ತೀರ್ಥಹಳ್ಳಿ : ತಾಲೂಕಿನ ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬುಕ್ಲಾಪುರ ಸಮೀಪದ ಹೊರಬೈಲಿನ ಸ್ಮಶಾನದಲ್ಲಿ ಸುಟ್ಟ ಶವದ ಬೂದಿಯನ್ನು ಹಾಗೂ ಸ್ಮಶಾನದಲ್ಲಿದ್ದ ಕಬ್ಬಿಣದ ರಾಡ್ನ್ನು ಯಾರೋ ಕದ್ದೊಯ್ದ ವಿಚಿತ್ರ ಘಟನೆ ನಡೆದಿದೆ.
ಪಟ್ಟಣದ ಸಮೀಪವಿರುವ ಹೊರಬೈಲಿನ ಗಂಗಾಧರೇಶ್ವರ ಸ್ಮಶಾನದಲ್ಲಿ 3 ದಿನದ ಹಿಂದೆ ಊರಿನ ಮಹಿಳೆಯೊಬ್ಬರ ಶವವನ್ನು ಸಂಸ್ಕಾರ ಮಾಡಲಾಗಿತ್ತು. ಮಾರನೇ ದಿನ ಕುಟುಂಬದವರು ಸ್ಮಶಾನದಲ್ಲಿ ಅಳಿದುಳಿದ ಕಟ್ಟಿಗೆ ಕೊಳ್ಳಿಯನ್ನು ದೂಡುವ ಪದ್ಧತಿಯಂತೆ ಕಟ್ಟಿಗೆಯನ್ನು ಮುಂದೆ ಹಾಕಿ ಒಂದು ಎಳನೀರು ಇಟ್ಟು ವಾಪಾಸು ಬಂದಿದ್ದರು.
ಮೂರನೇ ದಿನವಾದ ಇಂದು ಸಂಸ್ಕಾರ ಮಾಡಿದ ಬೂದಿ ತೆಗೆಯಲು ಕುಟುಂಬಸ್ಥರು ಸ್ಮಶಾನಕ್ಕೆ ಬಂದಿದ್ದರು ಆದರೆ ಸ್ಮಶಾನದಲ್ಲಿ ನೋಡುವಾಗ ಸುಟ್ಟ ಶವದ ಬೂದಿ ಮಂಗ ಮಾಯವಾಗಿತ್ತು. ಆಶ್ಚರ್ಯವೆಂದರೆ ಬೂದಿ ಕದ್ದ ಕಳ್ಳರು ಮೂರು ಎಲುಬು ಮೂಳೆಯನ್ನು ಅಲ್ಲೆ ಒಂದು ಬದಿಯಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಕುಟುಂಬದವರು ಆ ಮೂರು ಮೂಳೆಗಳನ್ನು ತಂದು ಮುಂದಿನ ಕಾರ್ಯವನ್ನು ಮಾಡಿದ್ದಾರೆ.
ಸ್ಮಶಾನದಲ್ಲಿ ಸುಟ್ಟ ಶವದ ಬೂದಿ ಇಲ್ಲದ್ದನ್ನು ನೋಡಿ ಕಂಗಾಲಾದ ಕುಟುಂಬಸ್ಥರು ಆಶ್ಚರ್ಯಚಕಿತರಾಗಿ ಊರಿನ ಗ್ರಾಮಸ್ಥರಿಗೆ ಈ ವಿಷಯ ಮುಟ್ಟಿಸಿದ್ದಾರೆ. ಗ್ರಾಮಸ್ಥರು ಸ್ಮಶಾನಕ್ಕೆ ಹೋಗಿ ನೋಡಿದಾಗ ಕುಟುಂಬಸ್ಥರು ಹೇಳಿದ ವಿಷಯ ಸತ್ಯವಾಗಿತ್ತು.
ಶವ ಸಂಸ್ಕಾರ ಮಾಡುವಾಗ ಅದರಲ್ಲಿ ಬಂಗಾರ, ಬೆಳ್ಳಿ ಹಾಗೂ ನಾಣ್ಯಗಳನ್ನು ಹಾಕಿರಬಹುದೆಂದು ಯೋಚಿಸಿ ಕಳ್ಳರು ಬೂದಿಯನ್ನು ತೆಗೆದುಕೊಂಡು ಹೋಗಿರಬಹುದು ಎಂದು ಊರಿನ ಸಾರ್ವಜನಿಕರಿಂದ ಮಾತುಗಳು ಕೇಳಿ ಬರುತ್ತಿದೆ.
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್