ಪೊಕ್ಸೋ ಪ್ರಕರಣ | ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ – ಮೂವರಿಗೆ ತಲಾ 20 ವರ್ಷ ಕಾರಾಗೃಹ ಶಿಕ್ಷೆ
POCSO case | Sexual assault of minor girl – Three sentenced to 20 years in prison each
ಶಿವಮೊಗ್ಗ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಅನಧಿಕೃತ ಹೋಂಸ್ಟೇಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಮೂವರು ಆರೋಪಿತರಿಗೆ ಪೊಕ್ಸೋ ವಿಶೇಷ ನ್ಯಾಯಾಲಯ ತಲಾ 20 ವರ್ಷ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ. ಜೊತೆಗೆ ಮೊದಲ ಆರೋಪಿ ಮೇಲೆ 71 ಸಾವಿರ ರೂ. ದಂಡ ಹಾಗೂ ಎರಡನೇ ಮತ್ತು ಮೂರನೇ ಆರೋಪಿಗಳ ಮೇಲೆ ತಲಾ 10 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.
ಈ ಘಟನೆ 2023ರಲ್ಲಿ ಸಾಗರದಲ್ಲಿ ನಡೆದಿತ್ತು. ಬಾಲಕಿಯ ಕೈ ಹಿಡಿದು ಎಳೆದು ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಠಿಣ ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ತನಿಖೆಯನ್ನು ನಡೆಸಿದ್ದ ಅಂದಿನ ಡಿಎಸ್ಪಿ ಗೋಪಾಲಕೃಷ್ಣ ನಾಯಕ್ ಅವರು ಸಲ್ಲಿಸಿದ ವರದಿಯಲ್ಲಿ, ಲೈಂಗಿಕ ದೌರ್ಜನ್ಯ ಎಸಗಿದ ಮುಖ್ಯ ಆರೋಪಿ ಮಾತ್ರವಲ್ಲದೆ, ಯಾತ್ರಿ ನಿವಾಸದಲ್ಲಿ ತಂಗಲು ಬಂದ ಆರೋಪಿಗೆ ಯಾವುದೇ ಸೂಕ್ತ ದಾಖಲೆಗಳನ್ನು ಪಡೆಯದೇ, ಅಪ್ರಾಪ್ತ ವಯಸ್ಸಿನ ಬಾಲಕಿಯ ವಯಸ್ಸು ಪರಿಶೀಲನೆ ಮಾಡದೇ ಪದೇಪದೇ ಉಳಿಯಲು ಅವಕಾಶ ನೀಡಿದ್ದ ಅನಧಿಕೃತ ಹೋಂಸ್ಟೇ ಮಾಲಿಕ (58) ಹಾಗೂ 24 ವರ್ಷದ ರೂಮ್ ಬಾಯ್ ಕೂಡ ಅಪರಾಧಕ್ಕೆ ಸಹಕಾರ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಉಲ್ಲೇಖಿಸಿದ್ದರು.
ತನಿಖೆಯ ಆಧಾರದಲ್ಲಿ ವಿಚಾರಣೆ ನಡೆಸಿದ ಪೊಕ್ಸೋ ನ್ಯಾಯಾಧೀಶ ನಿಂಗನಗೌಡ ಭಿ. ಪಾಟೀಲ್ ಅವರು ಆರೋಪಿಗಳ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಶನಿವಾರ ಶಿಕ್ಷೆಯನ್ನು ಪ್ರಕಟಿಸಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶ್ರೀಧರ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಈ ತೀರ್ಪು ಅಪ್ರಾಪ್ತರ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಯುವಲ್ಲಿ ಕಠಿಣ ಕ್ರಮಗಳ ಅಗತ್ಯತೆಯನ್ನು ಮತ್ತೊಮ್ಮೆ ಒತ್ತಿ ಹೇಳಿದೆ.



