Rare Garuda Sculpted Mastikallu Discovered in Ripponpete Region, Karnataka
A rare Vijayanagara-era Mastikallu with Garuda sculpture and inscription has been discovered in the Ripponpete region of Shivamogga district, Karnataka.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದ ಹರತಾಳು ಗ್ರಾಮದ ಶಶಿಧರ ಭಟ್ಟರ ತೋಟದಲ್ಲಿ ಅಪರೂಪದ ಗರುಡ ಶಿಲ್ಪ ಹೊಂದಿರುವ ಮಾಸ್ತಿಕಲ್ಲು ಪತ್ತೆಯಾಗಿದೆ. ವಿಜಯನಗರ ಕಾಲಘಟ್ಟಕ್ಕೆ ಸೇರಿದ ಈ ಶಾಸನವು ಇತಿಹಾಸ ಹಾಗೂ ಪುರಾತತ್ವದ ದೃಷ್ಟಿಯಿಂದ ಮಹತ್ವ ಪಡೆದಿದೆ.
ಈ ಮಾಸ್ತಿಕಲ್ಲು ಸುಮಾರು ೩೨ ಇಂಚು ಉದ್ದ ಹಾಗೂ ೧೫ ೧/೨ ಇಂಚು ಅಗಲ ಹೊಂದಿದ್ದು, ಮೇಲ್ಭಾಗದಲ್ಲಿ ಪೂರ್ಣ ಕುಂಭ ಶಿಲ್ಪವಿದೆ. ಮೊದಲ ಪಟ್ಟಿಕೆಯಲ್ಲಿ ಗರುಡ ಶಿಲ್ಪ ಕೆತ್ತಲಾಗಿದ್ದು, ಎರಡನೇ ಪಟ್ಟಿಯಲ್ಲಿ ಒಬ್ಬ ಪುರುಷ ಮತ್ತು ಮೂವರು ಮಹಿಳೆಯರ ಚಿತ್ರಣ ಇದೆ.
ಒಂದು ಚಿತ್ರದಲ್ಲಿ ಎತ್ತಿದ ತೋಳು, ಕೈಪಟ್ಟಿ, ಎರಡು ಬಳೆ ಹಾಗೂ ಬೆರಳ ಮಧ್ಯೆ ನಿಂಬೆಹಣ್ಣು ಹಿಡಿದಿರುವ ಶಿಲ್ಪ ಕಾಣಸಿಗುತ್ತದೆ. ಇದಕ್ಕೆ ಕೆಳಭಾಗದಲ್ಲಿ ೭ ಸಾಲಿನ ಶಾಸನವಿದ್ದು, ಅಂತಿಮ ಪಟ್ಟಿಕೆಯಲ್ಲಿ ಪಲ್ಲಕ್ಕಿಯೊಂದಿಗೆ ಸಾಗುತ್ತಿರುವ ಇಬ್ಬರು ಪುರುಷರ ಶಿಲ್ಪವಿದೆ.
ಶಾಸನದ ವಿವರದಂತೆ, ಬೊಮ್ಮದೇವಗೌಡ ಎಂಬವರು ಮರಣ ಹೊಂದಿದ ನಂತರ, ಅವರ ಪತ್ನಿಯರಾದ ಗುರಾಕಾಯಿ, ಬೊಮ್ಮಾಯಿ ಮತ್ತು ಲಿಂಗಾಯಿ ಸಹಗಮನ (ಸತಿ) ಮಾಡಿ ಮೃತರಾದ ಬಗ್ಗೆ ಉಲ್ಲೇಖಿಸಲಾಗಿದೆ. ಈ ಶಾಸನದ ಸಂಶೋಧನೆಯನ್ನು ಆದಿತ್ಯ ನಂಜವಳ್ಳಿ ಹಾಗೂ ಗಣೇಶ್ ಕೆ.ಎನ್. (ಕೋಣಂದೂರು) ನಡೆಸಿದ್ದಾರೆ.
ರಾಜ್ಯ ಪುರಾತತ್ವ ಇಲಾಖೆ ನಿರ್ದೇಶಕರಾದ ಡಾ. ಶೆಜೇಶ್ವರ ಅವರು, ಮಾಸ್ತಿಕಲ್ಲಿನಲ್ಲಿರುವ ಗರುಡ ಶಿಲ್ಪವು ವೈಷ್ಣವ ಧರ್ಮಕ್ಕೆ ಸೇರಿದ ವ್ಯಕ್ತಿಯ ಮರಣವನ್ನು ಸೂಚಿಸುತ್ತದೆ ಎಂದು ತಿಳಿಸಿದ್ದು, ಇದು ಅತ್ಯಂತ ಅಪರೂಪದ ಮಾಸ್ತಿಕಲ್ಲು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಶಾಸನ ಸಂಶೋಧಕರಾದ ರಮೇಶ್ ಬಿ. ಹಿರೇಜಂಬೂರು ಅವರು, ಮಾಸ್ತಿಕಲ್ಲಿನಲ್ಲಿ ಗರುಡ ಶಿಲ್ಪ ಇರುವ ಉದಾಹರಣೆಗಳು ತೀರಾ ವಿರಳವಾಗಿದ್ದು, ಈ ಭಾಗದಲ್ಲಿ ಕಂಡುಬಂದ ಮೊದಲ ಶಾಸನವಾಗಿರಬಹುದು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಸುಮಾರು ೨೫,೦೦೦ಕ್ಕೂ ಹೆಚ್ಚು ಶಾಸನಗಳು ಕಂಡುಬಂದಿದ್ದರೂ, ಅಪರೂಪದ ಶಿಲ್ಪಗಳನ್ನು ಒಳಗೊಂಡ ಶಾಸನಗಳು ಹೊಸನಗರ ತಾಲೂಕಿನಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಈ ಭಾಗದಲ್ಲಿ ಪತ್ತೆಯಾಗಿರುವ ಮಿಥುನ ಶಿಲ್ಪದ ವೀರಗಲ್ಲುಗಳು ರಾಜ್ಯದ ಬೇರೆ ಯಾವ ಭಾಗದಲ್ಲೂ ಕಾಣಸಿಗದಂತಿದ್ದು, ಇದೀಗ ಪತ್ತೆಯಾದ ಗರುಡ ಶಿಲ್ಪದ ಮಾಸ್ತಿಕಲ್ಲು ಕೂಡ ಈ ಪ್ರದೇಶದ ಪುರಾತತ್ವ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.
Garuda Mastikallu, Vaishnavite stone inscription, Vijayanagara Empire Karnataka, ancient stone inscriptions, Ripponpete heritage site, rare archaeological discovery India, sati stone inscription, Karnataka history,
