ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕೆಂದು ಡೆತ್ ನೋಟ್ ಬರೆದು ಯುವಕ ಆತ್ಮಹತ್ಯೆ
A 21-year-old youth Rakesh committed suicide at his residence Shivamogga district. In his death note, he advised changes in the education system and urged that actor Yash’s life journey be taught to children as an inspirational lesson.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕೈಸೋಡಿ ಗ್ರಾಮದಲ್ಲಿ 21 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಡೆತ್ ನೋಟ್‌ನಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕೆಂದು ಮನವಿ ಮಾಡಿದ್ದ ಯುವಕ, ನಟ ಯಶ್ ಅವರ ಜೀವನ ಹಾದಿಯನ್ನು ಮಕ್ಕಳಿಗೆ ಪಾಠವಾಗಿ ನೀಡಬೇಕು ಎಂಬ ಸಲಹೆಯನ್ನೂ ಉಲ್ಲೇಖಿಸಿದ್ದಾನೆ.
ಮೃತ ಯುವಕನನ್ನು ಕೈಸೋಡಿಯ ರಾಕೇಶ್ (21) ಎಂದು ಗುರುತಿಸಲಾಗಿದೆ.
ಪದವಿ ವ್ಯಾಸಂಗ ಮುಗಿಸಿದ ಬಳಿಕ ಸರ್ಕಾರಿ ಉದ್ಯೋಗ ಪಡೆಯುವ ಉದ್ದೇಶದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತೀವ್ರ ಸಿದ್ಧತೆ ನಡೆಸುತ್ತಿದ್ದನು. ಈ ನಡುವೆ ಮಾನಸಿಕ ಅನಾರೋಗ್ಯದಿಂದಲೂ ಬಳಲುತ್ತಿದ್ದನು ಎನ್ನಲಾಗಿದೆ.
ಇಂದು ಮುಂಜಾನೆ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ರಾಕೇಶ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ವಿಷಯ ತಿಳಿದ ಕುಟುಂಬಸ್ಥರು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದಾಗ, ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಕಾರ್ಯವನ್ನು ನಿಲ್ಲಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪಾರ್ಥೀವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ರಾಕೇಶ್ ಉಮೇಶ್ ಹಾಗೂ ಗೀತಾ ದಂಪತಿಗಳ ಕಿರಿಯ ಪುತ್ರನಾಗಿದ್ದು, ಮನೆತನದ ಕೊನೆಯ ಮಗ. ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳಿದ್ದು, ಓರ್ವರಿಗೆ ವಿವಾಹವಾಗಿದ್ದು ಮತ್ತೊಬ್ಬರಿಗೆ ಇನ್ನೂ ವಿವಾಹವಾಗಬೇಕಿದೆ. ವ್ಯಾಸಂಗದಲ್ಲಿ ಮುಂದಿದ್ದ ರಾಕೇಶ್, ಸರ್ಕಾರಿ ಉದ್ಯೋಗ ಪಡೆಯುವ ಕನಸಿನಲ್ಲಿದ್ದನು.
ಡೆತ್ ನೋಟ್‌ನಲ್ಲಿ ಆತ ಹೇಳಿದ್ದೇನು?
ಆನ್‌ಲೈನ್ ಮೂಲಕ ಮಾನಸಿಕ ಮಾರ್ಗದರ್ಶನ ಹಾಗೂ ವಾಟ್ಸ್ಆಪ್‌ನಲ್ಲಿ ಪಡೆದ ಮೆಂಟಲ್ ಸಪೋರ್ಟ್ ತನ್ನ ಚಿಂತನೆ ಮತ್ತು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸಿದೆ ಎಂದು ರಾಕೇಶ್ ಡೆತ್ ನೋಟ್‌ನಲ್ಲಿ ಬರೆದಿದ್ದಾನೆ. “ಯಾರೂ ಆನ್‌ಲೈನ್ ಮೆಂಟಲ್ ಸಪೋರ್ಟ್ ಮೇಲೆ ಸಂಪೂರ್ಣ ಅವಲಂಬಿಸಬೇಡಿ” ಎಂದು ಎಲ್ಲಾ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾನೆ.
ಇದಕ್ಕೆ ಜೊತೆಗೆ, ಪ್ರಸ್ತುತ ಶಿಕ್ಷಣ ವ್ಯವಸ್ಥೆ ಮಕ್ಕಳ ಪ್ರತಿಭೆಯನ್ನು ಗುರುತಿಸುವಲ್ಲಿ ವಿಫಲವಾಗುತ್ತಿದೆ ಎಂದು ಆತ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಸಾಮರ್ಥ್ಯ ಮತ್ತು ಆಸಕ್ತಿಯನ್ನು ಗುರುತಿಸಿ, ಅವರ ಇಷ್ಟದ ಕ್ಷೇತ್ರದಲ್ಲೇ ಮುಂದುವರಿಯಲು ಪ್ರೋತ್ಸಾಹ ನೀಡಬೇಕು. ನಟ ಯಶ್ ಅವರು ಕಷ್ಟಪಟ್ಟು ಬಂದ ಹಾದಿಯನ್ನು ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ಪಾಠ ರೂಪದಲ್ಲಿ ಶಾಲಾ ಮಕ್ಕಳಿಗೆ ನೀಡಬೇಕು ಎಂದು ವಿಶೇಷವಾಗಿ ಸಲಹೆ ನೀಡಿದ್ದಾನೆ.
“ಕಷ್ಟಪಟ್ಟು ಓದು, ದೊಡ್ಡ ಕೆಲಸ ಮಾಡು ಎಂದು ಚಿಕ್ಕ ಮಕ್ಕಳ ಮೇಲೆ ಒತ್ತಡ ಹೇರಬಾರದು. ಹಣಕ್ಕಾಗಿ ಮಾತ್ರ ಓದುವುದನ್ನು ನಿಲ್ಲಿಸಬೇಕು. ಮಕ್ಕಳ ಆಸೆ, ಪ್ರತಿಭೆಗೆ ತಕ್ಕ ಶಿಕ್ಷಣ ನೀಡಬೇಕು” ಎಂದು ಡೆತ್ ನೋಟ್‌ನಲ್ಲಿ ರಾಕೇಶ್ ಮನಮುಟ್ಟುವ ರೀತಿಯಲ್ಲಿ ಉಲ್ಲೇಖಿಸಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



