ಅಪ್ಪನನ್ನು ಹಿಂಬಾಲಿಸಲು ಹೋಗಿ ಮಗುವೊಂದು ಟ್ರ್ಯಾಕ್ಟರ್‌ಗೆ ಸಿಲುಕಿ ಮೃತಪಟ್ಟಿರುವ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಹೆದ್ದೂರಿನಲ್ಲಿ ಬುಧವಾರ ನಡೆದಿದೆ.
ಹೆದ್ದೂರು ಗ್ರಾಮದ ಆದರ್ಶ್ ಎಂಬುವವರ ಒಂದೂವರೆ ವರ್ಷದ ಮಗು ದುರ್ಮರಣ ಹೊಂದಿದೆ.
ಆದರ್ಶ್ ಅವರು ತಮ್ಮ ಒಂದೂವರೆ ವರ್ಷದ ಮಗುವಿನೊಂದಿಗೆ ಆಟವಾಡುತ್ತಿದ್ದರು. ನಂತರ ಕೆಲಸದ ನಿಮಿತ್ತ ಮಗುವನ್ನು ಮನೆಯೊಳಗೆ ಬಿಟ್ಟಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಅನ್ನು ತೆಗೆಯಲು ಹೋಗಿದ್ದಾರೆ. ಈ ವೇಳೆ ಒಂದೂವರೆ ವರ್ಷದ ಮಗು ಅಪ್ಪನನ್ನೇ ಹಿಂಬಾಲಿಸಿಕೊಂಡು ಬಂದಿದೆ.
ಆದರೆ, ಇದ್ಯಾವುದರ ಅರಿವು ಇರದ ಆದರ್ಶ್ ಅವರು ಟ್ರ್ಯಾಕ್ಟರ್ ಅನ್ನು ಹಿಂದೆ ತೆಗೆಯಲು ಮುಂದಾಗಿದ್ದು, ಮಗುವಿನ ಮೈಮೇಲೆ ಹರಿದಿದೆ. ಪರಿಣಾಮ ಗಂಭೀರ ಗಾಯಗೊಂಡ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ದಯಮಾಡಿ ಪೋಷಕರು ಮಕ್ಕಳ ಬಗ್ಗೆ ಒಂದು ಕ್ಷಣವೂ ಅಸಡ್ಡೆ ತೋರದಿರಿ.. ಯಾವಾಗಲೂ ಕಾರು ಮತ್ತು ಇನ್ನಿತರೆ ವಾಹನವನ್ನು ಹೊರಗೆ ತೆಗೆಯುವಾಗ ಚಿಕ್ಕ ಮಕ್ಕಳು ಇದ್ದಾಗ ತುಂಬಾ ಎಚ್ಚರವಹಿಸಿ… ಮತ್ತೆ ಹುಟ್ಟಿ ಬಾ ಕಂದ. ಆ ದೇವರು ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಈ ರೀತಿ ನೋವುಗಳು ಯಾವ ಶತ್ರುವಿಗೂ ಆಗದಿರಲಿ ಎಂದು ವಾಟ್ಸಾಪ್ ನಲ್ಲಿ ಶೋಕ ಸಂದೇಶ ಹರಿದಾಡುತ್ತಿದೆ.