POSTMANNEWS

ನೈಜ ಸುದ್ದಿ ನೇರ ಬಿತ್ತರ..

ಲೋಕಾರ್ಪಣೆಯಾಯಿತು ಐತಿಹಾಸಿಕ ಸಿಗಂಧೂರು ಸೇತುವೆ – ದಶಕಗಳ ಕನಸು ನನಸು

ಲೋಕಾರ್ಪಣೆಯಾಯಿತು ಐತಿಹಾಸಿಕ ಸಿಗಂಧೂರು ಸೇತುವೆ – ದಶಕಗಳ ಕನಸು ನನಸು

ಮಲೆನಾಡಿನ ಶರಾವತಿ ಸಂತ್ರಸ್ತರು ದಶಕಗಳಿಂದ ಕಾಯುತ್ತಿದ್ದ ಮಹತ್ವದ ಕನಸು ನನಸಾಗಿದೆ. ಸಿಗಂಧೂರು ಸೇತುವೆ ಇಂದು ಲೋಕಾರ್ಪಣೆಗೊಂಡಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂಧೂರು ಹೊಳೆಬಾಗಿಲು ಬಳಿ ನಿರ್ಮಿಸಲಾಗಿರುವ ಈ ಸೇತುವೆಯನ್ನು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಅಧಿಕೃತವಾಗಿ ಉದ್ಘಾಟಿಸಿದರು.

ಸೇತುವೆ ಲೋಕಾರ್ಪಣೆಗೂ ಮುನ್ನ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ವಿವಿಧ ಮುಖಂಡರು ಸಿಗಂಧೂರು ಚೌಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು, ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ನಾಗಪುರದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಸಾಗರಕ್ಕೆ ತೆರಳಿದರು.

ಸಾಗರ ಹೆಲಿಪ್ಯಾಡ್‌ನಿಂದ ಸಿಗಂದೂರಿಗೆ ಪ್ರಯಾಣಿಸಿ ಸೇತುವೆಯನ್ನು ಲೋಕಾರ್ಪಣೆಗೊಳಿಸಿ ಪೂಜೆ ಸಲ್ಲಿಸಿದರು. ಸೇತುವೆ ಲೋಕಾರ್ಪಣೆಯ ಬಳಿಕ, ಸಾಗರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸೇತುವೆಯ ಬಗ್ಗೆ ಜನಪ್ರತಿನಿಧಿಗಳು ಹರ್ಷ ವ್ಯಕ್ತಪಡಿಸಿ ಸೇತುವೆಯನ್ನು ಅಧಿಕೃತವಾಗಿ ಲೋಕಾಪರ್ಣೆಗೊಳಿಸಿದರು. ಈ ವೇಳೆ ತುಮರಿ ಸಾಗರ ಭಾಗದ ಸಾವಿರಾರು ಮಂದಿ ಉಪಸ್ಥಿತರಿದ್ದರು.

ಈ ಸೇತುವೆಯು ಶರಾವತಿ ಹಿನ್ನೀರಿನಿಂದಾಗಿ ಸಂಪರ್ಕ ಕಳೆದುಕೊಂಡಿದ್ದ ಸಾವಿರಾರು ಜನರ ದಶಕಗಳ ಬೇಡಿಕೆಯಾಗಿದ್ದು, ಮಲೆನಾಡು ಭಾಗದ ಸಂಪರ್ಕ ವ್ಯವಸ್ಥೆಗೆ ಹೊಸ ಆಯಾಮ ನೀಡಲಿದೆ.

About The Author

Exit mobile version