Headlines

ರಾಜ್ಯದಲ್ಲಿ ಮಹಿಳೆಯರು, ಮಕ್ಕಳ ಸುರಕ್ಷತೆಗೆ ‘ಅಕ್ಕ ಪಡೆ’ ರಚನೆ – ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ !? ಈ ಸುದ್ದಿ ನೋಡಿ

ರಾಜ್ಯದಲ್ಲಿ ಮಹಿಳೆಯರು, ಮಕ್ಕಳ ಸುರಕ್ಷತೆಗೆ ‘ಅಕ್ಕ ಪಡೆ’ ರಚನೆ – ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ !? ಈ ಸುದ್ದಿ ನೋಡಿ

ಬೆಂಗಳೂರು:ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ‘ಅಕ್ಕ ಪಡೆ’ ಹೆಸರಿನ ಭದ್ರತಾ ಪಡೆಗೆ ರಾಜ್ಯ ಸರ್ಕಾರ ಇಂದು ಚಾಲನೆ ನೀಡಿತು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾದ ಮಹಿಳಾ ಮತ್ತು‌ ಮಕ್ಕಳ ಕಲ್ಯಾಣ ಇಲಾಖೆಯ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೇತೃತ್ವದಲ್ಲಿ ಅಕ್ಕ ಪಡೆಗೆ ಚಾಲನೆ ನೀಡಿದರು.

ಈ ಯೋಜನೆಯ ಮೂಲಕ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಮತ್ತು ತುರ್ತು ಸಂದರ್ಭಗಳಲ್ಲಿ ತಕ್ಷಣದ ಬೆಂಬಲ ನೀಡಲು ಸಾಧ್ಯವಾಗಲಿದೆ. ಮೊದಲ ಹಂತದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳು, ಇತರೆ ಜಿಲ್ಲೆಗಳಾದ ಉಡುಪಿ, ಮಂಗಳೂರು, ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ನಂತರ ಇತರೆ ಜಿಲ್ಲೆಗಳಿಗೂ ವಿಸ್ತರಣೆಯಾಗಲಿದೆ.

ಅಕ್ಕ ಪಡೆ ಹೇಗೆ ಕೆಲಸ ಮಾಡುತ್ತದೆ?:

ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯಗಳ ನಿಗ್ರಹ, ಕಾನೂನಿನ ಕುರಿತು ಜಾಗೃತಿ ಮೂಡಿಸಲು ಅಕ್ಕ ಪಡೆಯನ್ನು ರಚಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೇತೃತ್ವದ ಈ ಉಪಕ್ರಮದಲ್ಲಿ ಪ್ರತಿ ಪಡೆಯಲ್ಲಿ ತರಬೇತಿ ಪಡೆದ ಪೊಲೀಸ್ ಸಿಬ್ಬಂದಿ ಮತ್ತು ಎನ್‌ಸಿಸಿ ಕೆಡೆಟ್‌ಗಳಿರಲಿದ್ದಾರೆ. ಈ ತಂಡ ಬಸ್ ನಿಲ್ದಾಣ, ಕಾಲೇಜು, ಹಾಸ್ಟೆಲ್, ಮಾಲ್‌ಗಳು ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಲಿದೆ.

ಅಷ್ಟೇ ಅಲ್ಲದೆ, ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ, ಸಂಚಾರ ನಿಯಮಗಳು, ಮಾದಕ ಪದಾರ್ಥಗಳ ಬಳಕೆಯ ಪರಿಣಾಮಗಳು, ತುರ್ತು ಸಹಾಯವಾಣಿಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವುದು, ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವುದು, ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ತ್ವರಿತಗತಿಯಲ್ಲಿ ಬೆಂಬಲ ನೀಡುವುದು ಅಕ್ಕ ಪಡೆಯ ಮೂಲ ಉದ್ದೇಶ. ಅಲ್ಲದೇ ಸಮಾಜದಲ್ಲಿ ಸಹಾನುಭೂತಿ, ಸೇವಾ ಮನೋಭಾವನೆ ಹೊಂದಿರುವ ಮಹಿಳೆಯರಿಗೆ ವೇದಿಕೆ ಕಲ್ಪಿಸುವುದೂ ಸಹ ಅಕ್ಕ ಪಡೆಯ ಉದ್ದೇಶವಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

2023ರಲ್ಲಿ ಪ್ರಾಯೋಗಿಕವಾಗಿ ಈ ಪಡೆಯನ್ನು ಬೀದರ್‌ನಲ್ಲಿ ಪ್ರಾರಂಭಿಸಲಾಗಿತ್ತು. ಸಾರ್ವಜನಿಕ ಉಪಸ್ಥಿತಿ ಹಾಗೂ ತ್ವರಿತ ಪ್ರತಿಕ್ರಿಯೆ ಮೂಲಕ ಯೋಜನೆ ಯಶಸ್ವಿಯಾದ ಬಳಿಕ ರಾಜ್ಯದ ಇತರೆ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತಿದೆ. ಪೊಲೀಸ್ ಇಲಾಖೆಯ ಹೊಯ್ಸಳ ಗಸ್ತು ಮಾದರಿಯಲ್ಲಿ ಅಕ್ಕ ಪಡೆಗಳೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 7ರ ವರೆಗೆ ಗಸ್ತು ತಿರುಗಲಿವೆ. ಈ ಕಾರ್ಯಾಚರಣೆಗಾಗಿ ಹೊಯ್ಸಳ ವಾಹನಗಳ ಮಾದರಿಯಲ್ಲಿ ಮಾರ್ಪಾಡು ಮಾಡಿದ ವಾಹನಗಳನ್ನು ಬಳಸಲಾಗುತ್ತದೆ. ಪ್ರತಿ ಪಡೆಯು 35-45ರ ವಯೋಮಾನದ ಆರರಿಂದ ಹತ್ತು ಸದಸ್ಯರಿರಲಿದ್ದು, ಇವರಲ್ಲಿ ಕನಿಷ್ಠ ಇಬ್ಬರು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳು ಮತ್ತು ತರಬೇತಿ ಪಡೆದ ಎನ್‌ಸಿಸಿ ಕೆಡೆಟ್‌ಗಳಿರುತ್ತಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು, ಮಕ್ಕಳನ್ನು ಚುಡಾಯಿಸುವ, ಅಸಭ್ಯವಾಗಿ ವರ್ತಿಸುವವರ ಮೇಲೆ ಕಣ್ಣಿಡಲಿರುವ‌ ಅಕ್ಕ ಪಡೆ, ಅಗತ್ಯವಿದ್ದಲ್ಲಿ ಅಂಥ ವ್ಯಕ್ತಿಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುತ್ತದೆ. ಅಕ್ಕ ಪಡೆಯ ಸದಸ್ಯರಿಗೆ ಜಿಲ್ಲಾ ಎಸ್​​ಪಿ, ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಹಿಂಸಾಚಾರ ಪ್ರಕರಣಗಳ ನಿರ್ವಹಣೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವುದೂ ಸೇರಿದಂತೆ ವಿಶೇಷ ತರಬೇತಿ ನೀಡಲಾಗುತ್ತದೆ. ಮಹಿಳಾ ಕೆಡೆಟ್‌ಗಳಿಗೆ ಪ್ರತಿ ತಿಂಗಳು ಗೌರವಧನ, ಕಮಾಂಡೋ ಪಡೆಯ ಸಮವಸ್ತ್ರ ನೀಡಲು ನಿರ್ಧರಿಸಲಾಗಿದೆ. ಯೋಜನೆಗಾಗಿ 110 ಕೋಟಿ ರೂ. ಅನುದಾನಕ್ಕೆ ಮನವಿ ಸಲ್ಲಿಸಲಾಗಿದ್ದು, ಆರಂಭದಲ್ಲಿ 10-15 ಕೋಟಿ ರೂ. ಮಂಜೂರಾಗುವ ಸಾಧ್ಯತೆಯಿದೆ. ನಿರ್ಭಯಾ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದಲೂ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Exit mobile version