Headlines

ಪ್ರಜಾಪ್ರಭುತ್ವ ರಕ್ಷಣೆಗಾಗಿ “ವೋಟ್ ಚೋರ್, ಗದ್ದಿ ಚೋಡ್” ಅಭಿಯಾನ — ಶ್ವೇತಾ ಬಂಡಿ

ಪ್ರಜಾಪ್ರಭುತ್ವ ರಕ್ಷಣೆಗಾಗಿ “ವೋಟ್ ಚೋರ್, ಗದ್ದಿ ಚೋಡ್” ಅಭಿಯಾನ — ಶ್ವೇತಾ ಬಂಡಿ

ರಿಪ್ಪನ್‌ಪೇಟೆ: ಜನರ ಮತ ಕದ್ದುಕೊಂಡು ಅಧಿಕಾರದ ಕುರ್ಚಿ ಹಿಡಿದವರು ಪ್ರಜಾಪ್ರಭುತ್ವದ ಆತ್ಮವನ್ನೇ ಹತ್ತಿಕ್ಕಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ ತೀವ್ರವಾಗಿ ಆರೋಪಿಸಿದ್ದಾರೆ.

ಸೋಮವಾರ ಸಂಜೆ ರಿಪ್ಪನ್‌ಪೇಟೆ ವಿನಾಯಕ ಸರ್ಕಲ್‌ನಲ್ಲಿ ನಡೆದ “ವೋಟ್ ಚೋರ್, ಗದ್ದಿ ಚೋಡ್” ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿದ ಅವರು, “ಮತ ಕಳವು ಪ್ರಜಾಪ್ರಭುತ್ವದ ವಿರುದ್ಧದ ಗಂಭೀರ ಅಪರಾಧ. ಜನರ ಆಶಯಗಳ ವಿರುದ್ಧ ನಡೆದ ಈ ರಾಜಕೀಯ ದ್ರೋಹವನ್ನು ಕಾಂಗ್ರೆಸ್ ಪಕ್ಷ ಜನಶಕ್ತಿ ಮೂಲಕ ಎದುರಿಸುತ್ತಿದೆ,” ಎಂದರು.

“ಜನರ ಪವಿತ್ರ ಮತವನ್ನು ಕದ್ದುಕೊಂಡು ಅಧಿಕಾರದಲ್ಲಿರುವುದು ಪ್ರಜಾಪ್ರಭುತ್ವದ ಮೇಲಿನ ದೊಡ್ಡ ಅಪರಾಧ. ಈ ಕಳಂಕದ ವಿರುದ್ಧ ಕಾಂಗ್ರೆಸ್ ಪಕ್ಷ ಜನಶಕ್ತಿ ಬಳಸಿ ಹೋರಾಟ ಆರಂಭಿಸಿದೆ. ಮತದ ಗೌರವ ಕಾಪಾಡುವ ಹೋರಾಟದಲ್ಲಿ ಪ್ರತಿಯೊಬ್ಬ ಪ್ರಜೆಯೂ ಕೈಜೋಡಿಸಬೇಕು,” ಎಂದು ಕರೆ ನೀಡಿದರು.

ಅವರು ಮುಂದುವರೆದು, “ಸತ್ಯವನ್ನು ಮುಚ್ಚಿಹಾಕಲು ಯತ್ನಿಸುವ ಆಡಳಿತದ ವಿರುದ್ಧ ಜನರ ಕೋಪ ತಪ್ಪದೇ ಸ್ಫೋಟಿಸುತ್ತದೆ. ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದ ಪರವಾಗಿ ಹಾಗೂ ಸತ್ಯದ ಪರವಾಗಿ ಹೋರಾಟ ಮುಂದುವರಿಸುತ್ತದೆ. ಮತ ಕದ್ದುಕೊಂಡು ಗದ್ದಿಗೆ ಕೂತವರು ಜನರ ನ್ಯಾಯಾಲಯದಲ್ಲಿ ತಪ್ಪಿತಸ್ಥರಾಗುವುದು ಖಚಿತ,” ಎಂದು ಹೇಳಿದರು.

ಈ ಅಭಿಯಾನವನ್ನು ಶಾಸಕ ಹಾಗೂ ಕರ್ನಾಟಕ ಕೈಗಾರಿಕಾ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಪಿ. ರಾಮಚಂದ್ರ, ಬಗುರುಹುಕುಂ ಸಮಿತಿ ಅಧ್ಯಕ್ಷೆ ಸಾಕಮ್ಮ ,ಕೆಡಿಪಿ ಸದಸ್ಯ ಆಸೀಫ಼್ ಭಾಷಾ , ಎಪಿಎಂಸಿ ಮಾಜಿ ಅಧ್ಯಕ್ಷ ಈಶ್ವರಪ್ಪಗೌಡ ಹಾರೋಹಿತ್ತಲು, ಉಬೇದುಲ್ಲಾ ಷರೀಫ್ , ಧನಲಕ್ಷ್ಮಿ ಗಂಗಾಧರ್, ಡಿ.ಇ. ಮಧುಸೂದನ್,ಗಣಪತಿ , ನಿರೂಪ್ ಕುಮಾರ್, ನಿರುಪಮಾ,ಸಾರಾಭಿ , ಉಮಾಕರ್ ಕಾನುಗೋಡು , ಪ್ರಕಾಶ್ ಪಾಲೇಕರ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಪಕ್ಷದ ಅಭಿಮಾನಿಗಳು ಭಾಗವಹಿಸಿದರು.

Exit mobile version