Breaking
12 Jan 2026, Mon

ಮಕ್ಕಳಿಗೆ ಶೈಕ್ಷಣಿಕ ಹಂತದಲ್ಲಿಯೇ ವ್ಯವಹಾರ ಜ್ಞಾನ ಅಗತ್ಯ – ಧನಲಕ್ಷ್ಮಿ ಗಂಗಾಧರ್

ಮಕ್ಕಳಿಗೆ ಶೈಕ್ಷಣಿಕ ಹಂತದಲ್ಲಿಯೇ ವ್ಯವಹಾರ ಜ್ಞಾನ ಅಗತ್ಯ – ಧನಲಕ್ಷ್ಮಿ ಗಂಗಾಧರ್

ರಿಪ್ಪನ್‌ಪೇಟೆ : ಮಕ್ಕಳಿಗೆ ಶೈಕ್ಷಣಿಕ ಹಂತದಲ್ಲಿಯೇ ವ್ಯವಹಾರ ಜ್ಞಾನ ಕಲಿಸುವ ಅಗತ್ಯವಿದೆ ಎಂದು ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಹೇಳಿದರು.

ರಿಪ್ಪನ್‌ಪೇಟೆಯ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಶನಿವಾರ ಸರ್ಕಾರಿ ಹಿರಿಯ ಮಾದರಿ ಪಾಠಶಾಲೆ ವತಿಯಿಂದ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅತಿ ವೇಗದಲ್ಲಿ ಸಾಗುತ್ತಿರುವ ಆಧುನಿಕ ಜಗತ್ತಿನಲ್ಲಿ ಶಿಕ್ಷಣದ ಜತೆಗೆ ವ್ಯವಹಾರ ಹಾಗೂ ಸಾಮಾನ್ಯ ಜ್ಞಾನ ಅತ್ಯಗತ್ಯವಿದೆ. ವಸ್ತುಗಳನ್ನು ಖರೀದಿಸುವ ಹಾಗೂ ಮಾರಾಟ ಮಾಡುವ ಬಗ್ಗೆ ಸಾಕಷ್ಟು ಅರಿವು ಇರಬೇಕು. ಇಲ್ಲವಾದಲ್ಲಿ ಸಮಾಜದಲ್ಲಿ ಬದುಕುವುದು ಕಷ್ಟಕರವಾಗಲಿದೆ ಎಂದು ತಿಳಿಸಿದರು.

ವೀಡಿಯೋ ಇಲ್ಲಿ ವೀಕ್ಷಿಸಿ👆

ಹಣ ಸಂಪಾದಿಸುವುದು ಎಷ್ಟು ಮುಖ್ಯವೋ ಅಷ್ಟೇ ಮಿತ ವ್ಯಯದೊಂದಿಗೆ ಉಳಿತಾಯ ಮಾಡುವ ಸಾಮಾನ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸದ್ಯದ ಪರಿಸ್ಥಿತಿ ಗಮನಿಸಿದರೆ ಮುಂದಿನ ದಿನಗಳಲ್ಲಿ ಯಾವುದೇ ವಸ್ತುಗಳು ಕಡಿಮೆ ಬೆಲೆಗೆ ಸಿಗುವ ಸಾಧ್ಯತೆ ಇಲ್ಲ ಎಂದು ತಿಳಿಸಿದರು.

ಮಕ್ಕಳ ಸಂತೆಯಲ್ಲಿ ಸೊಪ್ಪು-ತರಕಾರಿ, ಬಾಳೆಹಣ್ಣು, ಕಲ್ಲಂಗಡಿ ಹಾಗೂ ಅವರೆಕಾಯಿ ವ್ಯಾಪಾರ ಜೋರಾಗಿಯೇ ನಡೆಯಿತು. ಜತೆಗೆ ಪಾನೀಪುರಿ, ಚುರುಮುರಿ, ಹೋಳಿಗೆ, ಚಕ್ಕುಳಿ, ನಿಪ್ಪಟ್ಟು, ರವೆ ಉಂಡೆ, ಕೊಬ್ಬರಿ ಮಿಠಾಯಿ ಹಾಗೂ ಫ್ರೂಟ್ ಸಲಾಡ್ ಸೇರಿದಂತೆ ವಿವಿಧ ಖಾದ್ಯಗಳು ಗ್ರಾಹಕರ ಬಾಯಲ್ಲಿ ನೀರು ಬರಿಸಿದ್ದು ಖರೀದಿಸಿ ಸವಿದರು.

ಬಳಪ ಹಿಡಿಯುವ ಕೈಯಲ್ಲಿ ಮಕ್ಕಳು ತರಕಾರಿಗಳನ್ನು ತಕ್ಕಡಿಯಲ್ಲಿ ತೂಗಿ ಗ್ರಾಹಕರಿಂದ ಹಣವನ್ನು ಪಡೆಯುತ್ತಿದ್ದ ದೃಶ್ಯ ಕಂಡು ಪೋಷಕ ವರ್ಗ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತು.

ಮೂಲಂಗಿ, ಬದನೆಕಾಯಿ, ಹಸಿಮೆಣಸಿನಕಾಯಿ, ಅವರೆಕಾಯಿ, ಹಾಗಲಕಾಯಿ, ತೆಂಗಿನಕಾಯಿ, ಪಪ್ಪಾಯಿ, ಮಂಡಕ್ಕಿ, ಪಾನಿಪೂರಿ, ಜ್ಯೂಸ್ ಹೀಗೆ ದಿನಸಿ ಸಾಮಾನು ಸೇರಿದಂತೆ ಸ್ಟೇಷನರಿ ಸಾಮಾಗ್ರಿಗಳ ಮಾರಾಟದಲ್ಲಿ ಮಕ್ಕಳು ಪೋಷಕರನ್ನು ಮತ್ತು ಗ್ರಾಹಕರನ್ನು ಸಾರ್ವಜನಿಕರನ್ನು ತಮ್ಮತ್ತ ಆಕರ್ಷಿಸುವ ದೃಶ್ಯ ಕಂಡು ಹಲವರು ಬೆರಗಾಗಿ ನೋಡುವಂತೆ ಮಾಡಿತು.

ಇಲ್ಲಿನ ಸರ್ಕಾರಿ ಹಿರಿಯ ಮಾದರಿ ಪಾಠಶಾಲೆಯ ಒಂದನೇ ತರಗತಿಯಿಂದ ಏಳನೇ ತರಗತಿಯ ಪುಟಾಣಿ ಮಕ್ಕಳು ತಮ್ಮ ಪೋಷಕರ ಸಹಕಾರದೊಂದಿಗೆ ತಾವು ತಂದಂತಹ ತರಕಾರಿ, ಹಣ್ಣು-ಹಂಪಲು ಹಾಗೂ ಹೂವಿನ ವ್ಯಾಪಾರದಲ್ಲಿ ತಮ್ಮ ಬಳಿ ಗ್ರಾಹಕರನ್ನು ಸೆಳೆದುಕೊಳ್ಳಲು ಯಶಸ್ವಿಯಾದರು.

ಪಪ್ಪಾಯಿ 30 ರೂ. ಕೆ.ಜಿ. ಆದರೆ ಅವರೆಕಾಯಿ 20 ರೂ., ಬದನೆಕಾಯಿ 30 ರೂ., ಬಾಳೆದಿಂಡು 20 ರೂ., ನೆಲ್ಲಿಕಾಯಿ 10 ರೂ., ಕುಂಬಳಕಾಯಿ ಕೆ.ಜಿ.ಗೆ 20 ರೂ. ಹೀಗೆ ದರ ಪಟ್ಟಿ ಹಾಕಿ ವ್ಯಾಪಾರ ಮಾಡುತ್ತಿದ್ದ ಮಕ್ಕಳ ಬಳಿ ಹೋಗಿ ತರಕಾರಿಯ ಬೆಲೆ ಕೇಳಿ ಮಕ್ಕಳನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೂ ಕೂಡಾ ತಮ್ಮ ಸಮಯ ಪ್ರಜ್ಞೆ, ಜಾಣ್ಮೆಯಿಂದ ಮಕ್ಕಳು ತರಕಾರಿಯ ಮೇಲೆ ಕಗ್ಗಾವಲು ಇಟ್ಟು ಎಲ್ಲಿಯೂ ಮೋಸವಾಗದಂತೆ ಮುಂಜಾಗ್ರತೆ ವಹಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಯಿತು.

ಒಟ್ಟಾರೆಯಾಗಿ ವ್ಯಾಸಂಗದ ಜೊತೆ ಯಾವು ಏನಾದರೊಂದು ಸಾಧನೆ ಮಾಡುತ್ತೇವೆಂಬ ಉತ್ಸಾಹದಲ್ಲಿ ಮಕ್ಕಳು ತರಕಾರಿ ದಿನಸಿ ಸಾಮಾನು ಪಾನಿಪೂರಿ, ಮಸಾಲ ಮಂಡಕ್ಕಿ ಹೀಗೆ ಬಗೆಬಗೆಯ ವಸ್ತುಗಳ ಮಾರಾಟ ಮಾಡಲು ನಾವು ಸದಾಸಿದ್ದ ಎಂಬುದನ್ನು ಸಾಬೀತು ಪಡಿಸಿದರು. 240 ವಿದ್ಯಾರ್ಥಿಗಳು ಸುಮಾರು ನೂರಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದಿದ್ದು ಲಕ್ಷಕ್ಕೂ ಹೆಚ್ಚು ವಹಿವಾಟು ನಡೆದಿದೆ ಎನ್ನಲಾಗುತ್ತಿದೆ.

ಈ ಸಂಧರ್ಭದಲ್ಲಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಹೆಚ್.ಎನ್.ಉಮೇಶ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಮಂಜಪ್ಪ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಶೈಲಾ  ಶಿಕ್ಷಕಿ ಸುಲೇಖಾ , ನಗೀನಾ , ಶ್ರೀಧರ್ ಚಿಗುರಿ ಹಾಗೂ ಇನ್ನಿತರರಿದ್ದರು.

About The Author

By ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Leave a Reply

Your email address will not be published. Required fields are marked *

Exit mobile version