RIPPONPETE | ಅಕ್ರಮ ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿ ಸಾವು
ಸದ್ದು ಮಾಡುತ್ತಿರುವ ಅಕ್ರಮ ನಾಡ ಬಂದೂಕುಗಳು – ಕಾನೂನಿಗೆ ಬಿಗಿ ಕಡಿವಾಣ ಅಗತ್ಯ
– ಅನಧಿಕೃತ ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಗುಂಡು ವ್ಯಕ್ತಿಯೊಬ್ಬರನ್ನು ಬಲಿ ಪಡೆದುಕೊಂಡ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಿರಿಯೋಗಿ ಗ್ರಾಮದಲ್ಲಿ ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.

ಮೃತರನ್ನು ಕೋಡೂರು ಸಮೀಪದ ಹಿರಿಯೋಗಿ ಗ್ರಾಮದ ದೇವರಾಜ (47) ಎಂದು ಗುರುತಿಸಲಾಗಿದೆ.
ಲೋಡ್ ಆಗಿದ್ದ ಅನಧಿಕೃತ ನಾಡ ಬಂದೂಕನ್ನು ಹಿಡಿದುಕೊಂಡು ಮನೆಯ ಮೆಟ್ಟಿಲು ಹತ್ತುವಾಗ ಟ್ರಿಗರ್ ಎಳೆಯಲ್ಪಟ್ಟು ಗುಂಡು ಹಣೆಗೆ ತಾಗಿ ತಕ್ಷಣ ದೇವರಾಜ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ದುರ್ಘಟನೆ ನಡೆದಾಗ ಪತ್ನಿ ಅಡುಗೆ ಮನೆಯಲ್ಲಿ ಕೆಲಸದಲ್ಲಿದ್ದು , ಮಕ್ಕಳು ಕೋಣೆಯಲ್ಲಿ ಓದುತ್ತಿದ್ದರು. ಮನೆ ಮುಂಭಾಗದಿಂದ ಏಕಾಏಕಿ ಗುಂಡಿನ ಸದ್ದು ಕೇಳಿ ಕೂಡಲೇ ಹೊರಬಂದ ಕುಟುಂಬಸ್ಥರು ರಕ್ತಸಿಕ್ತ ಸ್ಥಿತಿಯಲ್ಲಿ ದೇವರಾಜ್ ಬಿದ್ದಿರುವುದನ್ನು ಕಂಡಿದ್ದಾರೆ. ತಲೆಗೆ ಗುಂಡು ತಗುಲಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅವರ ಪಕ್ಕದಲ್ಲಿಯೇ ಅಕ್ರಮ ನಾಡ ಬಂದೂಕು ಸಹ ಇತ್ತು ಎನ್ನಲಾಗಿದೆ.
ಈ ಕುರಿತಂತೆ ಪತ್ನಿ ನೀಡಿದ ದೂರಿನ ಆಧಾರದಲ್ಲಿ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ದು ಮಾಡುತ್ತಿರುವ ಅಕ್ರಮ ನಾಡ ಬಂದೂಕುಗಳು – ಬಿಗಿ ಕಡಿವಾಣ ಅಗತ್ಯ
ಮಲೆನಾಡು ಭಾಗದಲ್ಲು ಇತ್ತೀಚೆಗೆ ನಾಡ ಬಂದೂಕುಗಳಿಂದ ಅಪಘಾತಗಳು ಹಾಗೂ ಅನಾಹುತಗಳು ಹೆಚ್ಚುತ್ತಿರುವುದು ಆತಂಕದ ವಿಚಾರವಾಗಿದೆ. ಅಕ್ರಮವಾಗಿ ತಯಾರಾಗುತ್ತಿರುವ ಹಾಗೂ ನಿಯಂತ್ರಣವಿಲ್ಲದೆ ಬಳಸಲಾಗುತ್ತಿರುವ ನಾಡ ಬಂದೂಕುಗಳು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಸಹಜವಾಗಿಯೇ ಕಂಡುಬರುತ್ತಿವೆ. ಇವುಗಳನ್ನು ಬೇಟೆ, ಭದ್ರತೆ, ಅಥವಾ ಬೆದರಿಕೆ ಉದ್ದೇಶಕ್ಕೆ ಬಳಸುವ ಘಟನೆಗಳು ಮರುಮರು ಬೆಳಕಿಗೆ ಬರುತ್ತಿರುವುದರಿಂದ ಸಾರ್ವಜನಿಕ ಸುರಕ್ಷತೆಗೆ ದೊಡ್ಡ ಸವಾಲು ಎದುರಾಗುತ್ತಿದೆ.
ನಾಡ ಬಂದೂಕುಗಳು ಪರವಾನಗಿ ಇಲ್ಲದೆ ತಯಾರಾಗುವ ಕಾರಣ ಸರ್ಕಾರದ ಕಣ್ಗಾವಲು ತಪ್ಪುವುದು ಸಹಜ. ಇತ್ತೀಚಿನ ಕೆಲವು ಪ್ರಕರಣಗಳಲ್ಲಿ ಜೀವಹಾನಿ ಸಂಭವಿಸಿರುವುದರಿಂದ ಇವುಗಳನ್ನು ನಿಯಂತ್ರಿಸುವ ಅಗತ್ಯತೆ ಮತ್ತಷ್ಟು ಗಂಭೀರವಾಗಿದೆ.
ಅಕ್ರಮ ಬಂದೂಕು ತಯಾರಿಕೆ ಹಾಗೂ ಬಳಕೆಯನ್ನು ತಡೆಗಟ್ಟಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳುವುದು ಅತ್ಯವಶ್ಯಕ. ಜಾಗೃತಿ ಮೂಡಿಸುವ ಮೂಲಕ ಹಾಗೂ ಕಾನೂನು ಬಿಗಿಗೊಳಿಸುವ ಮೂಲಕ ಮಾತ್ರ ಈ ಸಮಸ್ಯೆಗೆ ತಡೆ ಸಿಗಲಿದೆ.