ರಿಪ್ಪನ್‌ಪೇಟೆ: ಶಾಸಕ ಹರತಾಳು ಹಾಲಪ್ಪರ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಬಿಜೆಪಿ ಕಾರ್ಯಕರ್ತರು ಶ್ರೀಸಿದ್ಧಿವಿನಾಯಕ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ಸಿಹಿ ವಿತರಿಸುವ ಸಂದರ್ಭದಲ್ಲಿ ಹಿಜಾಬ್‌ಗೆ ಆಕ್ಷೇಪವ್ಯಕ್ತ ಪಡಿಸಿರುವ ಘಟನೆ ಇಂದು ನಡೆದಿದೆ.
ವಿಶೇಷ ಪೂಜೆಯ ನಂತರ ಪಕ್ಕದ ಸರ್ಕಾರಿ ಶಾಲೆಗೆ ತೆರೆಳಿದ ಬಿಜೆಪಿ ಮುಖಂಡರ ತಂಡ ತರಗತಿಯ ಒಳಗಡೆ ಮಕ್ಕಳಿಗೆ ಸಿಹಿ ಹಂಚುವ ಸಮಯದಲ್ಲಿ ಕೆಲವಿದ್ಯಾರ್ಥಿನಿಯರು ಹಿಜಾಬ್ ಧರಿಸಿರುವುದು ಗಮನಿಸಿದ್ದಾರೆ. ಅಸಮಧಾನಗೊಂಡ ಮುಖಂಡರು ಮುಖ್ಯಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡು ಶಾಲಾ ಕೊಠಡಿಯಲ್ಲಿ ಕೆಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಿಜಾಬ್ ಹಾಕಿರುವುದನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಮಧ್ಯಂತರ ಆದೇಶವನ್ನು ಕಟ್ಟನಿಟ್ಟಾಗಿ ಪಾಲಿಸಲೆ ಬೇಕು ಎಂದು ತಾಕೀತು ಮಾಡಿದ ನಂತರ ಸಮಾಧಾನಿತರಾಗದ ಮುಖಂಡರು ಪೊಲೀಸ್ ಠಾಣೆಗೆ ತೆರಳಿ ಇಲಾಖಾ ಅಧಿಕಾರಿಗಳಿಗೆ ಶಾಲೆಯಲ್ಲಿ ಹಿಜಾಬ್ ನಿರ್ಬಂಧಿಸುವಂತೆ ಮೌಖಿಕವಾಗಿ ಒತ್ತಾಯಿಸಿದ್ದಾರೆ.
ಈ ಘಟನೆಯ ಮಾಹಿತಿ ಅರಿತ ಕೆಲ ಪೋಷಕರು ಶಾಲೆ ಎದುರು ಜಮಾವಣೆಗೊಂಡು ಪ್ರಾಥಮಿಕ ಶಾಲೆಗಳಿಗೆ ನಿಯಮ ಅನ್ವಯವಾಗುವುದಿಲ್ಲ. ಉದ್ದೇಶ ಪೂರ್ವಕವಾಗಿ ಕೆಲವರು ಅನಗತ್ಯ ಗೊಂದಲ ಸೃಷ್ಠಿಸುತ್ತಿದ್ದಾರೆ. ಎಂದಿನಂತೆಯೇ ಮುಂದೆಯೂ ಎಲ್ಲಾ ಮಕ್ಕಳು ಒಟ್ಟಿಗೆ ಸೇರಿ ಕಲಿಯುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಘಟನೆಯ ವಿಷಯ ತಿಳಿದ ಹೊಸನಗರ ವೃತ್ತ ನಿರೀಕ್ಷಕ ಮಧುಸೂದನ್ ಸ್ಥಳಕ್ಕಾಗಮಿಸಿ ಪೋಷಕರು, ಶಿಕ್ಷಕರು ಹಾಗೂ ಆಕ್ಷೇಪಿತರೊಂದಿಗೆ ಸಮಾಲೋಚನೆ ನಡೆಸಿ, ಘಟನೆಯನ್ನು ತಹಬದಿಗೆ ತರಲು ಸಫಲರಾದರು.
“ಶಾಲೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಿಜಾಬ್ ಧರಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದೇವೆ. ನಿಮ್ಮ ಈ ಅಸಮರ್ಥ ಧೋರಣೆಯಿಂದ ಸಮಸ್ಯೆ ದೊಡ್ಡದು ಮಾಡಬೇಡಿ, ಕೂಡಲೆ ಕ್ರಮ ವಹಿಸಬೇಕೆಂದು ಸಲಹೆ ನೀಡಿದ್ದೇವೆ” ಎಂದು ಬಿಜೆಪಿ ಮುಖಂಡ ಆರ್.ಟಿ. ಗೋಪಾಲ್ ಹೇಳಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಪೋಷಕರಾದ ಮೈಮುನಾ “ಮುಸಲ್ಮಾನರು ಇತ್ತೀಚೆಗೆ ಆಕಾಶದಿಂದ ಇಳಿದವರಲ್ಲ. ಹಿಂದಿನಿಂದಲೂ ಸಮಾಜದಲ್ಲಿ ಎಲ್ಲರೂ ಒಟ್ಟಾಗಿಯೇ ಬಾಳುತ್ತಿದ್ದೇವೆ. ಶಾಲೆಗಳಲ್ಲಿ ಗೊಂದಲ ಸೃಷ್ಠಿಸುವುದು ಸರಿಯಲ್ಲ. ಒಂದರಿಂದ ೮ ನೇ ತರಗತಿವರೆಗೆ ಹಿಜಾಬ್ ಬಗ್ಗೆ ಸ್ಪಷ್ಟತೆಯಿಲ್ಲ. ನಮ್ಮ ಮಕ್ಕಳ ಶಿಕ್ಷಣಕ್ಕೆ ಅನಾವಶ್ಯಕ ತೊಂದರೆ ನೀಡಬೇಡಿ” ಎಂದರು.
“ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಈ ಮೊದಲೆ ಎಲ್ಲರಿಗೂ ಸೂಚನೆ ನೀಡಲಾಗಿತ್ತು. ಇಲಾಖ ಅಧಿಕಾರಿಗಳಿಂದ ಯಾವುದೇ ಸ್ಪಷ್ಟ ಸಂದೇಶ ಬಂದಿರಲಿಲ್ಲ.” ಎಂದು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕಿ ಲೋಲಾಕ್ಷಿ ಹೇಳಿದರು.