Headlines

ಕುಡಿದ ಮತ್ತಿನ ಜಗಳ ವಿಕೋಪಕ್ಕೆ: ಮಗನನ್ನೇ ಮಚ್ಚಿನಿಂದ ಕೊಚ್ಚಿ ಕೊಂದ ತಂದೆ

ಕುಡಿದ ಮತ್ತಿನ ಜಗಳ ವಿಕೋಪಕ್ಕೆ: ಮಗನನ್ನೇ ಮಚ್ಚಿನಿಂದ ಕೊಚ್ಚಿ ಕೊಂದ ತಂದೆ – ಮೂಡಿಗೆರೆಯಲ್ಲಿ ಭೀಕರ ಘಟನೆ

tragic incident reported from Anegundi village of Mudigere taluk, Chikkamagaluru district where a father killed his own son with a machete after a drunken fight. Full details inside.

ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ತಂದೆ–ಮಗನ ನಡುವೆ ನಡೆದ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯಗೊಂಡ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ 29 ವರ್ಷದ ಪ್ರದೀಪ್ ಆಚಾರ್ ಮೃತಪಟ್ಟ ದುರ್ದೈವಿಯಾಗಿದ್ದು, ತಂದೆ ರಮೇಶ್ ಆಚಾರ್ ತನ್ನ ಮಗನನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಆರೋಪ ಎದುರಿಸುತ್ತಿದ್ದಾರೆ.
ಮೂಲಗಳ ಮಾಹಿತಿ ಪ್ರಕಾರ, ರಮೇಶ್ ಆಚಾರ್ ಮತ್ತು ಪ್ರದೀಪ್ ಇಬ್ಬರೂ ಕುಡಿತದ ಚಟಕ್ಕೆ ಒಳಗಾಗಿದ್ದವರು. ಮನೆಯಲ್ಲಿ ಪ್ರತಿದಿನವೂ ಇವರಿಬ್ಬರ ನಡುವೆ ಜಗಳ ಸಾಮಾನ್ಯವಾಗಿತ್ತು. ನಿರಂತರ ಕಿತ್ತಾಟದಿಂದ ಬೇಸತ್ತಿದ್ದ ತಾಯಿ ಕೆಲ ತಿಂಗಳ ಹಿಂದೆಯೇ ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದೆ.

ಎಂದಿನಂತೆ ನಿನ್ನೆ ರಾತ್ರಿ ಸಹ ಇಬ್ಬರ ನಡುವೆ ಸಣ್ಣ ಕಾರಣಕ್ಕೆ ಮಾತಿನ ಚಕಮಕಿ ಶುರುವಾಗಿದೆ. ಜಗಳ ತೀವ್ರ ಸ್ವರೂಪ ಪಡೆದುಕೊಂಡಾಗ ತಂದೆ ರಮೇಶ್ ಆಚಾರ್ ಆಕ್ರೋಶದಿಂದ ಮಗ ಪ್ರದೀಪ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ಪ್ರದೀಪ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಹತ್ಯೆಯ ನಂತರ ಆರೋಪಿಯಾದ ತಂದೆ, ಮಗನ ಮೃತದೇಹವನ್ನು ಮನೆಯ ಹಾಲ್‌ನಿಂದ ವರಾಂಡಕ್ಕೆ ಎಳೆದು ತಂದು ಹಾಕಿರುವುದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಇದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ತಕ್ಷಣವೇ ಬಾಳೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೀತೇಂದ್ರ ಕುಮಾರ್ ದಯಾಮ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ.

ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯುವ ಹಾಗೂ ಮುಂದಿನ ಕಾನೂನು ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ.

Exit mobile version