Headlines

RIPPONPETE | ಪೊಲೀಸರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು

RIPPONPETE | ಪೊಲೀಸರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು

ರಿಪ್ಪನ್ ಪೇಟೆ : ರಕ್ಷಾ ಬಂಧನ ಹಬ್ಬದ ಅಂಗವಾಗಿ, ಬಿಜೆಪಿ ಹೊಸನಗರ ತಾಲ್ಲೂಕು ಮಹಿಳಾ ಮೋರ್ಚಾ ವತಿಯಿಂದ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೋಮವಾರ ವಿಶೇಷ ಕಾರ್ಯಕ್ರಮದ ಮೂಲಕ ರಾಖಿ ಕಟ್ಟುವ ಕಾರ್ಯಕ್ರಮ ನಡೆಯಿತು.

ಸಂಪ್ರದಾಯಬದ್ಧ ರೀತಿಯಲ್ಲಿ ಹಬ್ಬವನ್ನು ಆಚರಿಸಿದ ಮಹಿಳಾ ಮೋರ್ಚಾ ಕಾರ್ಯಕರ್ತೆಯರು, ಮೊದಲಿಗೆ ಪೊಲೀಸರ ಕೈಗೆ ರಾಖಿ ಕಟ್ಟಿದರು. ನಂತರ ಅವರಿಗೆ ತಿಲಕ ಹಾಕಿ, ಮಿಠಾಯಿ ತಿನ್ನಿಸಿ ಶುಭಾಶಯಗಳನ್ನು ಹಂಚಿಕೊಂಡರು.

ಈ ಸಂದರ್ಭ ಗ್ರಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಕೆ ರಾವ್ ಮಾತನಾಡಿ “ಪೊಲೀಸರು ದಿನರಾತ್ರಿ ನಮ್ಮ ಸುರಕ್ಷತೆಗೆ ಶ್ರಮಿಸುತ್ತಿದ್ದಾರೆ. ಸಮಾಜದ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಅವರು ನಿರಂತರ ಜಾಗರೂಕರಾಗಿದ್ದಾರೆ. ಈ ಹಬ್ಬದ ಮೂಲಕ ಅವರ ಸೇವೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶ ನಮ್ಮದು,” ಎಂದು ಹೇಳಿದರು.

ಪಿಎಸೈ ರಾಜುರೆಡ್ಡಿ ಮಾತನಾಡಿ “ನಮ್ಮ ಕರ್ತವ್ಯವನ್ನು ಗುರುತಿಸಿ ಹಬ್ಬದ ಸಂದರ್ಭ ನಮ್ಮನ್ನು ನೆನಪಿಸಿಕೊಂಡಿದ್ದಕ್ಕೆ ಸಂತೋಷ. ಇದು ನಮ್ಮಲ್ಲಿ ಮತ್ತಷ್ಟು ಹೊಣೆಗಾರಿಕೆ, ಪ್ರೇರಣೆ ಮೂಡಿಸುತ್ತದೆ,” ಎಂದು ಹೇಳಿದರು.

ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸಹ ತಮ್ಮ ಅಭಿಪ್ರಾಯ ಹಂಚಿಕೊಂಡು, ಇಂತಹ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಪರಸ್ಪರ ನಂಬಿಕೆ, ಸಹಕಾರ ಮತ್ತು ಬಾಂಧವ್ಯವನ್ನು ಹೆಚ್ಚಿಸಲು ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ರಾಖಿ ಕಟ್ಟುವ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಪ್ರಮುಖರಾದ ಎಂ ಬಿ ಮಂಜುನಾಥ್ ,ಸುರೇಶ್ ಸಿಂಗ್ , ಮುರುಳಿ ಕೆರೆಹಳ್ಳಿ ,ರಾಮಚಂದ್ರ ಮಹಿಳಾ ಮೋರ್ಚಾ ಪ್ರಮುಖರಾದ ನಾಗರತ್ನ ದೇವರಾಜ್ , ಪದ್ಮಾ ಸುರೇಶ್ , ಅಶ್ವಿನಿ , ರೇಖಾ ರವಿ , ಲಕ್ಷ್ಮಿ ಶ್ರೀನಿವಾಸ್ , ಶೈಲಾ ಪ್ರಭು ಹಾಗೂ ಇನ್ನಿತರರಿದ್ದರು.

ರಕ್ಷಾ ಬಂಧನ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪ್ರೀತಿಯ ಸಂಕೇತವಾದರೂ, ಈ ಬಾರಿ ಮಹಿಳಾ ಮೋರ್ಚಾ ಅದನ್ನು ಹೊಸ ಅರ್ಥ ನೀಡುವಂತೆ ಆಚರಿಸಿದೆ. ಪೊಲೀಸರನ್ನೂ ಸಮಾಜದ “ರಕ್ಷಕರು” ಎಂದು ಪರಿಗಣಿಸಿ, ಅವರಿಗೆ ರಾಖಿ ಕಟ್ಟುವ ಮೂಲಕ ಈ ಹಬ್ಬವನ್ನು ಜನಸಾಮಾನ್ಯರ ಮತ್ತು ಕಾನೂನು ರಕ್ಷಕರ ನಡುವಿನ ಬಾಂಧವ್ಯದ ಹಬ್ಬವನ್ನಾಗಿ ಮಾಡಿದ್ದಾರೆ.

ವಿಚಾರಣಾಧೀನ ಖೈದಿಗೂ ರಾಖಿ ಕಟ್ಟಿದ ಮಹಿಳೆಯರು

ಹೊಸನಗರ ತಾಲ್ಲೂಕು ಮಹಿಳಾ ಮೋರ್ಚಾ ವತಿಯಿಂದ ಸೋಮವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಮೊದಲು ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸಂಪ್ರದಾಯಬದ್ಧವಾಗಿ ರಾಖಿ ಕಟ್ಟಲಾಯಿತು. ಬಳಿಕ ಠಾಣೆಯ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಗೂ ಮಹಿಳೆಯರು ರಾಖಿ ಕಟ್ಟಿದರು.

Exit mobile version