ಸೊರಬ ತಾಲ್ಲೂಕಿನ ಜಡೆ ಗ್ರಾಮದ ಸಂತೆ ಮೈದಾನದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನದ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಬರೋಬ್ಬರಿ 12 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
ಆನವಟ್ಟಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸೊರಬ ಹಾಗೂ ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಎರಡು, ಶಿಕಾರಿಪುರ ಟೌನ್, ಕುಂಸಿ, ಸಾಗರ ಟೌನ್, ಹಿರೇಕೆರೂರು, ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಬೈಕ್ ಸೇರಿದಂತೆ ಕಳುವಾದ ಒಟ್ಟು 12 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಕಮನವಳ್ಳಿ ಗ್ರಾಮದ ಮಂಜುನಾಥ (25) ಹಾಗೂ ಹಿರೇಚೌಟಿ ಗ್ರಾಮದ ಸಿ.ಕೆ.ಅನಿಲ್ (22) ಬಂಧಿತರು.
ಜಡೆ ಗ್ರಾಮದ ಸಂತೆ ಮೈದಾನದ ಬಳಿ ನಿಲ್ಲಿಸಿದ್ದ ಬೈಕ್‌ವೊಂದು ಕಳ್ಳತನವಾಗಿತ್ತು. ಈ ಸಂಬಂಧ ಬೈಕ್‌ನ ಮಾಲೀಕ ಚಂದ್ರ ಅವರು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಬೈಕ್ ಕಳ್ಳತನದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆನವಟ್ಟಿ ಪಿಎಸ್‌ಐ ರಾಜುರೆಡ್ಡಿ ಬೆನ್ನೂರು ಮತ್ತು ವಿಠಲ್ ಎಂ.ಅಗಾಸಿ ನೇತೃತ್ವದ ತಂಡ ಪ್ರಕರಣವನ್ನು ಬೇಧಿಸಿದೆ. ತಂಡದಲ್ಲಿ ಹೆಡ್ ಕಾನ್ಸ್‌ಟೇಬಲ್‌ಗಳಾದ ಗಿರೀಶ್, ಖಲಂದರ್, ಹರೀಶ್, ಕಾನ್‌ಸ್ಟೆಬಲ್‌ಗಳಾದ ಜಗದೀಶ್, ಮಂಜುನಾಥ್, ಮಲ್ಲೇಶ್, ಹರಿಪ್ರಸಾದ್, ಹನುಮಂತ, ಕೃಷ್ಣ, ಇಂದ್ರೇಶ್, ಗುರುರಾಜ್, ವಿಜಯ್ ಕುಮಾರ್ ಪಾಲ್ಗೊಂಡಿದ್ದರು.