ಮುಖ್ಯ ಶಿಕ್ಷಕರ ವರ್ಗಾಯಿಸಲು ಒತ್ತಾಯಿಸಿ ಶಾಲೆಗೆ ಬೀಗ ಜಡಿದು ಪೋಷಕರ ಪ್ರತಿಭಟನೆ – BEO ಮಧ್ಯ ಪ್ರವೇಶದಿಂದ ಪ್ರತಿಭಟನೆ ಅಂತ್ಯ
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಅರಸಾಳು ಗ್ರಾಪಂ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರ ವರ್ಗಾವಣೆಗೆ ಆಗ್ರಹಿಸಿ ಪೋಷಕರು ಹಾಗೂ ಗ್ರಾಮಸ್ಥರು ನಡೆಸುತಿದ್ದ ಪ್ರತಿಭಟನೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಧ್ಯ ಪ್ರವೇಶದಿಂದ ಬಗೆಹರಿದಿದೆ.
ತಮ್ಮಡಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕಳೆದ ಆರು ತಿಂಗಳಿಂದ ಶಾಲೆಗೆ ಗೈರು ಹಾಜರಾಗಿ ಸರ್ಕಾರಿ ವೇತನ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಪೋಷಕರು ಹಾಗೂ ಗ್ರಾಮಸ್ಥರು ಶುಕ್ರವಾರ ಮುಖ್ಯ ಶಿಕ್ಷಕರ ಕಚೇರಿಗೆ ಬೀಗ ಜಡಿದು ದಿಡೀರ್ ಪ್ರತಿಭಟನೆ ನಡೆಸಿದರು.
1-8 ನೇ ತರಗತಿವರೆಗೆ ಈ ಹಿಂದೆ ಸುಮಾರು120ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು.
ಕಳೆದ ಎಂಟು ವರ್ಷಗಳಿಂದ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಗಂಗನಾಯ್ಕ್ ಅವರು ಸತತವಾಗಿ ಅನಾರೋಗ್ಯದ ನೆಪ ಮಾಡಿಕೊಂಡು ರಜೆ ಮೇಲೆ ತೆರಳುವುದರಿಂದ ಶಾಲೆಯ ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದೆ. 2023-24 ನೇ ಸಾಲಿನಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಪೋಷಕರು ವರ್ಗಾವಣೆ ಪತ್ರ ಪಡೆದು ಸಾಮೂಹಿಕವಾಗಿ ಪರಸ್ಥಳದ ಶಾಲೆಗಳಿಗೆ ಕಳಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಪ್ರತಿಭಟನಾಕಾರರ ದೂರಿಗೆ ಸ್ಪಂದಿಸಿ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸೋಮವಾರದ ಒಳಗೆ ನಾಲ್ವರು ಶಿಕ್ಷಕರನ್ನು ಖಾಯಂ ಆಗಿ ಕಾರ್ಯ ನಿರ್ವಹಿಸಲು ನಿಯೋಜನೆ ಗೊಳಿಸುವುದಾಗಿ ತಿಳಿಸಿದರು.ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.
ಈ ಸಂಧರ್ಭದಲ್ಲಿ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಹಾಗೂ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಉಮೇಶ್ ಗ್ರಾಮಸ್ಥರಾದ ಸಚಿನ್ ಟಿ ಕೆ ,ಮಂಜುನಾಥ್ ಜೆ , ರಾಘು ಟಿ ಡಿ ,ಚರಣ್ , ಲೋಕೇಶ್ ಡಿ ಹೆಚ್ ,ಮಂಜಮ್ಮ ಹಾಗೂ ಇನ್ನಿತರರು ಇದ್ದರು.