ಬಿಸ್ಕೆಟ್ ಪ್ಯಾಕ್ನಲ್ಲಿ ಜೈಲಿಗೆ ಗಾಂಜಾ : ಇಬ್ಬರ ಬಂಧನ
ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗೆ ಬಿಸ್ಕೆಟ್ ಪ್ಯಾಕೆಟ್‌ಗಳಲ್ಲಿ ಅಕ್ರಮವಾಗಿ ಗಾಂಜಾ ಮತ್ತು ಸಿಗರೇಟ್ ಕೊಂಡೊಯ್ಯಲು ಯತ್ನಿಸಿದ ಇಬ್ಬರು ಯುವಕರನ್ನು ಜೈಲು ಸಿಬ್ಬಂದಿ ಬಂಧಿಸಿದ್ದಾರೆ.
ಭದ್ರಾವತಿ ನಗರದ ನಿವಾಸಿಗಳಾದ ರಾಹಿಲ್ (19) ಹಾಗೂ ತಸೀರುಲ್ಲಾ (19) ಬಂಧಿತ ಆರೋಪಿಗಳಾಗಿದ್ದಾರೆ.
ಸಂಜೆ 4.30ರ ಸುಮಾರಿಗೆ ಕೈದಿ ಮೊಹಮ್ಮದ್ ಗೌಸ್ ಅಲಿಯಾಸ್ ಜಂಗ್ಲಿ ಎಂಬಾತನ ಸಂದರ್ಶನಕ್ಕೆಂದು ಆಗಮಿಸಿದ್ದ ಈ ಇಬ್ಬರು ಯುವಕರು ಮೂರು ವೀಟಾ ಮಾರಿ ಗೋಲ್ಡ್ ಬಿಸ್ಕೆಟ್ ಪ್ಯಾಕೆಟ್‌ಗಳನ್ನು ತಂದಿದ್ದರು. ಅನುಮಾನಗೊಂಡ ಜೈಲು ಸಿಬ್ಬಂದಿ ಬಿಸ್ಕೆಟ್ ಪ್ಯಾಕೆಟ್‌ಗಳನ್ನು ಪರಿಶೀಲಿಸಿದಾಗ, ಕಪ್ಪು ಗಮ್ ಟೇಪ್‌ನಲ್ಲಿ ಸುತ್ತಿದ ನಿಷಿದ್ಧ ವಸ್ತುಗಳು ಪತ್ತೆಯಾದವು. ತಪಾಸಣೆ ಮಾಡಿದಾಗ ಅವುಗಳಲ್ಲಿ 1 ಗಾಂಜಾ ಪ್ಯಾಕೆಟ್ ಮತ್ತು 2 ಸಿಗರೇಟ್ ಪ್ಯಾಕೆಟ್‌ಗಳು ಇರುವುದು ದೃಢಪಟ್ಟಿತು.
ನಿಷೇಧಿತ ವಸ್ತುಗಳನ್ನು ಜಪ್ತಿ ಮಾಡಿದ ಜೈಲು ಸಿಬ್ಬಂದಿ ಆರೋಪಿಗಳನ್ನು ತುಂಗಾ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಕೇಂದ್ರ ಜೈಲು ಅಧೀಕ್ಷಕ ಡಾ. ರಂಗನಾಥ್ ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಂಧಿತ ಯುವಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಬಿಸ್ಕೆಟ್ ಪ್ಯಾಕೆಟ್‌ನಲ್ಲಿದ್ದ ನಿಷೇಧಿತ ವಸ್ತುಗಳನ್ನು ಪತ್ತೆ ಮಾಡುವಲ್ಲಿ ಜೈಲು ಸಿಬ್ಬಂದಿ ಚಾಣಾಕ್ಷತೆ ಮೆರೆದಿದ್ದಾರೆ.



