ಹೊಸನಗರ : ಮಾನಸಿಕ ಅಸ್ವಸ್ಥ ಮಗನೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ವೃದ್ದ ಮಹಿಳೆಯೊಬ್ಬರಿಗೆ ಪ್ರಭಾವಿ ಖಾಸಗಿ ವ್ಯಕ್ತಿಯೊಬ್ಬ ಬೆದರಿಸಿ ಅವರ ಆಸ್ತಿ ಕಬಳಿಸಿ ಮನೆಯಿಂದ ಹೊರದಬ್ಬಿರುವ ಘಟನೆ ಬ್ರಹ್ಮೇಶ್ವರ ಗ್ರಾಮದಲ್ಲಿ ನಡೆದಿದೆ.
ಬ್ರಹ್ಮೇಶ್ವರ ಗ್ರಾಮದ ಶಾರದಮ್ಮ ಎಂಬ 65 ರ ವೃದ್ದೆ 30 ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡಿದ್ದು, ಮೊದಲನೆ ಮಗ ವೀರಪ್ಪ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದಾನೆ.ಮಾನಸಿಕ ಅಸ್ವಸ್ಥನಾಗಿರುವ ಎರಡನೇ ಮಗ ಜಗದೀಶ್ ಜೊತೆ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದಾರೆ.
ಬ್ರಹ್ಮೇಶ್ವರದ ವೃದ್ದೆಯ ಮನೆಯ ಬಳಿ ಇರುವ ಖಾಸಗಿ ಪ್ರಭಾವಿ ವ್ಯಕ್ತಿಯೊಬ್ಬರು ವೃದ್ದೆಯನ್ನು ಬೆದರಿಸಿ,ಮೋಸ ಮಾಡಿ ಲಕ್ಷಾಂತರ ಮೌಲ್ಯದ ಇವರ ಮನೆ ಹಾಗೂ ಜಾಗವನ್ನು ಮೂರು ಕಾಸಿಗೆ ವ್ಯಾಪಾರ ಮಾಡಿ ಅದರಲ್ಲೂ ಸ್ವಲ್ಪ ಹಣ ನೀಡಿ ಈ ಅಸಹಾಯಕ ವೃದ್ದೆ ಹಾಗೂ ಮಾನಸಿಕ ಅಸ್ವಸ್ಥ ಮಗನನ್ನು ಮನೆಯಿಂದ ಹೊರಹಾಕಿ,ಹೊಸನಗರ ಬಸ್ ನಿಲ್ದಾಣಕ್ಕೆ ಕರೆತಂದು ಬಿಟ್ಟು ಹೋಗಿದ್ದು ಈ ಸಂಬಂಧ ವೃದ್ದೆ ಶಾರದಾ ಹೊಸನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಇಳಿ ವಯಸ್ಸಿನಲ್ಲಿ ವೃದ್ದೆ ಶಾರದಾ ತನ್ನ ಮಾನಸಿಕ ಅಸ್ವಸ್ಥ ಮಗನ ಜೊತೆ ಹೊಸನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಬಾಡಿಗೆ ಹಣವನ್ನು ಕೂಲಿ ಮಾಡಿ ಕಟ್ಟುತ್ತಿದ್ದಾರೆ.ಹಾಗೂ ಮಗ ಜಗದೀಶ್ ಮಾನಸಿಕ ಅಸ್ವಸ್ಥನಾಗಿರುವುದರಿಂದ ಅವನ ಚಿಕಿತ್ಸೆ ವೆಚ್ಚವನ್ನು ಸಹ ಕೂಲಿ ಹಣದಿಂದಲೇ ಭರಿಸುತ್ತಿದ್ದು ವೃದ್ದೆಗೆ ವಯಸ್ಸಾಗಿದ್ದರಿಂದ ಹಾಗೂ ಆರೋಗ್ಯ ಸರಿಯಿಲ್ಲದೇ ಇರುವುದರಿಂದ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿರುವ ಕಾರಣ ವೃದ್ದೆ ಪೊಲೀಸರ ಬಳಿ ನ್ಯಾಯಕ್ಕಾಗಿ ಅಂಗಲಾಚುತಿದ್ದಾರೆ.
ಅವರು ಕೊಟ್ಟಿರುವ ಅಲ್ಪ ಸ್ವಲ್ಪ ಹಣ ಹೇಗಾದರೂ ಮಾಡಿ ಹಿಂದಿರುಗಿಸುತ್ತೇನೆ ನಾನು ನನ್ನ ಮಗ ವಾಸಿಸಲು ನಮ್ಮ ಸ್ವಂತ ಮನೆಯನ್ನು ಬಿಡಿಸಿಕೊಡಿ ಎಂದು ಕಣ್ಣಿರು ಹಾಕಿ ಅಂಗಲಾಚುವಾಗ ಎಂತಹ ಕಲ್ಲು ಮನಸ್ಸಿನವರಿಗೂ ಎದೆ ಚುರುಕ್ ಅನ್ನಿಸದೇ ಇರದು.
ಕೂಡಲೇ ಸಂಬಂಧ ಪಟ್ಟವರು ಈ ಬಗ್ಗೆ ಗಮನಹರಿಸಿ ಅಸ್ವಸ್ಥ ಮಗನೊಂದಿಗೆ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ 65 ವರ್ಷದ ವೃದ್ದೆ ಶಾರದಾ ರವರಿಗೆ ನ್ಯಾಯ ಕೊಡಿಸಬೇಕಾಗಿದೆ.