January 11, 2026

ಶಿವಮೊಗ್ಗದಲ್ಲಿ ಬಾಣಂತಿ ಸಾವು – ವೈದ್ಯರ ನಿರ್ಲಕ್ಷ್ಯ ಆರೋಪ, ಕುಟುಂಬಸ್ಥರ ಆಕ್ರೋಶ

ಶಿವಮೊಗ್ಗದಲ್ಲಿ ಬಾಣಂತಿ ಸಾವು – ವೈದ್ಯರ ನಿರ್ಲಕ್ಷ್ಯ ಆರೋಪ, ಕುಟುಂಬಸ್ಥರ ಆಕ್ರೋಶ

ಶಿವಮೊಗ್ಗ: ಮೆಗ್ಗಾನ್‌ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿಯೊಬ್ಬರು ಸಾವನ್ನಪ್ಪಿದ ಪ್ರಕರಣ ಬೆಳಕಿಗೆ ಬಂದಿದೆ. ಚಿಕಿತ್ಸೆ ಫಲಕಾರಿಯಾಗದೆ 26 ವರ್ಷದ ನೂರ್ ಅಪ್ ಶಾ ಅವರು ಮೃತಪಟ್ಟಿದ್ದಾರೆ. ಈ ಕುರಿತು ಮೃತ ಮಹಿಳೆಯ ಕುಟುಂಬ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ನವಂಬರ್ 21ರಂದು ನೂರ್ ಅಪ್ ಶಾ ಅವರು ಶಸ್ತ್ರಚಿಕಿತ್ಸೆ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಅಪರೇಷನ್ ವೇಳೆ ವೈದ್ಯರು ಎಡವಟ್ಟಿಗೆ ಒಳಗಾಗಿದ್ದಾರೆ ಎಂಬ ಆರೋಪ ಕುಟುಂಬದಿಂದ ಕೇಳಿಬಂದಿದೆ. ಶಸ್ತ್ರಚಿಕಿತ್ಸೆಯ ನಂತರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಹೊಟ್ಟೆಯೂ ಅಸಹಜವಾಗಿ ದಪ್ಪವಾಗತೊಡಗಿತ್ತು. ಮಲವಿಸರ್ಜನೆ ಆಗದೆ ಅವರು ತೀವ್ರವಾಗಿ ಪರದಾಡಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ನಂತರ ಮಲ ವಾಂತಿಯ ರೂಪದಲ್ಲಿ ಬೇಧಿ ಆರಂಭಗೊಂಡು, ಒಂದು ವಾರಕ್ಕೂ ಹೆಚ್ಚು ಕಾಲ ಮಲವಿಸರ್ಜನೆ ಆಗದ ಸ್ಥಿತಿಯಲ್ಲಿ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಎರಡನೇ ಅಪರೇಷನ್‌ನಲ್ಲೂ ವೈದ್ಯರ ನಿರ್ಲಕ್ಷ್ಯ ಮುಂದುವರಿದ ಕಾರಣ ಮಹಿಳೆ ಮೃತಪಟ್ಟಿದ್ದಾರೆ ಎಂಬ ಗಂಭೀರ ಆರೋಪ ಕುಟುಂಬದಿಂದ ಮಾಡಲಾಗಿದೆ.

ಮೃತ ನೂರ್ ಅಪ್ ಶಾ ಅವರಿಗೆ ಮೂರು ವರ್ಷದ ಹೆಣ್ಣುಮಗು ಮತ್ತು ನವಜಾತ ಗಂಡು ಮಗು ಇದ್ದು, ಅವರ ಅಕಾಲಿಕ ನಿಧನದಿಂದ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯರ ವಿರುದ್ಧ ದೊಡ್ಡಪೇಟೆ ಪಿಐಗೆ ಅಧಿಕೃತ ದೂರು ಸಲ್ಲಿಸಲಾಗಿದೆ.

About The Author

Exit mobile version