ರಿಪ್ಪನ್‌ಪೇಟೆ: ಸಮೀಪದ ಅರಸಾಳು ರೈಲ್ವೆ ನಿಲ್ದಾಣದಲ್ಲಿರುವ ಮಾಲ್ಗುಡಿ ಮ್ಯೂಸಿಯಂಗೆ ನೈರುತ್ಯ ರೈಲ್ವೆಯ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅರಸಾಳು ಗ್ರಾಮ ಪಂಚಾಯತಿ ಅಧ್ಯಕ್ಷ ಉಮಾಕರ ನೇತೃತ್ವದಲ್ಲಿ ಗ್ರಾಮಸ್ಥರು, ವಿವಿಧ ಸಂಘಸಂಸ್ಥೆಗಳ ಮುಖಂಡರು ಜಿಎಂ ರವರನ್ನು ಭೇಟಿಮಾಡಿ ಹರಿಹರ-ಬೈಂದೂರು ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಅರಸಾಳು ರೈಲು ನಿಲ್ದಾಣಕ್ಕೆ ರೈಲು ನಿಲುಗಡೆಗಾಗಿ 4 ಕೋಟಿ ರೂ. ಅನುದಾನದಲ್ಲಿ ಪ್ಲಾಟ್‌ಫಾರಂ ಜೊತೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದೆ. ಬ್ರಿಟೀಷರ ಕಾಲದಿಂದಲೂ ಜನನಿಬಿಡ ಪ್ರದೇಶವಾಗಿದ್ದ ನಿಲ್ದಾಣದಲ್ಲಿ ಪ್ರತಿ ರೈಲುಗಳು ನಿಲುಗಡೆಗೊಂಡು ಸಂಚರಿಸುತ್ತಿದ್ದವು. ಇತ್ತೀಚಿನ ಕೆಲವುವರ್ಷಗಳಿಂದ ಬ್ರಾಡ್‌ಗೇಜ್ ಆಗಿ ಪರಿವರ್ತನೆಗೊಂಡಿದ್ದರು ರೈಲುನಿಲುಗಡೆಗೆ ಸೂಕ್ತವ್ಯವಸ್ಥೆ ಕಲ್ಪಿಸಲಾಗಿದ್ದರೂ ಬೆಂಗಳೂರು-ಮೈಸೂರು ಎಕ್ಸಪ್ರಸ್ ರೈಲುಗಳು ನಿಲುಗಡೆಗೊಳ್ಳದೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಮುಖ್ಯ ಅಧಿಕಾರಿಗಳಾದ ತಾವುಗಳು ನಮ್ಮೂರಿನಲ್ಲಿ ರೈಲು ನಿಲುಗಡೆ ಮಾಡಿಸಬೇಕಾಗಿ ಕೋರಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಜಿಎಂ ಸಂಜೀವ್ ಕಿಶೋರ್ ಮಾತನಾಡಿ ರೈಲು ಸಂಚಾರ, ನಿಲುಗಡೆ ಅನುಮತಿ ವಿಚಾರವನ್ನು ದೆಹಲಿಯ ಕೇಂದ್ರ ರೈಲ್ವೆ ಮಂಡಳಿಯಲ್ಲಿ ನಿರ್ಧಾರವಾಗಬೇಕಾಗಿರುವುದರಿಂದ ಅವರ ಗಮನಕ್ಕೆ ತರುತ್ತೇನೆ ಎಂದರು.
ನಂತರ ಮಾಲ್ಗುಡಿ ಡೇಸ್ ನಲ್ಲಿ ಅಧಿಕಾರಿಗಳೊಂದಿಗೆ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಕೆಲ ಸಮಯ ಕಳೆದು ರೈಲ್ವೆ ನಿಲ್ದಾಣದ ಆವರಣದಲ್ಲಿ ನೆನಪಿಗಾಗಿ ಅಲಂಕಾರಿಕ ಗಿಡ ನೆಟ್ಟರು.
ಈ ಸಂದರ್ಭದಲ್ಲಿ ಡಿಆರ್‌ಎಂ ರಾಹುಲ್ ಅಗರವಾಲ್, ಹಿರಿಯ ರೈಲ್ವೆ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ, ಮುಖಂಡರಾಧ ಪಿಯೂಸ್ ರೋಢ್ರಿಗಸ್, ಗಾಯಿತ್ರಿ ವಿನಾಯಕ, ಉಂಡುಗೋಡು ನಾಗಪ್ಪ, ಗೋಪಾಲಕೃಷ್ಣ, ಗೋನ್ಸಾಲೀಸ್ ಇನ್ನಿತರರಿದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇
ಕೆಂಚನಾಲದಲ್ಲಿ ರೈಲ್ವೆ ಗೇಟ್ ವ್ಯವಸ್ಥೆ ಅಳವಡಿಸುವಂತೆ ಮನವಿ :
ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಕೆಂಚನಾಲ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಉಬೇದುಲ್ಲಾ ಷರೀಫ್ ಹಾಗೂ ತಾ.ಪಂ.ಮಾಜಿ ಅಧ್ಯಕ್ಷ ವೀರೇಶ ಆಲುವಳ್ಳಿ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತ್ಯೇಕ ಮನವಿ ಸಲ್ಲಿಸಿದರು.
ಮೊದಲು ಇದ್ದ ರೈಲ್ವೆ ಗೇಟ್ ವ್ಯವಸ್ಥೆಯನ್ನು ರದ್ದುಪಡಿಸಿ ಕೆಳಸೇತುವೆ ನಿರ್ಮಾಣಮಾಡಿರುವುದು ಅವೈಜ್ಞಾನಿಕವಾಗಿದೆ. ಮಳೆಗಾಲದಲ್ಲಿ ನೀರು ನಿಂತು ಸಂಚಾರಕ್ಕೆ ತೊಡಕಾಗುತ್ತಿದೆ ಹಾಗೂ ಭಾರಿವಾಹನಗಳ ಓಡಾಟಕ್ಕೆ ಸಾಧ್ಯವಾಗುವುದಿಲ್ಲ ಇದರಿಂದ ಹತ್ತಾರು ಗ್ರಾಮದ ಜನತೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಮೊದಲಿದ್ದ ರೈಲ್ವೇಗೇಟಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೇಂದು ಮನವಿ ಸಲ್ಲಿಸಿದರು.
ಮನವಿ ಪಡೆದ ಅಧಿಕಾರಿ ಮೇಲ್ಸೇತುವೆ ನಿರ್ಮಿಸುವ ಕುರಿತು ಆಲೋಚಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್