Ripponpete | ಸ್ತನ ಕ್ಯಾನ್ಸರ್ ಬಗ್ಗೆ ಆತಂಕ ಬೇಡ ಆದರೆ ಎಚ್ಚರಿಕೆಯಿರಲಿ – ಡಾ ಕೀರ್ತನಾ

Ripponpete | ಸ್ತನ ಕ್ಯಾನ್ಸರ್ ಬಗ್ಗೆ ಆತಂಕ ಬೇಡ ಆದರೆ ಎಚ್ಚರಿಕೆಯಿರಲಿ – ಡಾ ಕೀರ್ತನಾ
ರಿಪ್ಪನ್‌ಪೇಟೆ : ಸ್ತನ ಕ್ಯಾನ್ಸರ್ ಬಗ್ಗೆ ಆತಂಕ ಮತ್ತು ಭಯ ಬೇಡ ಆದರೆ ಎಚ್ಚರವಿರಲಿ ಎಂದು ನಾರಾಯಣ ಹೃದಯಾಲಯದ  ವೈದ್ಯರಾದ ಡಾ. ಕೀರ್ತನಾ ಹೇಳಿದರು.

ಇಂದು ಪಟ್ಟಣದ ಗ್ರಾಮ ಪಂಚಾಯತ್ ಆವರಣದಲ್ಲಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯತ್ ಮತ್ತು ನಾರಾಯಣ ಹೃದಯಾಲಯ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಮ್ಯಾಮೊಗ್ರಫಿ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು ಸ್ತನ ಕ್ಯಾನ್ಸರ್ ಬಗ್ಗೆ ನಿರ್ಲಕ್ಷ್ಯ ತೋರುವುದರಿಂದ ಜೀವ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ ಆದ್ದರಿಂದ 40 ವರ್ಷ ದಾಟಿದ ಮಹಿಳೆಯರು ಯಾವುದೇ ಹಿಂಜರಿಕೆಯಿಲ್ಲದೆ ಸ್ತನ ಮ್ಯಾಮೊಗ್ರಫ಼ಿ ಮಾಡಿಕೊಳ್ಳುವಂತೆ ಕರೆ ನೀಡಿದರು.


ಶಿಬಿರಕ್ಕೆ ಚಾಲನೆ ರಿಪ್ಪನ್‌ಪೇಟೆ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಮಾತನಾಡಿ ಮಹಿಳೆಯರಿಗೆ ಮಾರಕವಾಗಿರುವ ಸ್ತನ ಕ್ಯಾನ್ಸರ್ ಬಗ್ಗೆ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ನಾರಾಯಣ ಹೃದಯಾಲಯ ಸಂಸ್ಥೆ ಕಾರ್ಯ ವೈಖರಿ ಶ್ಲಾಘನೀಯವಾಗಿದ್ದು ಮಹಿಳೆಯರು ಆರೋಗ್ಯದ ದೃಷ್ಟಿಯಿಂದ ಯಾವುದೇ ಅಳುಕು ತೋರದೇ ಪರೀಕ್ಷಿಸಿಕೊಳ್ಳಬೇಕಾಗಿದೆ ಎಂದರು.

ಈ ಸಂಧರ್ಭದಲ್ಲಿ ನಾರಾಯಣ ಹೃದಯಾಲದ ನಿರ್ವಹಣಾ ಮುಖ್ಯಸ್ಥ ಗಣೇಶ್ ಎಸ್ , ಗ್ರಾಪಂ ಸದಸ್ಯರುಗಳಾದ ಮಧುಸೂಧನ್ , ಪಿ ರಮೇಶ್ , ವೇದಾವತಿ ಪರಮೇಶ್ , ಚಂದ್ರೇಶ್ , ದೀಪಾ ಸುದೀರ್ , ವಿನೋದಾ , ಗಣಪತಿ  , ಪ್ರಕಾಶ್ ಪಾಲೇಕರ್ ಮುಖಂಡರಾದ ಆರ್ ಎನ್ ಮಂಜುನಾಥ್ ಹಾಗೂ ಇನ್ನಿತರರಿದ್ದರು……
ಸ್ತನ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು…

ಮಹಿಳೆಯರನ್ನು ಬಾಧಿಸುವ ಹಲವಾರು ಆರೋಗ್ಯ ಸಮಸ್ಯೆಗಳಲ್ಲಿ ಸ್ತನದ ಕ್ಯಾನ್ಸರ್ ಕೂಡ ಒಂದು. ಗ್ಲೋಬೋಕಾನ್ ಎಂಬ ಸಂಸ್ಥೆ 2020ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಒಬ್ಬ ಮಹಿಳೆಯಲ್ಲಿ ಪರೀಕ್ಷೆ ಮಾಡಿದಾಗ ಸ್ತನದ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತಿದೆ, ಪ್ರತಿ ವರ್ಷ 1,78,000 ಸ್ತನದ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಭಾರತೀಯ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯು ಗರ್ಭಗೊರಳಿನ (ಸರ್ವೈಕಲ್) ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯನ್ನೂ ಮೀರಿ ಮುನ್ನುಗ್ಗುತ್ತಿರುವುದು ಸ್ಪಷ್ಟವಾಗಿದೆ.

ಇಂದು ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡುಬರುವುದಕ್ಕಿಂತ ಭಾರತದಲ್ಲಿ ಹೆಚ್ಚಾಗಿ ಕಿರಿಯ ವಯಸ್ಸಿನಲ್ಲಿ ಸ್ತನದ ಕ್ಯಾನ್ಸರ್ ಕಂಡುಬರುತ್ತಿರುವುದು ಕಾಳಜಿಯ ವಿಷಯವಾಗಿದೆ. ಹಿಂದೆಲ್ಲಾ 40-50 ವರ್ಷ ವಯಸ್ಸಿನವರನ್ನು ಕಾಡುತ್ತಿದ್ದ ಈ ರೋಗ ಇಂದು 30 ವರ್ಷಗಳಾದವರಿಗೂ ಬರುತ್ತಿದೆ. ಆದ್ದರಿಂದ ಮರಣಕ್ಕೆ ತುತ್ತಾಗುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಿರುವುದನ್ನು (ಪ್ರತಿ ವರ್ಷ 80 ಸಾವಿರಕ್ಕೂ ಹೆಚ್ಚು ಜನ) ಗಮನಿಸಲಾಗಿದೆ. ಈ ರೋಗದ ಬಗ್ಗೆ ಅರಿವು ಇಲ್ಲದಿರುವುದು, ಆರೋಗ್ಯದ ಕುರಿತು ಅಸಡ್ಡೆ, ಏನೋ ಆಗುತ್ತದೆ ಎಂಬ ಭಯದಿಂದ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳದೇ ಇರುವುದು ಮತ್ತು ಗೊತ್ತಾದರೂ ತಮ್ಮ ಕುಟುಂಬದ ಜವಾಬ್ದಾರಿಗಳ ನಡುವೆ ಆರೋಗ್ಯದ ಕಾಳಜಿ ಮಾಡದಿರುವುದು ಇದಕ್ಕೆ ಕಾರಣ.

ಸ್ತನದ ಕ್ಯಾನ್ಸರ್ ಲಕ್ಷಣಗಳು

ಸ್ತನದ ಕ್ಯಾನ್ಸರ್ ಸ್ತನದ ಅಂಗಾಂಶದ ಜೀವಕೋಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕ್ಯಾನ್ಸರ್ ನಂತರ ಹತ್ತಿರದ ಅಂಗಾಂಶಗಳು ಮತ್ತು ದೇಹದ ಇತರ ಭಾಗಗಳಿಗೆ ಹರಡುತ್ತದೆ. ಹಾರ್ಮೋನ್‍ಗಳ ಏರುಪೇರು, ಜೀವನಶೈಲಿ (ಬೊಜ್ಜು), ಜೆನೆಟಿಕ್ (ಆನುವಂಶೀಯ) ಮತ್ತು ಪರಿಸರದ ಅಂಶಗಳು ಸ್ತನದ ಕ್ಯಾನ್ಸರ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ಸ್ತನದ ಕ್ಯಾನ್ಸರಿನ ಮೊದಲ ಲಕ್ಷಣವೆಂದರೆ ಸ್ತನದ ಯಾವುದೇ ಭಾಗದಲ್ಲಿ ರೂಪುಗೊಳ್ಳುವ ಗಡ್ಡೆ. ಮ್ಯಾಮೊಗ್ರಾಮ್ ಪರೀಕ್ಷೆಯ ಮೂಲಕ ಸ್ತನದ ಗಡ್ಡೆ ರೋಗಲಕ್ಷಣಗಳನ್ನು ಉಂಟುಮಾಡುವಷ್ಟು ದೊಡ್ಡದಾಗುವ ಮೊದಲು ಪತ್ತೆಹಚ್ಚಬಹುದು. ಗಡ್ಡೆಗಳು ಪೆನ್ಸಿಲ್‍ನ ತುದಿಯಷ್ಟು ಚಿಕ್ಕದಾಗಿರಬಹುದು (1 ಮಿಮೀ) ಅಥವಾ ಸ್ವಲ್ಪ (50 ಮಿಮೀ) ದೊಡ್ಡದಾಗಿರಬಹುದು. ಎಫ್‍ಎನ್‍ಎಸಿ ಪರೀಕ್ಷೆಯ ಮೂಲಕ ಸುಲಭವಾಗಿ ಇದನ್ನು ಪತ್ತೆ ಹಚ್ಚಬಹುದಾಗಿದೆ. ಇದು ಅತ್ಯಂತ ಸರಳ ಮತ್ತು ಕಡಿಮೆ ಖರ್ಚಿನಲ್ಲಿ ಮಾಡಿಸಿಕೊಳ್ಳುವ ಪರೀಕ್ಷೆಯಾಗಿದೆ.

ಕ್ಯಾನ್ಸರ್ ಬೆಳೆಯುತ್ತಾ ಹೋದಂತೆಲ್ಲಾ ಸ್ತನ ಭಾಗದಲ್ಲಿ ನೋವಿಲ್ಲದ ಗೆಡ್ಡೆಗಳು, ಸ್ತನದ ಆಕಾರ, ಗಾತ್ರದಲ್ಲಿ ವ್ಯತ್ಯಾಸ, ನಿಪ್ಪಲ್‍ನಲ್ಲಿ ಹಳದಿ ಅಥವಾ ಹಸಿರು ಮಿಶ್ರಿತ ದ್ರವರೂಪ ಸ್ರಾವ, ಊತ, ಸ್ತನ ಅಥವಾ ತೊಟ್ಟುಗಳಲ್ಲಿ ನೋವು, ತೊಟ್ಟು ಒಳಕ್ಕೆ ಹೋಗುವುದು (ತೊಟ್ಟುಗಳ ಒಳಮುಖವಾಗಿ ತಿರುಗುತ್ತದೆ), ಸ್ತನ ಚರ್ಮದ ಅಥವಾ ತೊಟ್ಟುಗಳು ಕೆಂಪಾಗುವುದು, ಚರ್ಮದಲ್ಲಿ ಅಸಹಜತೆ ಅಥವಾ ಮಬ್ಬಾಗಿಸುವಿಕೆ, ತೊಟ್ಟುಗಳ ಬಳಿ ಅಥವಾ ಸ್ತನ ಪ್ರದೇಶದಲ್ಲಿ ಗಡ್ಡೆ, ಕಂಕುಳಲ್ಲಿ ಗಡ್ಡೆ ಹೀಗೆ ಹಲವಾರು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಸ್ತನದ ಕ್ಯಾನ್ಸರ್ ಹೇಗೆ ಬರುತ್ತದೆ?

ಪ್ರತಿಯೊಂದು ಸ್ತನವು ಹಾಲನ್ನು ಉತ್ಪಾದಿಸುವ ಲೋಬ್ಸ್ ಎಂದು ಕರೆಯಲ್ಪಡುವ 15-20 ಗ್ರಂಥಿಗಳನ್ನು ಹೊಂದಿದೆ. ಸ್ತನದ ಕ್ಯಾನ್ಸರ್ ಸಾಮಾನ್ಯವಾಗಿ ಈ ಲೋಬ್ಸ್‍ನಲ್ಲಿ ಪ್ರಾರಂಭವಾಗುತ್ತದೆ. ಮಹಿಳೆಯರಲ್ಲಿ ಹೋಲಿಸಿದರೆ ಒಂದು ಸಾವಿರ ಪುರುಷರಲ್ಲಿ ಒಬ್ಬರಿಗೆ ಮಾತ್ರ ಸ್ತನದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಇದು ಸ್ತನದ ತೊಟ್ಟುಗಳ ಪ್ರದೇಶದ ಕೆಳಗಿರುವ ಒಂದು ಗಟ್ಟಿ ಗಡ್ಡೆಯಾಗಿ ಕಂಡುಬರುತ್ತದೆ. 0, 1, 2, 3 ಮತ್ತು 4 – ಹೀಗೆ ಈ ಮಾರಣಾಂತಿಕ ರೋಗಕ್ಕೆ ವಿವಿಧ ಹಂತಗಳಿವೆ. 0 ಹಂತದಲ್ಲಿದ್ದರೆ ಕ್ಯಾನ್ಸರ್ ಸ್ತನ ನಾಳಕ್ಕೆ (ಹಾಲು ಉತ್ಪಾದಿಸುವ ಸ್ಥಳ) ಸೀಮಿತವಾಗಿದೆ ಎಂದರ್ಥ, ಇದು ಮೊದಲಿನ ಹಂತವಾಗಿದೆ. ಮುಂದಿನ ಹಂತಗಳಲ್ಲಿ ಇದರ ಗಂಭೀರತೆ ಹೆಚ್ಚಾಗುತ್ತಾ ಹೋಗುತ್ತದೆ. ನಮ್ಮ ದೇಶದಲ್ಲಿ ಪ್ರತಿ ಮೂವರು ಸ್ತನ ಕ್ಯಾನ್ಸರ್ ರೋಗಿಗಳಲ್ಲಿ ಒಬ್ಬರು ಸಾವಿಗೀಡಾಗುವ ಸಾಧ್ಯತೆ ಇರುತ್ತದೆ. ಎಲ್ಲರೂ ಸಾಯುವುದಿಲ್ಲ. ಈ ಬಗ್ಗೆ ಭಯ ಬೇಡ. ಸ್ತನದ ಕ್ಯಾನ್ಸರ್ ಬೇಗನೆ ಪತ್ತೆಯಾದರೆ ಸೂಕ್ತ ಚಿಕಿತ್ಸೆ ನೀಡಿ ಜೀವ ಉಳಿಸಬಹುದು. ನಮ್ಮ ದೇಶದಲ್ಲಿ ಇಂದು ಹಂತ 3 ಅಥವಾ ಹಂತ 4ರಂತಹ ಮುಂದುವರಿದ ಹಂತಗಳಲ್ಲಿ ಸ್ತನದ ಕ್ಯಾನ್ಸರ್ ಪತ್ತೆ ಹಚ್ಚಲಾಗುತ್ತದೆ. ಪಶ್ಚಿಮದ ದೇಶಗಳಂತೆ ಹಂತ 1 ಅಥವಾ ಹಂತ 2ರಂತಹ ಸ್ತನದ ಕ್ಯಾನ್ಸರ್‍ನ ಆರಂಭಿಕ ಹಂತಗಳಲ್ಲಿಯೇ ಅದನ್ನು ಪತ್ತೆಹಚ್ಚಬೇಕಾಗಿದೆ.

ಸ್ತನದ ಕ್ಯಾನ್ಸರ್ ಪರೀಕ್ಷೆ ಮತ್ತು ಚಿಕಿತ್ಸೆ

ಸ್ತನದ ಕ್ಯಾನ್ಸರ್ ಇದೆಯೇ ಎಂಬುದನ್ನು ಮಹಿಳೆಯರು ಸ್ವತ: ತಮ್ಮ ಸ್ತನ ಪ್ರದೇಶದಲ್ಲಿ ಪರೀಕ್ಷಿಸಿಕೊಳ್ಳಿ. ಮೂವತ್ತು ವರ್ಷ ಆಗಿರುವ ಮಹಿಳೆಯರು ಮುಟ್ಟಿನ ನಂತರ ಪ್ರತಿ ತಿಂಗಳಿಗೊಮ್ಮೆ ಸ್ನಾನದ ಸಮಯದಲ್ಲಿ ಒಂದು ಕೈಯನ್ನು ಮೇಲೆತ್ತಿ ಇನ್ನೊಂದು ಕೈಯಿಂದ ಸ್ತನದಲ್ಲಿ ಗಡ್ಡೆ ಇದೆಯೇ ಎಂಬುದನ್ನು ನಿಧಾನವಾಗಿ ಪರೀಕ್ಷೆ ಮಾಡಿಕೊಳ್ಳಬೇಕು. ಕನ್ನಡಿ ಮುಂದೆ ನಿಂತುಕೊಂಡು ಈ ಪರೀಕ್ಷೆಯನ್ನು ಮಾಡಿಕೊಳ್ಳಬಹುದು.

ಸ್ತನದ ಕ್ಯಾನ್ಸರ್ ತಡೆಗಟ್ಟಲು ಮಹಿಳೆಯರು ಧೂಮಪಾನ ಮತ್ತು ಮದ್ಯಪಾನ ಮಾಡುತ್ತಿದ್ದರೆ ಅದನ್ನು ಬಿಡಬೇಕು, ನಿಯಮಿತವಾಗಿ ವ್ಯಾಯಾಮ, ಮಗುವಿಗೆ ಹಾಲುಣಿಸಬೇಕು ಮತ್ತು ಸ್ತನಗಳ ನಿಯಮಿತ ಪರೀಕ್ಷೆ ಮಾಡಿಕೊಳ್ಳಬೇಕು.

ಇಂದು ವೈದ್ಯರು ವಿಶೇಷವಾಗಿ ಸ್ತನ ಕ್ಯಾನ್ಸರಿನ ಆರಂಭಿಕ ಹಂತಗಳಲ್ಲಿ ಅತಿಕಡಿಮೆ ವಿಕಿರಣಶೀಲತೆಯನ್ನು ಉಪಯೋಗಿಸಿ ಚಿಕಿತ್ಸೆ ನಡೆಸುತ್ತಾರೆ. ಜೊತೆಗೆ ಉತ್ತಮ ಆಧುನಿಕ ವಿಧಾನಗಳ ಸಹಾಯದಿಂದ ಸ್ತನದ ಗಾತ್ರ, ಆಕಾರ ಮತ್ತು ಸೌಂದರ್ಯವನ್ನು ಕೂಡ ಪುನಸ್ಥಾಪಿಸಿಕೊಳ್ಳಬಹುದಾಗಿದೆ. ಕೀಮೋಥೆರಪಿ, ಹಾರ್ಮೋನು ಥೆರಪಿಗಳು ಇವೆ. ಎಲ್ಲ ಸ್ತನ ಕ್ಯಾನ್ಸರ್ ರೋಗಿಗಳಿಗೂ ಮಾಸ್ಟೆಕ್ಟಮಿಯ (ರೋಗಗ್ರಸ್ತ ಸ್ತನವನ್ನು ಪೂರ್ಣವಾಗಿ ತೆಗೆದುಹಾಕುವುದು) ಅಗತ್ಯ ಉಂಟಾಗುವುದಿಲ್ಲ.

ಸ್ತನದ ಕ್ಯಾನ್ಸರ್ ಇಷ್ಟು ಗಂಭೀರ ಸಮಸ್ಯೆಯಾಗಿರುವುದರಿಂದ ಪ್ರತಿ ವರ್ಷ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿಯ ಮಾಸವೆಂದು ಆಚರಿಸಲಾಗುತ್ತಿದೆ.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಚಂದ್ರಗುತ್ತಿಯಲ್ಲಿ 9 ಅಡಿ ಉದ್ದದ ಹೆಬ್ಬಾವು ಸೆರೆ

ಚಂದ್ರಗುತ್ತಿಯಲ್ಲಿ 9 ಅಡಿ ಉದ್ದದ ಹೆಬ್ಬಾವು ಸೆರೆ A 9-foot-long python was safely rescued from behind a…

3 hours ago

ಪಾಗಲ್ ಪ್ರೇಮಿಯಿಂದ ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ – ಕೆರೆಗೆ ಹಾರಿ ಸಾಗರದ ಯುವತಿ

ಪಾಗಲ್ ಪ್ರೇಮಿಯಿಂದ ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ - ಕೆರೆಗೆ ಹಾರಿ ಸಾಗರದ ಯುವತಿ A 22-year-old woman from Sagara…

9 hours ago

ಬೆದರಿಸಿ ಹಣ, ಮೊಬೈಲ್ ದೋಚಿದ್ದ ಮೂವರು ಆರೋಪಿಗಳು ಪೊಲೀಸರ ಬಲೆಗೆ

ಬೆದರಿಸಿ ಹಣ, ಮೊಬೈಲ್ ದೋಚಿದ್ದ ಆರೋಪಿಗಳು ಪೊಲೀಸರ ಬಲೆಗೆ Shivamogga Tunganaagar police arrested three accused in a…

1 day ago

ಶ್ರೀಗಂಧದ ಮರ ಕಡಿದು ಅಕ್ರಮ ಸಾಗಾಟಕ್ಕೆ ಯತ್ನ: 6 ಮಂದಿ ಅರಣ್ಯಾಧಿಕಾರಿಗಳ ಬಲೆಗೆ

ಶ್ರೀಗಂಧದ ಮರ ಕಡಿದು ಅಕ್ರಮ ಸಾಗಾಟಕ್ಕೆ ಯತ್ನ: 6 ಮಂದಿ ಅರಣ್ಯಾಧಿಕಾರಿಗಳ ಬಲೆಗೆ Six people were arrested for…

1 day ago

ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್: ಅರಸಾಳು, ಕುಂಸಿ ನಿಲುಗಡೆ ಅವಧಿ ಸೆ.23ರವರೆಗೆ ವಿಸ್ತರಣೆ

ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್: ಅರಸಾಳು, ಕುಂಸಿ ನಿಲುಗಡೆ ಅವಧಿ ಸೆ.23ರವರೆಗೆ ವಿಸ್ತರಣೆ South Western Railway extends temporary stoppages…

1 day ago

ಪ್ರವಾಸಿ ಬಸ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಅಪಘಾತ

ಪ್ರವಾಸಿ ಬಸ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಅಪಘಾತ Tourist bus and fish transport goods vehicle…

1 day ago