ಶಿವಮೊಗ್ಗ ನಗರದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆ ನಡೆದ ನಂತರ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಿವಮೊಗ್ಗ ಪಾಲಿಕೆ ಸದಸ್ಯ ಚನ್ನಬಸಪ್ಪ ಅವರು, ಮುಸಲ್ಮಾನ ಗೂಂಡಾಗಳನ್ನು ಬಿಡುವುದಿಲ್ಲ, ಅವರನ್ನು ದಮನ ಮಾಡುತ್ತೇವೆ ಎಂಬ ಪ್ರಚೋದನಕಾರಿ ಹೇಳಿಕೆಯೇ ಗಲಭೆಗೆ ಮುಖ್ಯ ಕಾರಣವಾಗಿದ್ದರಿಂದ ಅವರ ವಿರುದ್ಧ ಎಫ್‍ಐಆರ್ ದಾಖಲಿಸಲು ಶಿವಮೊಗ್ಗ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಬೆಂಗಳೂರು ನಗರದ 40ನೆ ಎಸಿಎಂಎಂ ಕೋರ್ಟ್‍ಗೆ ಅರ್ಜಿ ಸಲ್ಲಿಕೆಯಾಗಿದೆ.ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಹರ್ಷ ಹತ್ಯೆಯ ನಂತರ ಹೇಳಿಕೆ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ಪಾಲಿಕೆ ಸದಸ್ಯ ಚನ್ನಬಸಪ್ಪ ಅವರ ವಿರುದ್ಧ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರನ್ನು ನೀಡಲು ಹೋದರೂ ದೂರನ್ನು ಸ್ವೀಕರಿಸಿರುವುದಿಲ್ಲ. ಹಾಗೂ ಸಂಬಂಧಪಟ್ಟ ಅಧಿಕಾರಿಗಳೂ ಎಫ್‍ಐಆರ್ ದಾಖಲಿಸಿಕೊಂಡಿಲ್ಲ ಎಂದು ಅರ್ಜಿದಾರರಾದ ಶಿವಮೊಗ್ಗ ನಗರದ ರಿಯಾಝ್ ಅಹ್ಮದ್ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಪಿಗಳಾದ ಕೆ.ಎಸ್.ಈಶ್ವರಪ್ಪ, ಚನ್ನಬಸಪ್ಪ ಅವರ ವಿರುದ್ಧ 124(ಎ), 153(ಎ), 153(ಬಿ), 295(ಎ), 295(ಬಿ), 505(2), ಮತ್ತು 504ಆರ್/ಡಬ್ಲ್ಯೂ ಸೆಕ್ಷನ್ 34 ಆಫ್ ಐಪಿಸಿ ಕಲಂಗಳಡಿ ಪ್ರಕರಣವನ್ನು ದಾಖಲಿಸುವಂತೆ ಹಾಗೂ ಸೂಕ್ತ ತನಿಖೆ ಕೈಗೊಂಡು ಕಾನೂನು ಕ್ರಮ ಜರುಗಿಸಲು ನಿರ್ದೇಶನ ನೀಡಬೇಕೆಂದು ಪೀಠಕ್ಕೆ ಮನವಿ ರಿಯಾಝ್ ಅವರು ಮಾಡಿದ್ದಾರೆ. ಅರ್ಜಿದಾರರ ಪರವಾಗಿ ವಕೀಲರಾದ ಕಾಶೀನಾಥ್ ಜೆ.ಡಿ. ಅವರು ವಾದಿಸಲಿದ್ದಾರೆ.