
ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳ ದಿಡೀರ್ ಭೇಟಿ
ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳು ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ ನಡೆದಿದೆ.
ಲೋಕಾಯುಕ್ತ ಇನ್ಸ್‌ಪೆಕ್ಟರ್ ಮಂಜುನಾಥ್ ಅವರ ನೇತೃತ್ವದ ತಂಡ ಆಸ್ಪತ್ರೆಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ಮತ್ತು ಸಿಬ್ಬಂದಿಗಳ ಕರ್ತವ್ಯಾವಸ್ಥೆಯ ಬಗ್ಗೆ ಮಾಹಿತಿ ಸಂಗ್ರಹಿಸಿತು. ಜಿಲ್ಲಾದ್ಯಂತ ಸರ್ಕಾರಿ ಆಸ್ಪತ್ರೆಗಳ ವಿರುದ್ಧ ಸ್ವಯಂ ದೂರನ್ನು ದಾಖಲಿಸಿರುವ ಲೋಕಾಯುಕ್ತ ಇಲಾಖೆ, ಈ ಹಿನ್ನೆಲೆಯಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ತಪಾಸಣೆ ನಡೆಸುತ್ತಿದೆ.
ಭೇಟಿ ವೇಳೆ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಂಜನೇಯ ಕುಮಾರ್ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕರ್ತವ್ಯ ಸ್ಥಳವನ್ನು ತೊರೆದಿರುವ ಮಾಹಿತಿ ಸಿಬ್ಬಂದಿಗಳಿಂದ ದೊರೆತಿದ್ದು, ಈ ಕುರಿತು ಸರ್ಕಾರಕ್ಕೆ ಪ್ರತ್ಯೇಕ ವರದಿ ಕಳುಹಿಸಲಾಗಿದೆ. ಜೊತೆಗೆ, ಆಸ್ಪತ್ರೆಯ ಮುಂಭಾಗದಲ್ಲಿ ಲೋಕಾಯುಕ್ತ ನಾಮಫಲಕ ಮತ್ತು ಸಲಹಾ ಪೆಟ್ಟಿಗೆ ಇರದೇ ಇರುವುದೂ ಅಧಿಕಾರಿಗಳ ಗಮನಸೆಳೆದಿದೆ. ಇದನ್ನೂ ವರದಿಯಲ್ಲಿ ದಾಖಲಿಸಿ ಸರ್ಕಾರಕ್ಕೆ ರವಾನಿಸಲಾಗಿದೆ.
ಸಾರ್ವಜನಿಕರು ರಾತ್ರಿ ಸಮಯದಲ್ಲಿ ಚಿಕಿತ್ಸೆಗೆ ತಡವಾಗುತ್ತಿರುವುದು ಹಾಗೂ ಔಷಧ ವಿತರಿಸುವ ಸಿಬ್ಬಂದಿ ಕಳೆದ ಹಲವು ತಿಂಗಳಿಂದ ಕರ್ತವ್ಯಕ್ಕೆ ಗೈರುಹಾಜರಾಗಿರುವ ಬಗ್ಗೆ ಲೋಕಾಯುಕ್ತ ಅಧಿಕಾರಿಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಸಿಬ್ಬಂದಿಗಳೊಂದಿಗೆ ಗ್ರಾಮ ಪಂಚಾಯತ್‌ನ ನಾಗೇಶ್ ಹಾಗೂ ರಾಜೇಶ್ ಉಪಸ್ಥಿತರಿದ್ದರು.




