲುಪಿಸಬೇಕಿದ್ದ ಸುಮಾರು ₹4.20 ಲಕ್ಷ ಮೌಲ್ಯದ 300 ಚೀಲ ಅಕ್ಕಿ ಲೋಡ್ ಸಮೇತ ಐಷರ್ (ಕ್ಯಾಂಟರ್) ವಾಹನ ನಾಪತ್ತೆಯಾಗಿರುವ ಘಟನೆ ಭದ್ರಾವತಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ವಾಹನ ಚಾಲಕನ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭದ್ರಾವತಿ ತಾಲೂಕಿನ ದೊಣಬಘಟ್ಟದ ವ್ಯಾಪಾರಿ ಎನ್. ಮಹಮ್ಮದ್ ಜಾಫರ್ ಅವರು ಈ ಕುರಿತು ದೂರು ದಾಖಲಿಸಿದ್ದಾರೆ. ಅವರು ಮಾಚೇನಹಳ್ಳಿಯ ಭಾರತೀಯ ಆಹಾರ ನಿಗಮದ (FCI) ಹರಾಜಿನಲ್ಲಿ ಅಕ್ಕಿಯನ್ನು ಖರೀದಿಸಿದ್ದರು.

ಜೂನ್ 3ರಂದು ದೊಣಬಘಟ್ಟದ ಗೋದಾಮಿನಿಂದ ಮಂಡ್ಯ ಜಿಲ್ಲೆಯ ತೂಬಿನಕೆರೆ ಗ್ರಾಮದ ಎಂ.ಎನ್. ಆಗ್ರೋ ರೈಸ್ ಮಿಲ್‌ಗೆ ₹2.80 ಲಕ್ಷ ಮೌಲ್ಯದ 200 ಚೀಲ ಅಕ್ಕಿ ಹಾಗೂ ಮೈಸೂರು ಜಿಲ್ಲೆಯ ಟಿ. ನರಸಿಪುರ ತಾಲೂಕಿನ ಬನ್ನೂರಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಮಾಡರ್ನ್ ರೈಸ್ ಮಿಲ್‌ಗೆ ₹1.40 ಲಕ್ಷ ಮೌಲ್ಯದ 100 ಚೀಲ ಅಕ್ಕಿಯನ್ನು ಬೆಂಗಳೂರಿನ ಕ್ಯಾಂಟರ್ ವಾಹನದ ಚಾಲಕ ಪ್ರೇಮಕುಮಾರ್ನ ವಾಹನದಲ್ಲಿ ಲೋಡ್ ಮಾಡಿ ಕಳುಹಿಸಲಾಗಿತ್ತು.

ಮರುದಿನ ಬೆಳಿಗ್ಗೆ ಚಾಲಕನನ್ನು ಸಂಪರ್ಕಿಸಿದಾಗ ವಾಹನ ಕೆಟ್ಟುಹೋಗಿದ್ದು, ದುರಸ್ತಿ ಮಾಡಿಸಿಕೊಂಡು ತೆರಳುವುದಾಗಿ ತಿಳಿಸಿದ್ದಾನೆ. ಆದರೆ ಸಂಜೆ ವೇಳೆಗೆ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಬಳಿಕ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ.

ರೈಸ್ ಮಿಲ್‌ಗಳಿಗೆ ಅಕ್ಕಿ ತಲುಪದ ಹಿನ್ನೆಲೆಯಲ್ಲಿ ವಾಹನ ಹಾಗೂ ಚಾಲಕನಿಗಾಗಿ ಹುಡುಕಾಟ ನಡೆಸಿದ ವ್ಯಾಪಾರಿ ಮಹಮ್ಮದ್ ಜಾಫರ್, ಕೊನೆಗೆ ಚಾಲಕ ಪ್ರೇಮಕುಮಾರ್ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಾಹನ ಹಾಗೂ ಚಾಲಕನ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

About The Author

Exit mobile version