Headlines

ಖಾಕಿಯೊಳಗಿನ ಮಾನವೀಯತೆ – ಇದು ರಿಪ್ಪನ್‌ಪೇಟೆ ಪೊಲೀಸ್ ಸ್ಟೋರಿ |ಮಗಳ ಆರೈಕೆಗೆ ಲಕ್ಷ ಲಕ್ಷ ಸುರಿದು ಸಾಲದ ಸುಳಿಗೆ ಸಿಲುಕಿದ ವೃದ್ಧ ಆಟೋ ಚಾಲಕ|help desk

ರಿಪ್ಪನ್‌ಪೇಟೆ : 36 ವರ್ಷಗಳಿಂದ ನರ ದೌರ್ಬಲ್ಯದಿಂದ ಬಳಲುತ್ತಿರುವ ಮಗಳ ಆರೈಕೆಯಲ್ಲಿ ಸಾಲದ ಸುಳಿಯಲ್ಲಿ ಸಿಲುಕಿರುವ ಗವಟೂರಿನ ಬಡ ಕುಟುಂಬದ ನೋವಿಗೆ ಪಟ್ಟಣದ ಖಾಕಿಗಳು ಹೆಗಲು ಕೊಟ್ಟಿದ್ದಾರೆ.


ಪಟ್ಟಣದ ಗವಟೂರು ನಿವಾಸಿ ಆಟೋ ದೇವಪ್ಪಗೌಡ ರವರು 36 ವರ್ಷಗಳಿಂದ ನರದೌರ್ಬಲ್ಯದಿಂದ ಬುದ್ಧಿಮಾಂದ್ಯಕ್ಕೆ ಒಳಗಾದ ಮಗಳು ಅನಿತಾಳ ಆರೈಕೆ ಮಾಡುತ್ತಿದ್ದು,ಚಿಕಿತ್ಸೆ ನೀಡಿದರೆ ಗುಣಮುಖಳಾಗುವ ಆಶಾವಾದದಿಂದ ಲಕ್ಷ ಲಕ್ಷ ಖರ್ಚು ಮಾಡಿದ ಬಡಕುಟುಂಬ ಇಂದು ಸಾಲದ ಸುಳಿಗೆ ಸಿಲುಕಿತ್ತು.ಸೂಕ್ತ ಚಿಕಿತ್ಸೆ ನೀಡದೇ ಮಗಳ ಅನಾರೋಗ್ಯವು ಮತ್ತಷ್ಟು ಉಲ್ಬಣಗೊಂಡಿತ್ತು.

ಈ ಬಗ್ಗೆ ಮಾಹಿತಿಯನ್ನರಿತ ಪಟ್ಟಣದ ಪೊಲೀಸ್ ಸಿಬ್ಬಂದಿಗಳಾದ ಮಂಜಪ್ಪ ಹೊನ್ನಾಳ್ (ಹೆಚ್ ಸಿ) ,ನವೀನ್, ತ್ರಿವೇಣಿ ತಕ್ಷಣ ರಿಪ್ಪನ್‌ಪೇಟೆಯ ನೂತನ ಪಿಎಸ್‌ಐ ಎಸ್ ಪಿ ಪ್ರವೀಣ್ ಗಮನಕ್ಕೆ ತಂದಿದ್ದಾರೆ.


ಬಡಕುಟುಂಬದ ಬಗ್ಗೆ ಡಿವೈಎಸ್ಪಿ ಗಜಾನನ ವಾಮನ ಸುತಾರ ,ಮತ್ತು ಸಿಪಿಐ ಗಿರೀಶ್ ರವರ ಗಮನಕ್ಕೆ ತಂದ ಪಿಎಸ್ ಐ ಪ್ರವೀಣ್ ಠಾಣೆಯ ಎಲ್ಲಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಸಹಕಾರದಿಂದ ಇಂದು ಗವಟೂರಿನ ಆಟೋ ದೇವಪ್ಪಗೌಡರವರ ಮನೆಗೆ ತೆರಳಿ ಧನಸಹಾಯ ಮಾಡುವುದರೊಂದಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.


ಪೊಲೀಸರ ಜೊತೆ ಅತಿಯಾದ ವಿಶ್ವಾಸವೂ ಒಳ್ಳೆಯದಲ್ಲ. ಅತಿಯಾದ ವಿರೋಧವೂ ಒಳ್ಳೆಯದ್ದಲ್ಲ ಎಂಬ ಮಾತಿದೆ.ಈ ಆರೋಪಕ್ಕೆ ರಿಪ್ಪನ್‌ಪೇಟೆ ಠಾಣೆ ಮಾತ್ರ ಮುಕ್ತವಾಗಿದೆ. ಯಾಕಂದ್ರೆ,ಬಡ ಕುಟುಂಬದ ನೋವಿಗೆ ಸಿಬ್ಬಂದಿಗಳೇ ಹೆಗಲಾಗಿದ್ದಾರೆ. ರಸ್ತೆಯಲ್ಲಿ ಅಪಘಾತವಾದ ವ್ಯಕ್ತಿಗೆ ಆಸ್ಪತ್ರೆಗೆ ಸೇರಿಸಿ ರಕ್ತ ಕೊಟ್ಟ ಪೊಲೀಸರು ಇದ್ದಾರೆ. ಪರೀಕ್ಷೆಗೆ ಲೇಟಾಯ್ತು ಎಂದು ಡ್ಯೂಟಿ ಬಿಟ್ಟು ಎಕ್ಸಾಂ ಹಾಲ್ಗೆ ಕರೆದುಕೊಂಡು ಹೋಗಿ ಸಸ್ಪೆಂಡ್ ಆದ ಪೊಲೀಸರು ಇದ್ದಾರೆ. ಇಲಾಖೆಯೊಳಗೋ-ಹೊರಗೋ ಒಳ್ಳೆಯವರು-ಕೆಟ್ಟವರು ಇಬ್ಬರೂ ಇದ್ದಾರೆ. ಒಟ್ಟಾರೆಯಾಗಿ ಪಟ್ಟಣದ ಪೊಲೀಸರು ಸಮಾಜಕ್ಕೊಂದು ಉತ್ತಮ ಸಂದೇಶ ನೀಡಿದ್ದಾರೆ.


ಮಗಳ ಆರೈಕೆಗೆ ಲಕ್ಷ ಲಕ್ಷ ಸುರಿದರು ಪ್ರಯೋಜನವಿಲ್ಲ- ಸಾಲದ ಸುಳಿಗೆ ಸಿಲುಕಿದ ವೃದ್ಧ ಆಟೋ ಚಾಲಕ


36 ವರ್ಷಗಳಿಂದ ನರದೌರ್ಬಲ್ಯದಿಂದ ಬುದ್ಧಿಮಾಂದ್ಯಕ್ಕೆ ಒಳಗಾದ ಮಗಳ ಆರೈಕೆ ಮಾಡುತ್ತಿರುವ ಪಾಲಕರು ಇದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ  ಗವಟೂರು ಗ್ರಾಮದ ನಿವಾಸಿ ಎನ್ ಸಿ  ದೇವಪ್ಪಗೌಡ ಹಾಗೂ ಪತ್ನಿ ಪ್ರೇಮ ಅವರ ಕೊರಗು.


ಮಗಳು ಅನಿತಾ ಹುಟ್ಟಿ ಎಂಟು ವರ್ಷವಾದರೂ ಮಾತು ಬರಲಿಲ್ಲ,
ನರ ದೌರ್ಬಲ್ಯದಿಂದ ಬುದ್ಧಿಮಾಂದ್ಯವಾಗಿದೆ.ಸೂಕ್ತ  ಚಿಕಿತ್ಸೆ ಕೊಡಿಸಿದರೆ  ಚೇತರಿಕೆ ಕಾಣಬಹುದು ಎಂಬ ವೈದ್ಯರ ಭರವಸೆಯ ಮಾತಿಗೆ ಅರೆ ಹೊಟ್ಟೆ ಉಂಡು, ಮಗಳ ಆರೈಕೆಗೆ ಮುಂದಾದಾಗ
ಆರೋಗ್ಯದಲ್ಲಿ ಸ್ವಲ್ಪ ಚೇತರಿಗೆ ಕಂಡು ತಕ್ಕಮಟ್ಟಿಗೆ  ನಡೆದಾಡು ವಂತಾದ ಮಗಳನ್ನು ಕಂಡು ಬಡತನದ ಭವಣೆ ಮರೆತು
36 ವರ್ಷಗಳಿಂದ ಮಗಳ ಆರೈಕೆ ಮಾಡಿಕೊಂಡು ಬಂದಿದ್ದಾರೆ.

ಅನಿತಾಳ ಚಿಕಿತ್ಸೆಗೆ ಲಕ್ಷ ಲಕ್ಷ ಹಣ ಖರ್ಚು ಮಾಡಿದ ವೃದ್ಧ ಆಟೋ ಚಾಲಕರಾದ ದೇವಪ್ಪ ಗೌಡ ರವರು ಸಾಲದ ಸುಳಿಯಲ್ಲಿ ಸಿಲುಕಿ ಕಂಗಲಾಗಿ ಚಿಕಿತ್ಸೆ ನೀಡಲು ಸಾಧ್ಯವಾಗದಂತಹ ಸ್ಥಿತಿಗೆ ಬಂದ ಹಿನ್ನಲೆಯಲ್ಲಿ ಮಗಳಿಗೆ ಅನಾರೋಗ್ಯ ಮತ್ತಷ್ಟು ಉಲ್ಬಣಗೊಂಡಿದೆ.

ಬಡಪಾಯಿ ದೇವಪ್ಪಗೌಡರಿಗೆ ಹೆಣ್ಣು ಮಗಳ ನಂತರ ಒಬ್ಬ ಗಂಡು ಮಗ ಇದ್ದಾನೆ.ಬೆಂಗಳೂರಿನಲ್ಲಿ ಚಾಲಕ ವೃತ್ತಿ ಮಾಡಿ, ಚೂರು ಪಾರು   ಸಂಪಾದನೆ ಉಳಿಸಿ ಮನೆಗೆ ನೆರವಾಗಲಿ ಎಂದು ಬ್ಯಾಂಕ್ ಸಾಲ ಮಾಡಿ,ವಾಹನ ಖರೀದಿಸಿ  ಬಾಡಿಗೆಗೆ ಬಿಟ್ಟರೆ, ಕೋವಿಡ್ ಸಮಯದಲ್ಲಿ  ಉದ್ಯೋಗವಿಲ್ಲದೆ ನಷ್ಟ ಅನುಭವಿಸಿ,ಬ್ಯಾಂಕ್ ಕಂತು ಕಟ್ಟಲಾಗದೆ  ಸುಮಾರು 12 ಲಕ್ಷ  ಸಾಲದ ಹೊರೆಯಾಗಿದೆ.


ತಮ್ಮ ದುಡಿಮೆಯ ಬಹುಪಾಲು ಹಣವನ್ನು ಮಗಳು ವನಿತಾಳ ಚಿಕಿತ್ಸೆ ಗೆ ಖರ್ಚು ಮಾಡಿರುವ ಇವರು ಮಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಹಣಕಾಸಿನ ತೊಂದರೆಯಾಗಿದ್ದು ಕಳೆದ ಆರು ತಿಂಗಳಿಂದ ಕಾಯಿಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮಗಳು ಹಾಸಿಗೆ ಹಿಡಿದಿದ್ದಾಳೆ.

ಮಗಳ ಬುದ್ಧಿ ಭ್ರಮಣೆ ವಿಕೋಪಕ್ಕೆ ತಿರುಗಿ, ಅತಿರೇಕವಾದ ಹಾರಾಟ ಚೀರಾಟ ಗಳನ್ನು ನಿಯಂತ್ರಿಸುವುದು ವಯೋವೃದ್ಧ ತಂದೆ ತಾಯಿಗಳಿಗೆ ದುಸ್ತರವಾಗಿ ಪ್ರತಿನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಎದುರಾಗಿದೆ.
ಈಗಾಗಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ, ಮಾನಸ ನರ್ಸಿಂಗ್ ಹೋಮ್, ತೀರ್ಥಹಳ್ಳಿಯ ಅರುಣಾಚಲ ನರ್ಸಿಂಗ್ ಹೋಮ್ ಗಳಲ್ಲಿ ದಾಖಲಿಸಿ ಸೂಕ್ತ ಚಿಕಿತ್ಸೆ  ಕೊಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಹೆಚ್ಚಿನ ಚಿಕಿತ್ಸೆ ಕೊಡಿಸಲು  ಹಣಕಾಸಿನ ತೊಂದರೆ ಎದುರಾಗಿದೆ.

ಈಗಾಗಲೇ ಮಗಳ ಆರೈಕೆಗೆ  ಪರಿಚಿತರಿಂದ, ವಿವಿಧ ಸಂಘ-ಸಂಸ್ಥೆಗಳಿಂದ  ಮಾಡಿದ ಲಕ್ಷಾಂತರ ರೂಗಳ ಸಾಲ  ತೀರಿಸುವುದೇ ದೊಡ್ಡ ಹೊರೆಯಾಗಿದೆ.ಬೆಳಿಗ್ಗೆ ನಾಲ್ಕು ಗಂಟೆಯಿಂದ ಆರಂಭಿಸುವ ಆಟೋ ಚಾಲನೆಯ ವೃತ್ತಿಯ ದಿನಚರಿ ರಾತ್ರಿ 7 ಗಂಟೆಗೆ  ಮುಕ್ತಾಯವಾಗುತ್ತದೆ.ಸರಾಸರಿ  300/400 ರೂ ಸಂಪಾದನೆಯೇ  ಜೀವನಕ್ಕೆ ಆಧಾರ. ಪೆಟ್ರೋಲ್, ವಾಹನ ರಿಪೇರಿ, ತೆರಿಗೆ  ಹಾಗೂ  ಮಗಳ ಆರೈಕೆ , ಕುಟುಂಬ ನಿರ್ವಹಣೆ ನಡೆಯಬೇಕು.ಪ್ರತಿ ತಿಂಗಳು ಸರ್ಕಾರದಿಂದ  ನನಗೆ ವೃದ್ಯಾಪ ವೇತನ  ರೂ 1200,  ಪತ್ನಿಗೆ  ರೂ 600 ಹಾಗೂ ಮಗಳಿಗೆ  ರೂ 2000  ಬರುತ್ತಿದೆ.  ವಾರಗಟ್ಟಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ  ದಾಖಲಿಸಿದರೆ  ಬೆಡ್ ಚಾರ್ಜ್ ರೂ 25 ರಿಂದ 30 ಸಾವಿರದವರೆಗೆ ಕಟ್ಟಬೇಕು. ಔಷಧೋಪಚಾರಗಳ ವೆಚ್ಚ ಪ್ರತ್ಯೇಕ.    ಹೀಗಾದರೆ ನಮ್ಮ ಬದುಕು ಹೇಗೆ ಸಾಗಿಸಬೇಕು ಎಂಬ ಚಿಂತೆ  ವೃದ್ಧರನ್ನು ಕಾಡುತ್ತಿದೆ.

ಯಾರಾದರೂ ದಾನಿಗಳು ಆರ್ಥಿಕ ಸಹಾಯ ಮಾಡಿದರೆ, ಮಗಳಿಗೆ ಇನ್ನು ಉತ್ತಮವಾದ ಚಿಕಿತ್ಸೆ ಕೊಡಿಸುವ  ಹಂಬಲ ಅವರದು..ತಮ್ಮ ಕೈಯಲ್ಲಾದ ಆರ್ಥಿಕ ಸಹಾಯ ಮಾಡಲು ಇಚ್ಛಿಸುವರು :

ಈ ಕೆಳಕಂಡ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಲು ಕೋರಿಕೆ : ಪ್ರೇಮ ಎನ್.ಡಿ.
ಭಾರತೀಯ ಸ್ಟೇಟ್ ಬ್ಯಾಂಕ್(sbi)
ರಿಪ್ಪನ್ ಪೇಟೆ ಶಾಖೆ
ಖಾತೆ ಸಂಖ್ಯೆ :  64188102751
Ifsc  : SBIN0040976
ಹೊಸನಗರ ತಾಲೂಕು ಶಿವಮೊಗ್ಗ ಜಿಲ್ಲೆ

Phone pay number – 9060968943
ಒಟ್ಟಾರೆಯಾಗಿ ಹವಾಮಾನ ಉತ್ತಮವಾಗಿದೆ,ಮೂಡ್ ಇಲ್ಲಾ ,ಆ ಪಾರ್ಟಿ ಈ ಪಾರ್ಟಿ ಎಂಬ ಕ್ಷುಲ್ಲಕ ಕಾರಣಗಳಿಗೆ ಸಾವಿರಾರು ಖರ್ಚು ಮಾಡುವ ನಾವುಗಳು ಇಂತಹ ಬಡ ಕುಟುಂಬಕ್ಕೆ ನಮ್ಮ ಕೈಲಾಗುವ ಧನ ಸಹಾಯ ಮಾಡುವ ಮೂಲಕ ಅವರ ಬೆನ್ನಿಗೆ ನಿಂತು ಅವರಲ್ಲಿನ ಆತ್ಮ ಸ್ಥೈರ್ಯ ಹೆಚ್ಚಿಸೋಣ…

ಹೆಚ್ಚಿನ ಮಾಹಿತಿಗೆ ದೇವಪ್ಪ ಗೌಡ ರವರ ಮೊಬೈಲ್ ನಂಬರ್ 9972752219 ಗೆ ಕರೆ ಮಾಡಿ.

ಈ ಕೆಳಗಿನ ಪೋನ್ ಪೇ ಸ್ಕ್ಯಾನರ್ ಬಳಸಿ ಸಹಾಯ ಮಾಡಿ

Leave a Reply

Your email address will not be published. Required fields are marked *

Exit mobile version