Headlines

ಲಕ್ಕಿ ಡ್ರಾ ವಿಳಂಬ: ಶೀಘ್ರದಲ್ಲೇ ಸಾರ್ವಜನಿಕರ ಸಮ್ಮುಖದಲ್ಲಿ ಪಾರದರ್ಶಕ ಡ್ರಾ – ಕಲಾ ಕೌಸ್ತುಭ ಕನ್ನಡ ಸಂಘ ಸ್ಪಷ್ಟನೆ

Kalakaustubha Kannada Sangha clarifies delay in lucky draw event in Ripponpet, assures transparent draw to be conducted soon in presence of public and members.

ರಿಪ್ಪನ್ ಪೇಟೆ : ಪಟ್ಟಣದ ಕಲಾ ಕೌಸ್ತುಭ ಕನ್ನಡ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಲಕ್ಕಿ ಡ್ರಾ ಕಾರ್ಯಕ್ರಮವು ನಿಗದಿತ ವೇಳೆಗೆ ನಡೆಯದೇ ವಿಳಂಬವಾಗಿರುವ ಕುರಿತು ಸಂಘದ ಅಧ್ಯಕ್ಷ ಮುರುಳಿಧರ್ ಕೆರೆಹಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಬಳೆಗಾರ್ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಲಾ ಕೌಸ್ತುಭ ಕನ್ನಡ ಸಂಘವು ಕಳೆದ 32 ವರ್ಷಗಳಿಂದ ನಿರಂತರವಾಗಿ ಕನ್ನಡ ಸೇವೆಯಲ್ಲಿ ತೊಡಗಿಸಿಕೊಂಡು, ಅನೇಕ ಕನ್ನಡಪರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ. ಸಮಾಜದ ಮುಂದೆ ತೆಗೆದುಕೊಂಡ ಜವಾಬ್ದಾರಿಗಳನ್ನು ಯಾವತ್ತೂ ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ಸಂಘದ ಪ್ರತಿಯೊಂದು ಕಾರ್ಯದಲ್ಲೂ ನಿಷ್ಠೆ ಮತ್ತು ಪಾರದರ್ಶಕತೆ ಪಾಲಿಸಲಾಗುತ್ತಿದೆ. ಇದರ ಫಲವಾಗಿ ರಿಪ್ಪನ್ ಪೇಟೆ ವ್ಯಾಪ್ತಿಯಲ್ಲಿ ಸಂಘವು ತನ್ನದೇ ಆದ ಗೌರವಾನ್ವಿತ ಸ್ಥಾನವನ್ನು ನಿರ್ಮಿಸಿಕೊಂಡಿದ್ದು, ಸಾರ್ವಜನಿಕರ ವಿಶ್ವಾಸವನ್ನು ಗಳಿಸಿದೆ. ಈ ವಿಶ್ವಾಸವೇ ನಮ್ಮ ಶಕ್ತಿ ಆಗಿದ್ದು, ಮುಂದಿನ ದಿನಗಳಲ್ಲಿಯೂ ಅದನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಂಘ ಬದ್ಧವಾಗಿದೆ,” ಎಂದು ಹೇಳಿದರು.

ಇನ್ನೂ 2024ರಲ್ಲಿ ಸಂಘದ ವತಿಯಿಂದ ಲಾಟರಿ ಯೋಜನೆಯನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ವಿನಾಯಕ ವೃತ್ತದಲ್ಲಿ ಡ್ರಾ ನಡೆಸಿ, ವಿಜೇತರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಂದ ಬೈಕ್ ಬಹುಮಾನ ವಿತರಿಸಲಾಗಿತ್ತು,” ಎಂದು ಹೇಳಿದರು.

“ಕಳೆದ ನವೆಂಬರ್ 28, 29 ಮತ್ತು 30ರಂದು 70ನೇ ಕನ್ನಡ ರಾಜ್ಯೋತ್ಸವವನ್ನು ಯಶಸ್ವಿಯಾಗಿ ಆಚರಿಸಿದ್ದೇವೆ. ಆ ಸಂಭ್ರಮದ ಅಂಗವಾಗಿ ಲಕ್ಕಿ ಡ್ರಾ ಯೋಜನೆಯನ್ನು ಪ್ರಕಟಿಸಿ, ಟಿಕೆಟ್ ದರವನ್ನು 100 ರೂಪಾಯಿಗಳಿಗೆ ನಿಗದಿ ಮಾಡಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಟಿಕೆಟ್ ಮಾರಾಟವಾಗದೇ ಕೆಲವೇ ಟಿಕೆಟ್‌ಗಳು ಮಾರಾಟವಾದ ಹಿನ್ನೆಲೆಯಲ್ಲಿ ಮಾರಾಟ ಪ್ರಕ್ರಿಯೆಯನ್ನು ಮುಂದುವರಿಸಬೇಕಾಯಿತು. ಈ ಕಾರಣದಿಂದ ನಿಗದಿತ ಸಮಯದಲ್ಲಿ ಡ್ರಾ ನಡೆಸಲು ಸಾಧ್ಯವಾಗಿಲ್ಲ,” ಎಂದು ವಿವರಿಸಿದರು.

“ಯುಗಾದಿ ದಿನದಂದು ಡ್ರಾ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕೆಲವರು ಠಾಣೆಗೆ ದೂರು ಸಲ್ಲಿಸಿದ ಹಿನ್ನೆಲೆ ಡ್ರಾ ಪ್ರಕ್ರಿಯೆಯನ್ನು ಮುಂದೂಡಬೇಕಾಯಿತು. ಈಗ ಸಂಘದ ಸಭೆಯಲ್ಲಿ ಈ ತಿಂಗಳ 31ರೊಳಗೆ ಡ್ರಾ ನಡೆಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ನಿಖರ ದಿನಾಂಕವನ್ನು ಪ್ರಕಟಿಸಲಾಗುತ್ತದೆ. ಸಾರ್ವಜನಿಕರು ಹಾಗೂ ಸಂಘದ ಸದಸ್ಯರ ಸಮ್ಮುಖದಲ್ಲಿ ಪಾರದರ್ಶಕವಾಗಿ ಡ್ರಾ ನಡೆಸಲಾಗುವುದು,” ಎಂದು ಹೇಳಿದರು.

ಸಂಘದ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಾರದರ್ಶಕವಾಗಿ ಹಾಗೂ ನಿಯಮಾನುಸಾರ ಡ್ರಾ ನಡೆಸಲು ಬದ್ಧರಾಗಿದ್ದೇವೆ. ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗದೇ ಸಹಕಾರ ನೀಡುವಂತೆ ಮನವಿ ಮಾಡಿರುವ ಸಂಘದ ಪದಾಧಿಕಾರಿಗಳು, ಶೀಘ್ರದಲ್ಲೇ ಅಂತಿಮ ದಿನಾಂಕ ಘೋಷಿಸಿ ಡ್ರಾ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಸಲಹಾ ಸಮಿತಿ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

About The Author

Exit mobile version