Ripponpete | 40 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಊರಿಗೆ ಮರಳಿದ ಯೋಧನಿಗೆ ಅದ್ದೂರಿ ಸ್ವಾಗತ
ರಿಪ್ಪನ್‌ಪೇಟೆ : ಕಳೆದ 40 ವರ್ಷಗಳ ಕಾಲ ಶತ್ರುಗಳ ಮೇಲೆ ಹದ್ದಿನ ಕಣ್ಣಿಟ್ಟು ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ. ಇದೀಗ ಸೇವೆಯಿಂದ ನಿವೃತ್ತಿ ಹೊಂದಿ ತನ್ನ ತವರೂರಿಗೆ ಬಂದಿದ್ದೆ ಬಂತು. ಆ ಸಂಭ್ರಮ ಬರೀ ಆತನ ಕುಟುಂಬಕ್ಕೆ ಮಾತ್ರ ಸೀಮಿತವಾಗದೇ ಆ ಇಡೀ ಊರಲ್ಲಿ ಹಬ್ಬದ ಸಂಭ್ರಮಕ್ಕೆ ಕಾರಣವಾಗಿತ್ತು.
ಕುಗ್ರಾಮವಾದ ಕಲ್ಲೂರು ಗ್ರಾಮದ ಯುವಕ ಸೈನಿಕ ಸೇವೆಗಾಗಿ ಕಳೆದ 40 ವರ್ಷದ ಹಿಂದೆ ಸೇರಿ ಈಗ ನಿವೃತ್ತಿ ಹೊಂದಿ ಹುಟ್ಟೂರಿಗೆ ಮರಳಿದ್ದಾರೆ ಬೂದ್ಯಪ್ಪ ಗೌಡರು.
ದೇಶದ ಗಡಿಯಲ್ಲಿ ಹಗಲು ರಾತ್ರಿ ಎನ್ನದೇ ಸೇವೆ ಸಲ್ಲಿಸಿ ಬಂದಿರುವ ಯೋಧನಿಗೆ ಗ್ರಾಮಸ್ಥರೆಲ್ಲರೂ ಸೇರಿ ಅದ್ದೂರಿ ಸ್ವಾಗತ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.ಇಂದು ಬೆಳಿಗ್ಗೆ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಇತಿಹಾಸ ಪ್ರಸಿದ್ದ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಆವರಣದಲ್ಲಿ ಹೂಮಾಲೆ ಹಾಕಿ ಬರಮಾಡಿಕೊಂಡ ಗ್ರಾಮಸ್ಥರು ಬಳಿಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿನಾಯಕ ವೃತ್ತದವರೆಗೂ ಭವ್ಯ ಮೆರವಣಿಗೆ ನಡೆಸಿದರು.
ಮಾರ್ಗ ಮಧ್ಯದಲ್ಲಿ ಅನೇಕ ಯುವಕರು ಯೋಧನಿಗೆ ಹೂಮಾಲೆ ಹಾಕಿ ಅವರಿಗೆ ಗೌರವದ ವಂದನೆ ಸಲ್ಲಿಸುತ್ತಿದ್ದರು. ಇನ್ನು ಅನೇಕ ಮಹಿಳೆಯರು ತಮ್ಮ ಪುಟ್ಟ ಪುಟ್ಟ ಮಕ್ಕಳನ್ನು ಯೋಧನ ಕೈಗೆ ಕೊಟ್ಟು ಹರ್ಷ ಪಡುತ್ತಿದ್ದರು. ನಂತರ ವಿನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ ಭವ್ಯ ಸ್ವಾಗತ ಮಾಡುವುದರೊಂದಿಗೆ ನಿವೃತ್ತಿ ಜೀವನಕ್ಕೆ ಶುಭಕೋರಿದರು.
ಬಳಿಕ ಮಾತನಾಡಿದ ನಿವೃತ್ತ ಸೈನಿಕ ಬೂದ್ಯಪ್ಪ ಗೌಡ ಹೆತ್ತ ತಾಯಿ ಹಾಗೂ ಜನ್ಮ ಪಡೆದ ದೇಶದ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಬರೀ ಅವರ ಸೇವೆಯನ್ನಷ್ಟೆ ನಾವು ಮಾಡಬಹುದು. ನಾನು ಕಳೆದ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದೇನೆ. ಇವತ್ತು ಗ್ರಾಮಸ್ಥರು ನೀಡಿದ ಸ್ವಾಗತ ಹೃದಯ ತುಂಬಿದೆ. ಇದಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ. ಇಷ್ಟು ವರ್ಷ ಗಡಿಯಲ್ಲಿ ದೇಶ ಸೇವೆ ಮಾಡಿದ್ದೇನೆ. ಈಗ ಊರಲ್ಲಿ ಜಮೀನಿನಲ್ಲಿ ಕೃಷಿಕನಾಗಿ ಕೆಲಸ ಮಾಡುತ್ತೇನೆ. ಗಡಿ ಸೇವೆಯ ಬಳಿಕ ಭೂತಾಯಿ ಸೇವೆಗೆ ಅಣಿಯಾಗಲಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಒಕ್ಕಲಿಗ ಸಮಾಜದ ಅಧ್ಯಕ್ಷ ಎಂ.ಬಿ.ಲಕ್ಷ್ಮಣಗೌಡ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವಾಸಪ್ಪಗೌಡ, ಮುಖಂಡರಾದ ರವೀಂದ್ರ ಕೆರೆಹಳ್ಳಿ, ಎಂ.ಬಿ.ಮಂಜುನಾಥ್,ಎಂ ಎಂ ಪರಮೇಶ್, ಕೆರೆಹಳ್ಳಿ ಮುರುಳಿ, ಪರಮೇಶ ತಳಲೆ, ಹಾಲಪ್ಪಗೌಡ ಬೈರಾಪುರ, ಪ್ರಮೀಳಾ ಎಲ್.ಗೌಡ, ಟೇಕೇಶಪ್ಪಗೌಡ ಬೈರಾಪುರ, ವೆಂಕಟೇಶ ಹಾಲುಗುಡ್ಡೆ, ಕಲ್ಲೂರಿನ ಸಹಕಾರಿ ದುರೀಣ ಕೆ.ಎಸ್.ಲೋಕಪ್ಪಗೌಡ, ಕಾಂಗ್ರೆಸ್ ಮಖಂಡ ಕಲ್ಲೂರು ತೇಜಮೂರ್ತಿ, ನಿವೃತ್ತ ಸೈನಿಕ ಶಿವಪ್ಪ ರಾವಣಕಟ್ಟೆ, ಇನ್ನಿತರರು ಪಾಲ್ಗೊಂಡಿದ್ದರು.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್