ಭದ್ರಾವತಿ : ಸ್ನೇಹಿತರು ಅಂದರೆ ಪ್ರಾಣಕ್ಕೆ ಪ್ರಾಣ ಕೊಡೋರು ಅಂತಾರೆ, ಆದರೆ ಭದ್ರಾವತಿಯಲ್ಲಿ ಸ್ನೇಹಿತರೆ ತಮ್ಮ ಗೆಳೆಯನನ್ನು ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಕ್ಟೋಬರ್ 24ರಂದು ಭದ್ರಾವತಿಯ ಎಪಿಎಂಸಿ ಆವರಣದ ಮ್ಯಾಮ್ ಕೋಸ್ ಕಟ್ಟಡ ಬಳಿ ರೂಪೇಶ್ ಎಂಬಾತನ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಭದ್ರಾವತಿಯ ಹಳೇ ನಗರ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಸ್ನೇಹಿತರ ಕೃತ್ಯ ಬಯಲಾಗಿದೆ.
ಆಟೋ ಚಾಲಕನಾಗಿದ್ದ ರೂಪೇಶ್ನನ್ನು ಆತನ ಸ್ನೇಹಿತರೇ ಆದ ಭದ್ರಾವತಿ ಕಾಚಗೂಂಡನಹಳ್ಳಿಯ ಕುಶಾಲ್(35) ಹಾಗೂ ಭದ್ರಾವತಿ ಹುತ್ತಾ ಕಾಲೋನಿಯ ಸೋಮಶೇಖರ ಅಲಿಯಾಸ್ ಕಪ್ಪೆ(33) ಎಂಬುವರು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೂಪೇಶ್ ಮೂಲತಃ ಭದ್ರಾವತಿ ತಾಲೂಕು ಹೊಳೆಹೂನ್ನೂರಿನ ನಿವಾಸಿ. ಈತ ಶಿವಮೊಗ್ಗದಲ್ಲಿ ನೆಲೆಸಿದ್ದು ಆಟೋ ಓಡಿಸುತ್ತಿದ್ದ. ಕೊಲೆಯಾದ ದಿನ ರೂಪೇಶ್ನನ್ನು ಸೋಮಶೇಖರ್ ಹಾಗೂ ಕುಶಾಲ್ ಪಾರ್ಟಿ ಮಾಡಲು ಭದ್ರಾವತಿಗೆ ಕರೆಯಿಸಿಕೊಂಡಿದ್ದರು. ಬಳಿಕ ಕಂಠಪೂರ್ತಿ ಕುಡಿದು ಮಾತನಾಡುವಾಗ ಯಾವುದೋ ವಿಚಾರಕ್ಕೆ ವಾಗ್ವಾದವಾಗಿದೆ.
ಈ ವೇಳೆ ಕುಶಾಲ್ ಅಲ್ಲೇ ಇದ್ದ ಬಿದಿರಿನ ಕೋಲಿನಿಂದ ಹಲ್ಲೆ ನಡೆಸಿದ್ದಾನೆ. ರೂಪೇಶ್ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದು, ಆಗ ಸೋಮಶೇಖರ್ ಕೂಡ ದೊಣ್ಣೆಯಿಂದ ಥಳಿಸಿದ್ದಾನೆ. ಇದರಿಂದ ರೂಪೇಶ್ ಪ್ರಾಣ ಹಾರಿ ಹೋಗಿದೆ. ಬಳಿಕ ಆರೋಪಿಗಳಿಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ. ತನಿಖೆ ವೇಳೆ ಆರೋಪಿಗಳು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಯಿ ಆತ್ಮಹತ್ಯೆ: ರೂಪೇಶ್ ಕೊಲೆ ವಿಚಾರ ತಿಳಿದು ಶಿವಮೊಗ್ಗದಲ್ಲಿ ನೆಲೆಸಿದ್ದ ಆತನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್