Headlines

ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ವಿನಯ್‌ ಕೊಡಸೆ ರವರ “ಸರ್ವ ಜ್ಞಾನ ಸಮಾಗಮ” ಕವನ ಸಂಕಲನ ಲೋಕಾರ್ಪಣೆ

ರಿಪ್ಪನ್‌ಪೇಟೆ : ತನ್ನ ಸುತ್ತಮುತ್ತಲಿನ ಪರಿಸರದ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿ ಮನಸ್ಸಿನಲ್ಲಿ ಉಂಟಾದ  ಭಾವನೆಗಳಿಗೆ ಜೀವ ತುಂಬಿ “ಸರ್ವ ಜ್ಞಾನ ಸಮಾಗಮ” ಕವನ ಸಂಕಲನ ಪುಸ್ತಕದ ಮೂಲಕ ಅಭಿವ್ಯಕ್ತಗೊಳಿಸಿದ ಗ್ರಾಮೀಣ ಪ್ರತಿಭೆಯ ಸಾಧನೆ ಶ್ಲಾಘನೀಯ ಎಂದು ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ಉಪಪ್ರಾಚಾರ್ಯ ಕೆಸಿನಮನೆ ರತ್ನಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಹೊಸನಗರ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ  ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಅಯೋಜಿಸಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಜಿ.ಎನ್. ವಿನಯ್‌ ಕೊಡಸೆ ರವರ ಚೊಚ್ಚಲ ಕವನ ಸಂಕಲನ “ಸರ್ವ ಜ್ಞಾನ ಸಮಾಗಮ” ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ತನ್ನ ಭವಿಷ್ಯದ ಕಾಲಘಟ್ಟ ರೂಪಿಸಿಕೊಳ್ಳುವ ಎಸ್‌ಎಸ್‌ಎಲ್‌ಸಿ ವ್ಯಾಸಂಗದ ಜೊತೆ ಜೊತೆಯಲ್ಲಿ ಸಾಹಿತ್ಯಾಸಕ್ತಿ ಬೆಳೆಸಿಕೊಂಡ ಗ್ರಾಮೀಣ ಪ್ರತಿಭೆಯ ಭಾಷಾ ಪಾಂಡಿತ್ಯ ಹಾಗೂ ರಾಷ್ಟ್ರಭಕ್ತಿಯ –ಪ್ರೇರಕ ಶಕ್ತಿ ಇಮ್ಮಡಿಗೊಳಿಸುವ ಕವನಗಳ ರಚನೆ ಯುವ ಬರಹಗಾರರಿಗೆ ಪ್ರೇರಣೆ ತಂದು ಕೊಡಲಿದೆ ಎಂದರು.

ಹೊಸನಗರ ತಾಲೂಕ್ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತ. ಮ. ನರಸಿಂಹ ಮಾತನಾಡಿ, ಜಿ .ಎನ್. ವಿನಯ್ ಕೊಡಸೆ  ಕವನಗಳಿಗೆ ಸೀಮಿತ ಅವಧಿ ಮೀಸಲಿಟ್ಟು ,ಎಸ್.ಎಸ್.ಎಲ್.ಸಿ ಯಲ್ಲಿ  616 ಅಂಕಗಳನ್ನು ಪಡೆದು ಸರ್ಕಾರಿ ಶಾಲೆಯಲ್ಲಿ ತಾಲ್ಲೂಕಿನಲ್ಲಿಯೇ ಅತ್ಯುನ್ನತ ಶ್ರೇಣಿಯಲ್ಲಿ ದ್ವಿತೀಯ ಸ್ಥಾನ ಪಡೆದ ಹೆಗ್ಗಳಿಕೆ ಈತನದು. ವಿದ್ಯಾರ್ಥಿಯ ಈ ಸಾಧನೆ ಉಳಿದವರಿಗೆ ಸ್ಪೂರ್ತಿಯಾಗಿ,  ಸಾಹಿತ್ಯದ ಕೃಷಿಯಲ್ಲಿ ಮಿನುಗುತಾರೆಯಾಗಿ ವಿಜ್ರಂಭಿಸಲಿ ಎಂದರು.

ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎನ್‌. ಸತೀಶ್ ಮಾತನಾಡಿ, ಬೆಳೆಯುವ ಸಿರಿ, ಮೊಳಕೆಯಲ್ಲಿ ಎಂಬಂತೆ ವಿದ್ಯಾರ್ಥಿಯಲ್ಲಿರುವ ಪ್ರತಿಭೆಯನ್ನು ಗುರುತಿಸಿ , ಪ್ರೋತ್ಸಾಹಿಸಿದ ಶಿಕ್ಷಕ ವೃಂದ ಹಾಗೂ ಪೋಷಕವರ್ಗ ಅಭಿನಂದನಾರ್ಹರು ಎಂದರು.


ಯುವ ಕವಿ ವಿನಯ್ ಜಿ. ಎನ್. ಕೊಡಸೆ ಮಾತನಾಡಿ,  ಬಡತನ ದೇವರ ಸೃಷ್ಟಿಯಲ್ಲ. ಮಾನವನ ದುರಾಸೆಗಳೇ ಬಡತನದ ಕತೃ. ಜಡತ್ವವನ್ನು ಬಿಟ್ಟು ಕಾಯಕದಲ್ಲಿ ನಿಷ್ಟೆ, ಪ್ರಾಮಾಣಿಕತೆ, ಮೈಗೂಡಿಸಿಕೊಳ್ಳಬೇಕು. ಆಗ ಪರಕಾಯ ಪ್ರವೇಶಗೊಂಡು, ಸೃಜನಶೀಲ ವ್ಯಕ್ತಿತ್ವ ರೂಪುಗೊಳ್ಳಲಿದೆ,ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ. ಬಚ್ಚಿಟ್ಟ ಜ್ಞಾನ ಕೊಳೆಯುತ್ತದೆ ಎಂದು ನೆನಪಿಸಿ ಕ್ರಿಯಾತ್ಮಕವಾಗಿ ನನ್ನನ್ನು ಹುರಿದುಂಬಿಸಿದ ಉಪ ಪ್ರಾಂಶುಪಾಲ ಕೆಸಿವಿನಮನೆ ರತ್ನಾಕರ್ ಹಾಗೂ ಪುಸ್ತಕ ವಿನ್ಯಾಸಕ್ಕೆ ರೂಪ ಕೊಟ್ಟ ಕಲಾ ವಿಭಾಗದ ಮಂಜನಾಯ್ಕ್ ಹಾಗೂ ಶಿಕ್ಷಕರು , ಪೋಷಕ ವರ್ಗದ ಪ್ರೋತ್ಸಾಹದ ನುಡಿಗಳು ನನ್ನಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದೆ ಎಂದರು.


ಎಸ್‌ಡಿಎಂಸಿ ಅಧ್ಯಕ್ಷ ಮಳಕೊಪ್ಪ ಈಶ್ವರ್ ಅಧ್ಯಕ್ಷತೆ ವಹಿಸಿದ್ದರು.ಕಲಾ ವಿಭಾಗದ ಮಂಜನಾಯ್ಕ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಯುವ ಕವಿ ವಿನಯ್ ಕೊಡಸೆ ರವರ ತಂದೆ ನಾಗರಾಜ್ ತಾಯಿ ವೀಣಾ ನಾಗರಾಜ್ ಹಾಗೂ ಕುಟುಂಬವರ್ಗ ಹಾಜರಿದ್ದರು.

Leave a Reply

Your email address will not be published. Required fields are marked *

Exit mobile version