150 ಜನರ ತಂಡ, 6 ಆನೆಗಳ  ಕಾರ್ಯಾಚರಣೆ : ಸಿದ್ದಾಪುರದಲ್ಲಿ ರೆಡಿಯೋ ಕಾಲರ್ ಅಡ್ಕಬಡ್ಕ ಆನೆ ಖೆಡ್ಡಾಕ್ಕೆ

150 ಜನರ ತಂಡ, 6 ಆನೆಗಳ  ಕಾರ್ಯಾಚರಣೆ : ಸಿದ್ದಾಪುರದಲ್ಲಿ ರೆಡಿಯೋ ಕಾಲರ್ ಅಡ್ಕಬಡ್ಕ ಆನೆ ಖೆಡ್ಡಾಕ್ಕೆ

ಶಿವಮೊಗ್ಗ/ ಸಿದ್ದಾಪುರ: ಮೂರು ದಿನಗಳ ಹಿಂದೆ ಶಿವಮೊಗ್ಗ ಕುಂದಾಪುರ ರೋಡ್​ನಲ್ಲಿಯೇ ಬಾಳೆಬರೆ ಘಾಟಿ ಇಳಿದು ಹೊಸಂಗಡಿ ಸಿದ್ದಾಪುರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕ ಮೂಡಿಸಿದ್ದ ಒಂಟಿ ಸಲಗ ಕೊನೆಗೂ ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿದೆ.

ಈ ಆನೆಯನ್ನು ಹಿಡಿಯಲು 150ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಹರಸಾಹಸಪಟ್ಟರು. ಚಿಕ್ಕಮಗಳೂರು ಎಲಿಫೆಂಟ್ ಟಾಸ್ಕ್ ಫೋರ್ಸ್ (ETF) ತಂಡದ ಜೊತೆಗೆ ಕುದುರೆಮುಖ ವನ್ಯಜೀವಿ ವಿಭಾಗ, ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಸಿದ್ದಾಪುರ, ಅಮಾಸೆಬೈಲು, ನಗರ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಹಾಗೂ ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳ ತಂಡವೂ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

ಮೊದಲು ಆನೆಯನ್ನು ಸುರಕ್ಷಿತವಾಗಿ ಕಾಡಿಗೆ ಅಟ್ಟುವ ಯೋಜನೆ ಹಾಕಿಕೊಳ್ಳಲಾಗಿತ್ತು. ಕಾಡಾನೆಯನ್ನು ಆಗುಂಬೆ ಘಾಟಿಯ ಮೂಲಕ ಮೇಲಕ್ಕೆ ಹತ್ತಿಸಿ, ಅಲ್ಲಿಂದ ಕುದುರೆ ಮುಖ ಕಾಡಿಗೆ ಹೋಗುವಂತೆ ಮಾಡಿ ಆನಂತರ ಸಕಲೇಶಪುರ ಕಾಡಿಗೆ ಅಟ್ಟುವ ಯೋಚನೆ ಇತ್ತು. ಆದರೆ ಈ ಕಾಡಾನೆ ಕಾಡು ಬಿಟ್ಟು ರೋಡಿನ ಮೇಲೆಯೇ ಹೆಚ್ಚು ಓಡಾಡುತ್ತಿರುವುದು ಅರಣ್ಯ ಅಧಿಕಾರಿಗಳಿಗೆ ದೊಡ್ಡ ಸಮಸ್ಯೆ ಉಂಟು ಮಾಡಿತ್ತಷ್ಟೆ ಅಲ್ಲದೆ ಘಾಟಿ ರಸ್ತೆಯಲ್ಲಿಯೇ ಕಾಡಾನೆಯನ್ನು ಘಟ್ಟದ ಮೇಲೆ ಹತ್ತಿಸುವುದು ಸವಾಲಿನ ಕೆಲಸವಾಗಿತ್ತು. ಹಾಗಾಗಿ ಅಂತಿಮವಾಗಿ ಸೆರೆ ಹಿಡಿಯುವ ನಿರ್ಧಾರಕ್ಕೆ ಬರಲಾಗಿತ್ತು.

ಅದರಂತೆ ಅಧಿಕಾರಿಗಳು ಸಿಬ್ಬಂಧಿ ಕಾರ್ಯಾಚರಣೆಗೆ ಇಳಿದಿದ್ದರು.  ಆನೆಯ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್ ಐಡಿ ಮೂಲಕ ಅದರ ಚಲನವಲನಗಳ ಮೇಲೆ ನಿರಂತರ ನಿಗಾ ಇರಿಸಲಾಗಿತ್ತು. ಇದರ ಆಧಾರದ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ನಿನ್ನೆ ಗುರುವಾರ ಮಧ್ಯಾಹ್ನದಿಂದಲೇ ಕಾರ್ಯಾಚರಣೆಯನ್ನು ಆರಂಭಿಸಿದರು.

ಸಕ್ರೆಬೈಲು ಆನೆ ಬಿಡಾರದಿಂದ ಬಂದ ಮೂರು ಆನೆಗಳು, ನಾಗರಹೊಳೆಯ ಮೂರು ಆನೆಗಳು ಕಾರ್ಯಾಚರಣೆಯ ಮುಂದಾಳತ್ವ ವಹಿಸಿದವು. ರೇಡಿಯೋ ಕಾಲರ್ ಮತ್ತು ಡ್ರೋನ್​ನಿಂದಾಗಿ ಸಿದ್ದಾಪುರ ಗ್ರಾಮದ ಮತ್ತಿಬೇರು ಕಾಡಿನಲ್ಲಿ ಆನೆ ಪತ್ತೆಯಾಯಿತು. ಇದರ ಬೆನ್ನಲ್ಲೆ  ಸಕ್ರೆಬೈಲಿನ ಬಹದ್ದೂರು, ಬಾಲಚಂದ್ರ, ಸೋಮಣ್ಣ ಆನೆಗಳು, ಮಾವುತರು, ಕಾವಾಡಿಗರು, ಅರಣ್ಯಾಧಿಕಾರಿಗಳು ಮತ್ತು ಪಶುವೈದ್ಯರು ಕಾಡಿನೊಳಗೆ ಪ್ರವೇಶಿಸಿದರು. ಸಂಜೆ 5:30ಕ್ಕೆ ಪಶುವೈದ್ಯರಾದ ಸಕ್ರೆಬೈಲಿನ ಡಾ!! ಕಲ್ಲಪ್ಪ, ಮಂಗಳೂರಿನ ಡಾ!! ಯಶಸ್ವಿ ಮತ್ತು ನಾಗರಹೊಳೆಯ ಡಾ!! ರಮೇಶ್ ಅವರು ಆನೆಗೆ ಅರಿವಳಿಕೆ ನೀಡಿದರು.  1.2 ಎಂ.ಎಲ್. ಅರಿವಳಿಕೆ ಡೋಸ್ ನೀಡಲಾಗಿತ್ತು.

ಡೋಸ್​ ಚುಚ್ಚಿಸಿಕೊಂಡ ಬಳಿಕವೂ ಕಾಡಾನೆಯು ಸುಮಾರು 1.5 ಕಿ.ಮೀ. ದೂರ ಕಾಡಿನಲ್ಲಿ ಸಾಗಿದೆ. ಅಂದಾಜು 20 ನಿಮಿಷಗಳ ನಂತರ ಹೆನ್ನಾಬೈಲು ಸಮೀಪದ ಉರಪಾಲು ಬಳಿ ಆನೆ ಪ್ರಜ್ನೆ ತಪ್ಪಿದೆ. ಆನಂತರ ನಾಗರಹೊಳೆಯಿಂದ ಆಗಮಿಸಿದ್ದ ದಸರ ಆನೆ ಭೀಮಾ, ಮಲಗಿದ್ದ ಕಾಡಾನೆಯನ್ನು ಎಬ್ಬಿಸಿ ನಿಲ್ಲಿಸಿತು. ಇದಕ್ಕೆ  ಮಹೇಂದ್ರ ಮತ್ತು ಏಕಲವ್ಯ ಆನೆಗಳು ಕೂಡ ಸಹಕಾರ ನೀಡಿದವು. ಸಕ್ರೆಬೈಲ್​ನ ಆನೆಗಳು ಕಾಡಾನೆಯನ್ನು ಲಾರಿಗೆ ಲೋಡ್ ಮಾಡಿದವು.

ಈ ಕಾಡಾನೆಯನ್ನು ಹಿಂದೊಮ್ಮೆ ಸೆರೆಹಿಡಿದು ಸುರಕ್ಷಿತ ಕಾಡಿಗೆ ಬಿಡಲಾಗಿತ್ತಾದರೂ, ಅದು ಪುನಃ ಜನವಸತಿ ಪ್ರದೇಶಗಳಿಗೆ ನುಗ್ಗಿ ತೊಂದರೆ ಕೊಡುತ್ತಿರುವುದರಿಂದ ಅದನ್ನು ಹಿಡಿಯುವುದಕ್ಕೆ ಅರಣ್ಯ ಕಾನೂನಿನಲ್ಲಿ ಅವಕಾಶ ಸುಲಭವಾಗಿ ಸಿಗುತ್ತದೆ. ಈ ನಿಟ್ಟಿನಲ್ಲಿ ಕಾಡಾನೆಯನ್ನು ಹಿಡಿದ ಅರಣ್ಯ ಇಲಾಖೆ, ಆ ಬಳಿಕ ಅದನ್ನು ಸಕ್ರೆಬೈಲ್​ ಆನೆ ಬಿಡಾರಕ್ಕೆ ರವಾನೆ ಮಾಡಿದೆ. ವಿಶೇಷ ಅಂದರೆ ಈ ಕಾಡಾನೆಯನ್ನು ಸಕಲೇಶಪುರದಲ್ಲಿ ಹಿಡಿಯಲಾಗಿತ್ತು.

ಅಲ್ಲಿಂದ  ಭದ್ರಾ ಅಭಯಾರಣ್ಯಕ್ಕೆ ಬಿಡಲಾಗಿತ್ತು.  ಲಕ್ಕವಳ್ಳಿ ವನ್ಯಜೀವಿ ವಿಭಾಗದಲ್ಲಿ ಇರದ ಆನೆಯು ಅಲ್ಲಿಂದ ತೀರ್ಥಹಳ್ಳಿಗೆ ಬಂದು ಆನಂತರ ಮೇನ್​ ರೋಡ್​ನಲ್ಲಿ ಘಾಟಿ ಇಳಿದು ಸಿದ್ದಾಪುರದ ಆನೆ ಎನಿಸಿತ್ತು.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಕಾಡುಪ್ರಾಣಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ

ಕಾಡುಪ್ರಾಣಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ A car crashed into…

18 hours ago

ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ

ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ Rippanpete Ganeshotsava 2026: Karnataka…

18 hours ago

ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ

ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ Hosanagara Hindu Mahasabha…

19 hours ago

ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ

ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ Forest mobile squad seizes…

2 days ago

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ Students and employees protest in Thirthahalli demanding…

2 days ago

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ Shivamogga Minister…

2 days ago