ಶರಾವತಿ ಸಂತ್ರಸ್ತರ ತೋಟ ತೆರವು : ರೈತರ ಆಕ್ರೋಶ
ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ಥ ರೈತರೊಬ್ಬರು ದಶಕಗಳಿಂದ ಸಾಗುವಳಿ ಮಾಡುತ್ತಿದ್ದ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಿರುವ ಘಟನೆ ತಾಲೂಕಿನ ಚಿತ್ರಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶರಾವತಿ ಮುಳುಗಡೆ ಸಂತ್ರಸ್ಥ ರೈತರಾದ ನಿಡುಗೋಡು ರಾಮಪ್ಪ ಹಾಗೂ ಹಾಡಿಕೇವಿ ಈಶ್ವರ ಎಂಬುವವರು ಸಾಗುವಳಿ ಮಾಡುತ್ತಿದ್ದ ಜಮೀನುಗಳನ್ನು ತೆರವು ಮಾಡಿದ್ದಾರೆ.
ರೈತರಾದ ನಿಡುಗೋಡು ರಾಮಪ್ಪ ಎಂಬುವವರ ತಮ್ಮ ಸಾಗುವಳಿ ಭೂಮಿಯಲ್ಲಿ 350 ಅಡಿಕೆ ಗಿಡ,100 ಕಾಫಿ ಗಿಡ,25 ತಾಳೆ ಗಿಡ,50 ಬಾಳೆ ಗಿಡವನ್ನು ನೆಟ್ಟಿದ್ದರು. ಹಾಡಿಕೇವಿ ಈಶ್ವರ ಎಂಬುವವರು 250 ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ನೆಟ್ಟಿದ್ದರು.
ರಾಮಪ್ಪ ಹಾಗೂ ಈಶ್ವರ ಎಂಬುವವರು ಫಾರಂ ನಂಬರ್ 53/57 ಅರ್ಜಿ ಸಲ್ಲಿಸಿದ್ದರು. ಅರ್ಜಿ ಇತ್ಯರ್ಥ ಬಾಕಿ ಇರುವಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದಾರೆ. ಇದಕ್ಕೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅರಣ್ಯ ಭೂಮಿ ಸಾಗುವಳಿ ಕುರಿತು 2017 ರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶರಾವತಿ ಮುಳುಗಡೆ ಸಂತ್ರಸ್ಥರಾದ ನಿಡುಗೋಡು ರಾಮಪ್ಪ ಹಾಗೂ ಈಶ್ವರ ಎಂಬುವವರ ಮೇಲೆ ಪ್ರಕರಣ ದಾಖಲಿಸಿದ್ದರು. ಅರಣ್ಯ ಇಲಾಖೆ ಪ್ರಕರಣವನ್ನು ಪ್ರಶ್ನಿಸಿ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ರೈತರನ್ನು ಅರೋಪ ಮುಕ್ತ ಮಾಡಿತ್ತು ಎಂದು ಸಂತ್ರಸ್ಥ ರೈತ ನಿಡಗೋಡು ರಾಮಪ್ಪ ತಿಳಿಸಿದರು.
ಸಾಗುವಳಿ ಭೂಮಿಯಲ್ಲಿ ಶುಂಠಿ,ಜೋಳ,ಭತ್ತ ಬೆಳೆಯುತ್ತಿದ್ದೆವು.ಪ್ರಸ್ತುತ ಅಡಿಕೆ,ಕಾಫಿ,ಬಾಳೆ,ತಾಳೆ ಗಿಡ ಹಚ್ಚಿದ್ದೆವು.ಈಗ ಏಕಾಏಕಿ ಅರಣ್ಯ ಇಲಾಖೆ ಅಧಿಕಾರಿಗಳು ಸಾಗುವಳಿ ಭೂಮಿಯಲ್ಲಿ ನೆಟ್ಟಿದ್ದ ಗಿಡಗಳನ್ನು ತೆರವು ಮಾಡಿದ್ದಾರೆ.ಆಗಿರುವ ಬೆಳೆ ನಷ್ಟವನ್ನು ಅರಣ್ಯ ಇಲಾಖೆ ಅಧಿಕಾರಿಗಳು ತುಂಬಿಕೊಡಬೇಕು ಎಂದು ಸಂತ್ರಸ್ಥ ರೈತ ಸುಧಾಕರ್ ನಿಡಗೋಡು ಆಗ್ರಹಿಸಿದ್ದಾರೆ.
ಸಾಗುವಳಿ ಮಾಡುತ್ತಿದ್ದ ಜಾಗಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಿ ಶಿವಮೊಗ್ಗ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವು. ಆದರೆ ಅರ್ಜಿ ವಿಚಾರಣೆ ಬಾಕಿ ಇರುವಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಜಾಗ ತೆರವು ಮಾಡಿದ್ದಾರೆ ಎಂದು ಸುಧಾಕರ್ ಮತ್ತು ನಾಗರಾಜ್ ಆರೋಪಿಸಿದ್ದಾರೆ.
ಶಾಸಕರ ಸೂಚನೆಗೆ ಮನ್ನಣೆ ನೀಡಿಲ್ಲ
ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಪ್ರಯತ್ನ ಶೀಲರಾಗಿರುವಾಗಲೇ ಅವರದೇ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಸ್ಥಳೀಯ ಶಾಸಕಿ ಶಾರದಾಪೂರ್ಯನಾಯ್ಕ ಮತ್ತು ಸಚಿವರ ಸೂಚನೆ ಇದ್ಯಾಗ್ಯೂ ಅರಣ್ಯ ಇಲಾಖೆ ಅಧಿಕಾರಿಗಳು ಬೆಳೆ ತೆರವು ಮಾಡಿದ್ದಾರೆ ಎನ್ನಲಾಗಿದೆ.