ಸಾಗರ ವಿಧಾನಸಭಾ ಚುನಾವಣೆಗೆ ಕೆಆರ್ ಎಸ್ ಪಕ್ಷದಿಂದ ಸ್ಪರ್ಧೆಗಿಳಿದ ಟಿಕ್ಕಿ ಅಬ್ಬಿ ಕಿರಣ್
ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ.ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಆಮ್ ಆದ್ಮಿ ಪಕ್ಷದಲ್ಲಿ ಅಬ್ಬರದ ಪ್ರಚಾರ ಮೆರವಣಿಗೆಗಳು ನಡೆಯುತ್ತಿವೆ. ಆದರೆ ಈ ಅಬ್ಬರದ ಪ್ರಚಾರದ ಮಧ್ಯೆ ಒಬ್ಬ ಇಂಜಿನಿಯರ್ ವಿಭಿನ್ನವಾಗಿ ಪ್ರಚಾರ ನಡೆಸುತ್ತಿದ್ದು, ಹಣವಂತರು- ಅಬ್ಬರದ ಪ್ರಚಾರದ ಮಧ್ಯೆ ಟೆಕ್ಕಿ (Techie) ಸರಳ ರೀತಿಯಲ್ಲಿ ಅಖಾಡಕ್ಕೆ ಇಳಿದಿದ್ದಾರೆ.
ಹೌದು ಹೊಸನಗರ ತಾಲೂಕಿನ ಮುಂಬಾರು ಗ್ರಾಪಂ ವ್ಯಾಪ್ತಿಯ ಬೇಹಳ್ಳಿ ಗ್ರಾಮದ ಅಬ್ಬಿ ಕಿರಣ್ ಎಂಬುವ ಟೆಕ್ಕಿ ಬದಲಾವಣೆಗಾಗಿ ನನಗೆ ಮತ ಎಂಬ ಧ್ಯೇಯದೊಂದಿಗೆ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ರವಿ ಕೃಷ್ಣ ರೆಡ್ಡಿ ನೇತೃತ್ವದ ಕೆಆರ್ ಎಸ್(ಕರ್ನಾಟಕ ರಾಷ್ಟ್ರೀಯ ಪಕ್ಷ) ದಿಂದ ಅಧಿಕೃತ ಅಭ್ಯರ್ಥಿಯಾಗಿ ಕಣಕಿಳಿದಿದ್ದಾರೆ.
ಗುರುವಾರ ಸಾಗರ ಉಪವಿಭಾಗಧಿಕಾರಿ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿರುವ ಅಬ್ಬಿ ಕಿರಣ್ ಒಂದು ಕಾಲದಲ್ಲಿ ಹೊಸನಗರ ತಾಲೂಕಿನ ಪ್ರಭಾವಿ ರಾಜಕಾರಣಿಯಾಗಿದ್ದ ಅಬ್ಬಿ ಈಶ್ವರಪ್ಪ ರವರ ಪುತ್ರರಾಗಿದ್ದು ಬೆಂಗಳೂರಿನ ಬಹು ರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತಿದ್ದಾರೆ.
ಕೈ ತುಂಬ ಲಕ್ಷ ಲಕ್ಷ ಪಗಾರ ಇದ್ದರೂ ಅದೆಲ್ಲವನ್ನೂ ಬಿಟ್ಟು ಚುನಾವಣೆಗೆ ಇಳಿದಿದ್ದಾರೆ. ಎಲ್ಲೂ ಕೂಡ ಸಮಾವೇಶ, ಸಭೆ ನಡೆಸದೆ ಮನೆ ಮನೆಗೆ ತೆರಳಿ ತಮ್ಮ ಭರವಸೆಗಳ ಬಗ್ಗೆ ಹೇಳುತ್ತಿದ್ದಾರೆ.
ಪ್ರಾಮಾಣಿಕ ವ್ಯಕ್ತಿಗಳನ್ನು ಆಯ್ಕೆ ಮಾಡಿ ಎಂದು ಜನರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಯಾವುದೇ ಆಡಂಬರವಿಲ್ಲದೇ ಸರಳ ರೀತಿಯಲ್ಲಿ ಮತ ಕೇಳುತ್ತಿದ್ದಾರೆ. ಇನ್ನು ಇವರ ಹೋರಾಟಕ್ಕೆ ಪ್ರಜ್ಞಾವಂತ ನಾಗರಿಕರು ಬೆಂಬಲ ನೀಡುತ್ತಿದ್ದು, ಇಂತಹ ಸಜ್ಜನ ವಿದ್ಯಾವಂತರಿಗೆ ಜನರು ಪ್ರೋತ್ಸಾಹಿಸಬೇಕೆಂದು ಸ್ಥಳೀಯರು ಕೇಳಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಪ್ರಮುಖ ಪಕ್ಷಗಳ ಅಬ್ಬರದ ಮಧ್ಯೆ ಇಂಜಿನಿಯರ್ ಸರಳ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದು,ಇವರಿಗೆ ಜನ ಯಾವ ರೀತಿ ಸಹಕಾರ ನೀಡುತ್ತಾರೋ ಚುನಾವಣೆಯೇ ಉತ್ತರಿಸಬೇಕು.