Headlines

ಸುಜಾತಾ ಭಟ್ ಪ್ರಕರಣ – ರಿಪ್ಪನ್ ಪೇಟೆಯ ವ್ಯಕ್ತಿಯೊಂದಿಗೆ ಲಿವ್-ಇನ್ ರಿಲೇಷನ್‌ಶಿಪ್, ಇಲ್ಲದ ಮಗಳ ಗೂಢರಹಸ್ಯ.!!

ಸುಜಾತಾ ಭಟ್ ಪ್ರಕರಣ – ರಿಪ್ಪನ್ ಪೇಟೆಯ ವ್ಯಕ್ತಿಯೊಂದಿಗೆ ಲಿವ್-ಇನ್ ರಿಲೇಷನ್‌ಶಿಪ್, ಇಲ್ಲದ ಮಗಳ ಗೂಢರಹಸ್ಯ.!!

ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಸುಜಾತ ಭಟ್ ಹಾಗೂ ಅವರ ಪುತ್ರಿ ಅನನ್ಯ ಭಟ್ ಬಗ್ಗೆ ದೇಶಾದ್ಯಂತ ಭಾರಿ ಸುದ್ದಿಯಲ್ಲಿದೆ. ಸುಜಾತ ಭಟ್ ಎಂಬ ಹೆಸರಿನ ಹಿಂದೆ ಹಲವು ಮರ್ಮಗಳಿವೆ..

– ಸುಜಾತ ಭಟ್ ಪ್ರಕರಣದ ಸಂಪೂರ್ಣ ವೀಡಿಯೋ –

2003ರಲ್ಲಿ ಧರ್ಮಸ್ಥಳಕ್ಕೆ ಸ್ನೇಹಿತೆಯರೊಂದಿಗೆ ಬಂದಿದ್ದ ತನ್ನ ಮಗಳು ಅನನ್ಯ ಭಟ್ ನಾಪತ್ತೆಯಾಗಿದ್ದಾಳೆ ಹಾಗೂ ಆಕೆಯ ಮೇಲೆ ಅತ್ಯಾಚಾರವಾಗಿರಬಹುದು  ಎಂದು ಸುಜಾತ ಭಟ್ ದೂರು ಸಲ್ಲಿಸಿದ್ದಾರೆ ಆ ಸಂಧರ್ಭದಲ್ಲಿ ತಾನು ಕೋಲ್ಕತ್ತಾದಲ್ಲಿ ಸಿಬಿಐ ಸ್ಟೇನೋಗ್ರಾಫರ್ ಆಗಿ ಕೆಲಸಮಾಡಿ, ವಿಆರ್‌ಎಸ್ ತೆಗೆದುಕೊಂಡ ನಂತರ 2004ರಲ್ಲಿ ಬೆಂಗಳೂರಿಗೆ ಬಂದು ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿ ಜೀವನ ನಡೆಸಿದ್ದೇನೆ ಎಂಬ ಮಾಹಿತಿಯನ್ನು ನೀಡಿದ್ದಾರೆ.ಆದರೆ ನಿಖರವಾಗಿ ಆ ಅವಧಿಯಲ್ಲಿ ಅವರು ಬೆಂಗಳೂರಿನಲ್ಲಿ ಇದ್ದರಾ, ಕೋಲ್ಕತ್ತಾದಲ್ಲಿದ್ದರಾ ಅಥವಾ ಶಿವಮೊಗ್ಗದಲ್ಲಿದ್ದರಾ ಎಂಬುದನ್ನು ಬೆನ್ನತ್ತಿ ಹೊರಟ ಪೋಸ್ಟ್ ಮ್ಯಾನ್ ನ್ಯೂಸ್ ಗೆ ಶಾಕಿಂಗ್ ವಿಚಾರಗಳು ಕಾದಿದ್ದವು..

ಮೂಲಗಳ ಪ್ರಕಾರ ಸುಜಾತ ಭಟ್ 1999ರಿಂದ 2007 ರವರೆಗೆ ರಿಪ್ಪನ್ ಪೇಟೆಯ ಹೊಸನಗರ ರಸ್ತೆಯ ಜಿಎಸ್ ಬಿ ಕಲ್ಯಾಣ ಮಂಟಪದ ಮುಂಭಾಗದ ಮನೆಯ ನಿವಾಸಿ ಪ್ರಭಾಕರ್ ಬಾಳಿಗ @ ನಾಯಿ ಪ್ರಭಾಕರ್ ಜೊತೆ ವಾಸವಾಗಿದ್ದರು. ಹೌದು  ಉಡುಪಿಯಲ್ಲಿ ಬಸ್ ಏಜೆಂಟ್ ಆಗಿದ್ದ ಪ್ರಭಾಕರ್ ಬಾಳಿಗ ಅವರಿಗೆ ಪರಿಚಯವಾದ ಸುಜಾತಾ ಭಟ್, ಪ್ರಭಾಕರ್ ಅವರ ತಾಯಿಯನ್ನು ನೋಡಿಕೊಳ್ಳಲು ರಿಪ್ಪನ್‌ಪೇಟೆಗೆ ಬಂದರು. ಈ ಸಮಯದಲ್ಲಿ ಪ್ರಭಾಕರ್ ಅವರ ಮೊದಲ ಪತ್ನಿ ಮತ್ತು ಮಗಳು ಅವರನ್ನು ಬಿಟ್ಟುಹೋಗಿದರು. ವಿಚ್ಛೇದನ ಪಡೆಯದೇ, 1999ರಿಂದ 2007ರವರೆಗೆ ಸುಜಾತಾ ಭಟ್ ಮತ್ತು ಪ್ರಭಾಕರ್ ಬಾಳಿಗ ಒಟ್ಟಿಗೆ ವಾಸಿಸಿದ್ದರು. ಮದುವೆಯಾಗದೇ ಲಿವ್-ಇನ್‌ನಲ್ಲಿ ಇದ್ದ ಇವರ ಸಂಬಂಧಕ್ಕೆ ಇಡೀ ರಿಪ್ಪನ್‌ಪೇಟೆಯೇ ಸಾಕ್ಷಿ.

ಆದರೆ, ಈ ಕಥೆಯಲ್ಲಿ ಒಂದು ದೊಡ್ಡ ಗೂಢಚರಿತ್ರೆ—ಸುಜಾತಾ ಭಟ್ ಅವರ ಮಗಳ ಇರುವಿಕೆಯ ಬಗ್ಗೆ , ಸುಜಾತ ಭಟ್ ಮಾತಿನ ಪ್ರಕಾರ ಮಗಳು ಅನನ್ಯಾ ಭಟ್ ಇದ್ದಾಳೆ, ಆದರೆ ಸ್ಥಳೀಯರು ಅವರಿಗೆ ಮಕ್ಕಳಿರಲಿಲ್ಲವೆಂದು ದೃಢಪಡಿಸುತ್ತಿದ್ದಾರೆ. “ನಾವು ಸುಜಾತಾ ಭಟ್ ಅವರನ್ನು ನೋಡಿದ್ದೇವೆ, ಅವರಿಗೆ ಮಕ್ಕಳಿರಲಿಲ್ಲ,” ಎಂದು ಪ್ರಭಾಕರ್ ಬಾಳಿಗ ಸ್ನೇಹಿತ ಸಹಪಾಠಿ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ಹೇಳುತ್ತಾರೆ.

ಪ್ರಭಾಕರ್-ಸುಜಾತಾ ಜೋಡಿ ಬೀದಿ ನಾಯಿಗಳನ್ನು ಸಾಕಿ, ಅವುಗಳನ್ನೇ ತಮ್ಮ ಮಕ್ಕಳೆಂದು ಕರೆಯುತ್ತಿದ್ದರು ಈ ಬಗ್ಗೆ ಆ ಸಂಧರ್ಭದಲ್ಲಿ ಹೊಸನಗರ ತಾಲೂಕಿನಲ್ಲಿ ಪ್ರಖ್ಯಾತಿಯಾಗಿದ್ದ ಕಮಲವಾಣಿ ಪತ್ರಿಕೆಯಲ್ಲಿ 2003 ರ ವಿಶೇಷ ಸಂಚಿಕೆಯಲ್ಲಿ ಈ ಬಗ್ಗೆ ಲೇಖನ ಸಹ ಪ್ರಕಟಿಸಲಾಗಿತ್ತು ಹಾಗೇಯೇ ಸುಧಾ ವಾರ ಪತ್ರಿಕೆಯಲ್ಲಿ 2002 ರ ಸೆಪ್ಟೆಂಬರ್ ನಲ್ಲಿ ಹವ್ಯಾಸಿ ಬರಹಗಾರ ಅರುಣ್ ಕಾಳಮುಖಿ ಈ ದಂಪತಿಗಳ ಬಗ್ಗೆ ಲೇಖನ ಬರೆದಿದ್ದರು ಇಲ್ಲಿಯೂ ಇವರಿಗೆ ಮಕ್ಕಳಿಲ್ಲದ ಕಾರಣ ಬೀದಿನಾಯಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತಿದ್ದಾರೆ ಎಂಬ ಮಾಹಿತಿ ಹಂಚಿಕೊಂಡಿದ್ದರು.

2009ರಲ್ಲಿ ಪ್ರಭಾಕರ್ ಬಾಳಿಗ ನಿಧನರಾದರು, ಆದರೆ ಅವರು ಸಾಯುವ ಎರಡು ವರ್ಷ ಮೊದಲೇ ಸುಜಾತಾ ಅವರನ್ನು ಬಿಟ್ಟುಹೋದರು. ಮಧ್ಯದಲ್ಲಿ, ಸುಜಾತಾ ಭಟ್ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಒತ್ತಾಯ ಬಂದರೂ, ಅವರು ನಿರಾಕರಿಸಿದ್ದರು ಎಂದು ನೆರೆ ಮನೆಯವರು ಹಾಗೂ ಜಿಎಸ್ ಬಿ ಸಮಾಜದ ಮುಖಂಡ ಹರೀಶ್ ಪ್ರಭು ಮಾಹಿತಿ ನೀಡುತ್ತಾರೆ.

2007ರ ಆವಧಿಯಲ್ಲಿ ಬೆಂಗಳೂರಿನಲ್ಲಿ ಜಡ್ಜ್ ಮನೆಯಲ್ಲಿ ಕೆಲಸ ಸಿಕ್ಕಿದೆ ಎಂದು ತೀವ್ರ ಮದ್ಯವ್ಯಸನಿಯಾಗಿದ್ದ ಪ್ರಭಾಕರ್ ರವರನ್ನು ಬಿಟ್ಟು ತೆರಳಿದ ಸುಜಾತಾ, ನಂತರ ಬೇರೆ ಮದುವೆಯಾದರೆಂಬ ಮಾಹಿತಿಯೂ ಹರಿದಾಡಿತು.ಆದರೆ ಸುಜಾತ ಭಟ್ ರವರಿಗೆ ಮಗಳಿರುವ ಬಗ್ಗೆ ಯಾರ ಬಳಿಯೂ ಮಾಹಿತಿ ಇಲ್ಲ..

ಈ ಪ್ರಕರಣದಲ್ಲಿ ಅನೇಕ ಮಿಸ್ಸಿಂಗ್ ಲಿಂಕ್‌ಗಳಿವೆ—ಯಾವುದೇ ಒಂದು ಲಿಂಕ್ ತಪ್ಪಿದರೆ ತನಿಖೆ ಸಂಪೂರ್ಣ ಹಾದಿ ತಪ್ಪುವ ಸಾಧ್ಯತೆ ಇದೆ. ಆದರೆ, ಯಾರೋ ಉದ್ದೇಶಪೂರ್ವಕವಾಗಿ ತನಿಖೆಯ ದಿಕ್ಕು ಬದಲಿಸಲು ಯತ್ನಿಸುತ್ತಿದ್ದಾರೆ ಎಂಬ ಅನುಮಾನ ಗಟ್ಟಿಯಾಗಿ ಮೂಡಿದೆ. ಸುಜಾತಾ ಭಟ್ ಅವರ ನಿಜವಾದ ಜೀವನಗಾಥೆ ಮತ್ತು “ಮಗಳ” ಸತ್ಯ ಇನ್ನೂ ಕತ್ತಲೆಯಲ್ಲೇ ಇದೆ.

ಇಂದಿಗೂ ರಿಪ್ಪನ್‌ಪೇಟೆಯ ಕೆಲವು ಹಳೆಯ ಮನೆಗಳ ಕಿಟಕಿಗಳು, ಪಾಳು ಬಿದ್ದ ಪ್ರಭಾಕರ್ ಬಾಳಿಗ ಮನೆ, ಮತ್ತು ನೆರೆಯವರ ನೆನಪುಗಳು ಮಾತ್ರ ಈ ಕಥೆಯ ಸಾಕ್ಷಿಗಳು. ಸತ್ಯದ ಬೀಗವನ್ನು ತೆರೆಯುವ ಚಾವಿ ಯಾರ ಕೈಯಲ್ಲಿದೆ ಎಂಬುದು ಮಾತ್ರ ಇನ್ನೂ ಗೊತ್ತಿಲ್ಲ…

– ರಫ಼ಿ ರಿಪ್ಪನ್ ಪೇಟೆ

2009 ರಲ್ಲಿ ಮೃತಪಟ್ಟ ಪ್ರಭಾಕರ್ ಬಾಳಿಗ – ಈ ಸಂಧರ್ಭದಲ್ಲಿ ಕಣ್ಣೀರು ಸುರಿಸುತ್ತಾ ಕುಳಿತಿದ್ದ ಬೀದಿ ನಾಯಿ ಅದೇ ಜಾಗದಲ್ಲಿ ಐದು ದಿನ ಹೊಟ್ಟೆಗೆ ಏನು ಸೇವಿಸದೇ ಮೃತಪಟ್ಟಿತ್ತು ಎಂದು ಅವರ ಸ್ನೇಹಿತ ಟಿ ಆರ್ ಕೃಷ್ಣಪ್ಪ ಹೇಳುತ್ತಾರೆ.
ಕಮಲವಾಣಿ ಪತ್ರಿಕೆಯಲ್ಲಿ 2003 ರಲ್ಲಿ ಸುಜಾತ ಭಟ್ ಬಗ್ಗೆ ಪ್ರಕಟವಾದ ಲೇಖನ
ಸುಧಾ ವಾರ ಪತ್ರಿಕೆಯಲ್ಲಿ 2002 ಸೆಪ್ಟೆಂಬರ್ ನಲ್ಲಿ ಪ್ರಕಟವಾದ ಲೇಖನ
Exit mobile version