ರಿಪ್ಪನ್ ಪೇಟೆ : ಇಲ್ಲಿನ ಹಾಸ್ಟೆಲ್ ರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿಯ ಮಾಲೀಕರು ಅಕ್ರಮವಾಗಿ ಬಡವರಿಗೆ ನೀಡಬೇಕಾಗಿದ್ದ ಸರ್ಕಾರದ ಉಚಿತ ಪಡಿತರ ಸುಮಾರು ಏಳು ಕ್ವಿಂಟಾಲ್ 50 ಕೆಜಿ ಅಕ್ಕಿಯನ್ನು ಕದ್ದು ಆಟೋದಲ್ಲಿ ಅಕ್ರಮವಾಗಿ ಸಾಗಿಸುವಾಗ ಸಾರ್ವಜನಿಕರು ಶಿವಮೊಗ್ಗ ರಸ್ತೆಯ ಖಾಸಗಿ ರೈಸ್ ಮಿಲ್ ನ ಆವರಣದಲ್ಲಿ ತಡೆಹಿಡಿದು ನಿಲ್ಲಿಸಿದ ಪ್ರಸಂಗ ಇಂದು ಮಧ್ಯಾಹ್ನ ನಡೆದಿದೆ.
ಇಂದು ಮದ್ಯಾಹ್ನ ಖಾಸಗಿ ಆಟೋ ಗೆ 25 ಕೆಜಿ ಪ್ರಮಾಣದಲ್ಲಿ 30 ಚೀಲ ಪಡಿತರ ಅಕ್ಕಿಯನ್ನು ತುಂಬುತ್ತಿರುವುದನ್ನು ಗಮನಿಸಿದ ವಿನಾಯಕ ನಗರದ ರಾಘವೇಂದ್ರ ಬಾಳಿಗ ಎಂಬುವವರು ಎಲ್ಲಾ ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ.ನಂತರ ಆಟೋವನ್ನು ಹಿಂಬಾಲಿಸಿ ಶಿವಮೊಗ್ಗ ರಸ್ತೆಯ ಖಾಸಗಿ ರೈಸ್ ಮಿಲ್ ನಲ್ಲಿ ಇಳಿಸುತ್ತಿರುವ ಸಂಧರ್ಭದಲ್ಲಿ ಮಾಜಿ ಗ್ರಾಪಂ ಸದಸ್ಯ ನಾಗೇಂದ್ರ , ವಿಶ್ವನಾಥ್ ಹಾಗೂ ಇನ್ನಿತರ ಸಾರ್ವಜನಿಕರೊಂದಿಗೆ ತೆರಳಿ ತಡೆ ಹಿಡಿದು ಸಂಬಂಧ ಪಟ್ಟವರಿಗೆ ಮಾಹಿತಿ ನೀಡಿದ್ದಾರೆ.
ನಂತರ ಸ್ಥಳಕ್ಕಾಗಮಿಸಿದ ಗ್ರಾಪಂ ಸದಸ್ಯ ಸುಂದರೇಶ್ ,ಅಶ್ವಿನಿ ರವಿಶಂಕರ್ ಸ್ಥಳವನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದರು.
ಸದರಿ ನ್ಯಾಯಬೆಲೆ ಅಂಗಡಿಯ ಮಾಲೀಕ ಬಡವರ ಪಾಲಿನ ಅಕ್ಕಿಗಳನ್ನು ರೈಸ್ ಮಿಲ್ ಗಳಲ್ಲಿ ಪಾಲಿಶ್ ಮಾಡಿಸಿ ಅದನ್ನು ಬ್ರಾಂಡೆಡ್ ಚೀಲಗಳಲ್ಲಿ ತುಂಬಿ ಸಾವಿರಾರು ರೂಪಾಯಿಗಳಿಗೆ ಅಂಗಡಿಗಳಿಗೆ ಮಾರಾಟ ಮಾಡಿ ಅಧಿಕ ಲಾಭ ಮಾಡುತ್ತಿರುವುದು ಈ ಮಾಲೀಕರಿಗೆ ಹೊಸತೇನಲ್ಲ. ಈ ತರಹದ ಅಕ್ರಮ ದಂಧೆಗಳು ಬಹಳಷ್ಟಿದೆ ಎಂದು ರಾಘವೇಂದ್ರ ಬಾಳಿಗ ದೂರಿದ್ದಾರೆ.
ನಂತರ ಅಧಿಕಾರಿಗಳಿಗೆ ದೂರು ಸಲ್ಲಿಸಿ ಆಟೋ ಹಾಗೂ ಅಕ್ಕಿಯನ್ನು ಅಧಿಕಾರಿಗಳು ವಶಪಡಿಸಿಕೊಂಡು ದೂರು ದಾಖಲಿಸಿದ್ದಾರೆ.
ಘಟನಾಸ್ಥಳಕ್ಕೆ ಹೊಸನಗರ ಆಹಾರ ನಿರೀಕ್ಷಕ ಬಾಲಚಂದ್ರ ಪೊಲೀಸ್ ಅಧಿಕಾರಿಗಳು ಕಂದಾಯ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಬಡವರ ಹೊಟ್ಟೆಯ ಮೇಲೆ ಬರೆ ಎಳೆಯುವ ಇಂತಹ ಹಲವು ಭ್ರಷ್ಟರಿಗೆ ಶಿಕ್ಷೆ ಆಗದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡುವುದು ಅನಿವಾರ್ಯ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.