ನಗರದಲ್ಲಿ ಮನೆ ಕಳ್ಳತನ ಪ್ರಕರಣ – 48 ಗಂಟೆಗಳಲ್ಲಿ ಆರೋಪಿಗಳ ಪತ್ತೆ, 4 ಲಕ್ಷ ಮೌಲ್ಯದ ಚಿನ್ನ ವಶ!
ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಬಳೆ ಹಾಗೂ ಮಾಸ್ತಿಕಟ್ಟೆ ಪ್ರದೇಶದಲ್ಲಿ ಆಗಸ್ಟ್ 21ರಂದು ಸಂಭವಿಸಿದ ಕಳ್ಳತನ ಪ್ರಕರಣವನ್ನು ಪಿಎಸೈ ಶಿವಾನಂದ ಕೆ ನೇತ್ರತ್ವದ ಪೊಲೀಸರು ಕೇವಲ 48 ಗಂಟೆಗಳಲ್ಲಿ ಪ್ರಕರಣ ಭೇದಿಸಿ, ಇಬ್ಬರು ಅಂತರ ಜಿಲ್ಲೆ ಆರೋಪಿಗಳನ್ನು ದಸ್ತಗಿರಿ ಮಾಡಿದೆ.

ನಗರ ಹೋಬಳಿಯ ಕಬಳೆ ಗ್ರಾಮದ ರಿಚರ್ಡ್ ಡಿ ಸೋಜಾ ಹಾಗೂ ಮಾಸ್ತಿಕಟ್ಟೆ ಗ್ರಾಮದ ಶೇಷಾದ್ರಿ ಇವರ ಮನೆಯಲ್ಲಿ 21-08-2024 ರಂದು ಯಾರೂ ಇಲ್ಲದ ವೇಳೆಯಲ್ಲಿ ಕಳ್ಳರು ಬೀಗ ಒಡೆದು ಮನೆಗಳ ಗಾಡೇಜ್‌ನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣವನ್ನು ದೋಚಿಕೊಂಡು ಹೋಗಿದ್ದರು.ರಿಚರ್ಡ್ ಡಿ ಸೋಜಾ ಅವರ ಮನೆಯಿಂದ 31 ಗ್ರಾಂ ತೂಕದ ಚಿನ್ನಾಭರಣ (ಮೌಲ್ಯ ₹1,66,000) ಹಾಗೂ ₹70,000 ನಗದು ಕಳ್ಳತನವಾಗಿತ್ತು ಹಾಗೂ ಮಾಸ್ತಿಕಟ್ಟೆಯ ಶೇಷಾದ್ರಿಯವರ ಮನೆಯಿಂದ 28 ಗ್ರಾಂ ಚಿನ್ನಾಭರಣ (ಮೌಲ್ಯ ₹1,11,000), ₹30,000 ನಗದು ಮತ್ತು ₹3,000 ಬೆಳ್ಳಿ ಆಭರಣ ದೋಚಲ್ಪಟ್ಟಿತು.
ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 41/2025 ಮತ್ತು 42/2025ರಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾಗುತಿದ್ದಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಜಿ.ಕೆ. (ಐಪಿಎಸ್) ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ ವಿ.ಜಿ. ಮತ್ತು ರಮೇಶ್ ಅವರ ಸಹಕಾರದಿಂದ ತೀರ್ಥಹಳ್ಳಿ ಉಪವಿಭಾಗದ ಡಿ.ವೈ.ಎಸ್.ಪಿ ಅರವಿಂದ ಎನ್. ಕಲಗುಜ್ಜಿ ಹಾಗೂ ಹೊಸನಗರ ವೃತ್ತ ನಿರೀಕ್ಷಕ ಗುರಣ್ಣ ಎಸ್. ಹೆಬ್ಬಾಳ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು.
ನಗರ ಪೊಲೀಸ್ ಠಾಣೆಯ ಪಿಎಸ್‌ಐ ಶಿವಾನಂದ ಕೋಳಿ ಹಾಗೂ ಅವರ ಸಿಬ್ಬಂದಿಗಳು, ಬೆರಳಚ್ಚು ವಿಭಾಗ ಹಾಗೂ ಎ.ಎನ್.ಸಿ. ತಂಡದ ತಾಂತ್ರಿಕ ಸಹಕಾರದಿಂದ ಪತ್ತೆ ಕಾರ್ಯಾಚರಣೆಯಲ್ಲಿ ಕೈಗೊಂಡು ಆಗಸ್ಟ್ 24ರಂದು ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕಿನ ನಿವಾಸಿಗಳಾದ ಹನುಮಂತ ತೊಳೆಯಪ್ಪ ಕುಂಚಿಕೊರವರ (26 ವರ್ಷ) , ಮಂಜುನಾಥ ಬಿಸುಕಲ್ಲೊಡ್ಡರ (36 ವರ್ಷ) ಎಂಬ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ದಸ್ತಗಿರಿ ಮಾಡಿ, ಅವರಿಂದ ಒಟ್ಟು 55 ಗ್ರಾಂ ಚಿನ್ನಾಭರಣ (ಮೌಲ್ಯ ಸುಮಾರು ₹4 ಲಕ್ಷ) ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟಿ (ಮೌಲ್ಯ ₹70,000) ವಶಪಡಿಸಿಕೊಂಡಿದೆ.
ಆರೋಪಿಗಳನ್ನು ಕೇವಲ 48 ಗಂಟೆಗಳಲ್ಲಿ ಪತ್ತೆಹಚ್ಚಿ, ಕಳುವಾದ ಆಭರಣ-ಸ್ವತ್ತುಗಳನ್ನು ವಶಪಡಿಸಿಕೊಂಡ ಶಿವಾನಂದ ಕೆ ನೇತ್ರತ್ವದ ತಂಡದ ಕಾರ್ಯಕ್ಷಮತೆಯನ್ನು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ. ಪ್ರಶಂಸಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್‌ಐ ಶಿವಾನಂದ ಕೋಳಿ ಅವರ ನೇತೃತ್ವದಲ್ಲಿ, ಎ.ಎಸ್.ಐ ಕುಮಾರ್ ಟಿ, ಎ.ಎಸ್.ಐ ಶೇಖ್ ಅಮೀರ್ ಜಾನ್, ಸಿ.ಹೆಚ್.ಸಿ ಕಿರಣ್ ಕುಮಾರ್ ಡಿ, ಸಿ.ಹೆಚ್.ಸಿ ವಿಶ್ವನಾಥ್ ಡಿ, ಹೆಚ್.ಸಿ ಪ್ರವೀಣ್ ಕುಮಾರ್ ಬಿ.ಎಸ್, ಸಿ.ಹೆಚ್.ಸಿ ಶಿವಕುಮಾರ ನಾಯ್ಕ (ಹೊಸನಗರ ಠಾಣೆ), ಸಿಪಿಸಿ ರವಿಚಂದ್ರ, ಸಿಪಿಸಿ ಸುಜಯಕುಮಾರ್ ಎಂ, ಸಿಪಿಸಿ ಪ್ರಜ್ವಲ್ ಡಿ.ಎಸ್, ಸಿಪಿಸಿ ಸಚಿನ್, ಚಾಲಕ ಶಶಿಧರ ಎನ್ ಸೇರಿದಂತೆ ಸಿಬ್ಬಂದಿಗಳು ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಅದೇ ರೀತಿ ಬೆರಳಚ್ಚು ವಿಭಾಗ ಶಿವಮೊಗ್ಗ ಹಾಗೂ ಜಿಲ್ಲಾ ಎ.ಎನ್.ಸಿ. ಸಿಬ್ಬಂದಿ ತಾಂತ್ರಿಕ ಸಹಕಾರ ನೀಡಿದ್ದು, ಪ್ರಕರಣವನ್ನು ಕೇವಲ 48 ಗಂಟೆಗಳಲ್ಲಿ ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಲಾಯಿತು.