ವಾರದ ಸಂತೆ ಮೀರಿಸಿದ ಹಾರೋಹಿತ್ಲು ಶಾಲೆಯ ಮಕ್ಕಳ ಸಂತೆ
ರಿಪ್ಪನ್ ಪೇಟೆ :ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೋಹಿತ್ತಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಬುಧವಾರ ಆಯೋಜಿಸಲಾಗಿತ್ತು.
ತರಕಾರಿಯನ್ನು ಒಳಗೊಂಡಂತೆ ವಿವಿಧ ವಸ್ತುಗಳ ಮಾರಾಟ ಮಾಡುವಲ್ಲಿನ ಮಕ್ಕಳ ಕೌಶಲ್ಯ ಯಾವುದೇ ವ್ಯಾಪಾರಸ್ಥನ ಸಾಮರ್ಥ್ಯಕ್ಕಿಂತ ಕಡಿಮೆ ಏನು ಇರಲಿಲ್ಲ. ತಾವು ಖರೀದಿಗಿಟ್ಟ ವಸ್ತುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಎಲ್ಲ ಕೌಶಲಗಳು ನೈಜ ಸಂತೆಯನ್ನು ಮೀರಿಸುವಂತೆ ನಡೆಯುವ ಮೂಲಕ ಈ ಅಪರೂಪದ ಮಕ್ಕಳ ಸಂತೆ ಗಮನ ಸೆಳೆಯಿತು.
ಶಾಲಾ ಮಕ್ಕಳಿಗೆ ವ್ಯವಹಾರಿಕ ಜ್ಞಾನ ಮತ್ತು ಸಂವಹನ ಕೌಶಲವನ್ನು ಬೆಳೆಸುವ ಉದ್ದೇಶದಿಂದ ಶಾಲೆಯ ಅಂಗಳದಲ್ಲಿ ಆಯೋಜಿಸಿದ್ದ ಈ ಸಂತೆಯಲ್ಲಿ ಮಕ್ಕಳು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು. ತರಕಾರಿ, ಹಣ್ಣು ಹಾಗೂ ಪಾನಿಪೂರಿ, ಬೋಂಡಾ, ಟೀ,ಕಾಫಿ, ಶರಭತ್ತು,ಎಳನೀರು, ಮಸಾಲೆ ಮಂಡಕ್ಕಿ, ಸೇರಿದಂತೆ ಇತರೆ ಆಹಾರ ವಸ್ತುಗಳನ್ನು ಮಾರಾಟ ಮಾಡಿ ಲಾಭ-ನಷ್ಟದ ಪರಿಕಲ್ಪನೆ ಮತ್ತು ಸಾರ್ವಜನಿಕರೊಂದಿಗೆ ವ್ಯವಹರಿಸುವ ವಿಧಾನದ ಬಗ್ಗೆ ತಿಳಿದುಕೊಂಡರು.
ವಾರದ ಸಂತೆಯೊಳಗಿನ ಎಲ್ಲಾ ಅಂಶಗಳು ಮಕ್ಕಳ ಸಂತೆಯಲ್ಲಿ ಮಿಳಿತವಾಗಿತ್ತು. ಸುಮ್ಮನೆ ಕುತೂಹಲಕ್ಕೆಂದು ಬಂದ ಸಾಕಷ್ಟು ಗ್ರಾಮದ ನಿವಾಸಿಗಳು ಬ್ಯಾಗ್ ಹಿಡಿದು ಮಕ್ಕಳೊಂದಿಗೆ ಚರ್ಚಿಸಿ ವ್ಯಾಪಾರ ಮಾಡುವ ಮೂಲಕ ವಾರದ ಸಂತೆಯನ್ನು ಮಕ್ಕಳ ಸಂತೆಯಲ್ಲೆ ಮುಗಿಸುವ ಧಾವಂತ ತೋರಿದ್ದು ವಿಶೇಷ ಆಗಿತ್ತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬೀರ ನಾಯಕ, ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್,ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯಚಂದ್ರ ,ಪ್ರಭಾರಿ ಮುಖ್ಯ ಶಿಕ್ಷಕಿ ಪೂಜಾ, ಸಹ ಶಿಕ್ಷಕರಾದ ಮಾಲತೇಶ್ ಎಂ ,ಕಾವ್ಯಾ ಪತ್ರಕರ್ತರಾದ ಸಬಾಸ್ಟಿನ್,ರಫಿ ರಿಪ್ಪನ್‌ಪೇಟೆ, SDMC ಸದಸ್ಯರಾದ ರಮೇಶ್ ,ಶ್ರೀಮತಿ ,ಸತೀಶ್ ,ನಸ್ರೀನ್ ಭಾನು ,ಲಕ್ಷ್ಮಿ ಹಾಗೂ ಮಕ್ಕಳ ಪಾಲಕ-ಪೋಷಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನವ್ಯ ,ನಿಶ್ಚಿತಾ ಹಾಗೂ ಸ್ವಾತಿ ಪ್ರಾರ್ಥಿಸಿದರು.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್