ಲಂಚದ ಆಸೆಗೆ ಬಿದ್ದ ಜನರಿಗೆ ಆಶ್ರಯ ಕೊಡಬೇಕಾದ ಅಧಿಕಾರಿ – ಲೋಕಾಯುಕ್ತ ಬಲೆಗೆ
ಶಿವಮೊಗ್ಗ: ಖರೀದಿಸಿದ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಡಲು ಮಹಾನಗರ ಪಾಲಿಕೆಯ ಆಶ್ರಯ ಮನೆ ವಿಭಾಗದ ಸಮುದಾಯ ಸಂಘಟನಾಧಿಕಾರಿ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತರಿ ದಾಳಿ ನಡೆಸಿ ಬಂಧಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಶಶಿಧರ ಎ ಪಿ (೫೭) ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆ. ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯ ವಾಸಿ ಮೊಹಮ್ಮದ್ ಆಸೀಫ್ ಉಲ್ಲಾ ಎನ್ನುವವರು ಬೊಮ್ಮನಕಟ್ಟೆಯಲ್ಲಿ ಅಮ್ಜದ್ ಅಲಿ ಎನ್ನುವವರಿಂದ ಮನೆಯನ್ನು ಖರೀದಿಸಿದ್ದರು. ಈ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಡಲು ಅರ್ಜಿ ಸಲ್ಲಿಸಿದಾಗ ೧೦ ಸಾವಿರ ರೂ. ಲಂಚ ಕೇಳಿದ್ದರು. ಹಣವನ್ನು ಕೊಡಲು ಇಷ್ಟವಿಲ್ಲದ ಕಾರಣ ಪಿರ್ಯಾದಿ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದರು.
ನೆಹರು ರಸ್ತೆಯ ನೇತಾಜಿ ವಾಣಿಜ್ಯ ಸಂಕೀರ್ಣದಲ್ಲಿರುವ ಆಶಯ ಕಚೇರಿಯಲ್ಲಿ ಶುಕ್ರವಾರ ೧೦ ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ್ತ ತಂಡ ದಾಳಿ ನಡೆಸಿ ಹಣ ಸಹಿತ ಬಂಧಿಸಿದೆ. ಇನ್ಸ್ಪೆಕ್ಟರ್ ರುದ್ರೇಶ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಈ ದಾಳಿ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ಗುರುರಾಜ ಮೈಲಾರ, ವೀರಬಸಪ್ಪ ಕುಸಲಾಪುರ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.