ಕಾರ್ಗಿಲ್ ಯುದ್ಧದ ಸಮಯದಲ್ಲಿ ಶತ್ರುಗಳನ್ನು ಹೆಡೆಮುರಿ ಕಟ್ಟಿ ಭಾರತ ದೇಶದ ಕಾರ್ಗಿಲ್ ವಿಜಯೋತ್ಸವಕ್ಕೆ ತನ್ನದೇ ಆದಂತಹ ಕೊಡುಗೆ ನೀಡಿದಂತಹ ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮದ ನಿವಾಸಿ ಹಾಗೂ ಮಾಜಿ ಯೋಧ ಶ್ರೀನಿವಾಸ್ ಕೆ ಆರ್ ಅವರಿಗೆ ಇದೀಗ “ವೀರಯೋಧ” ಎಂಬ ಬಿರುದು ಲಭಿಸಿದೆ.
ಭಾನುವಾರ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಗವಿಸಿದ್ದೇಶ್ವರ ಶಾಖಾ ಮಠದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ “ಕನ್ನಡ ನುಡಿ ವೈಭವ” ಎಂಬ ಸಾಹಿತ್ಯ ಕಾರ್ಯಕ್ರಮದಲ್ಲಿ ನಮ್ಮ ಮಲೆನಾಡಿನ ಹೆಮ್ಮೆಯ ಯೋಧನಿಗೆ “ವೀರಯೋಧ” ಎಂಬ ಬಿರುದು ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಗವಿಸಿದ್ದೇಶ್ವರ ಮಠದ ಹಿರಿಶಾಂತವೀರ ಮಹಾಸ್ವಾಮಿಗಳು,ಕರ್ನಾಟಕ ರಾಜ್ಯ ಬರಹಗಾರರ ಸಂಘದ ಅಧ್ಯಕ್ಷರಾದ ಮಧುನಾಯ್ಕ್ ಲಮಾಣಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಹೆದ್ದಾರಿಪುರದ ಶ್ರೀನಿವಾಸ್ ಕೆ ಆರ್ ರವರು ಇಪ್ಪತ್ತೆರಡು ವರ್ಷ ಭಾರತೀಯ ಸೇನೆಯಲ್ಲಿ ಗಡಿ ಭದ್ರತಾ ಪಡೆಯಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸಿದ್ದರು.ಸೇನೆಯಲ್ಲಿ ಹವಾಲ್ದಾರ್ ಮೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನೂ ಕೂಡ ಕೆಲಸವನ್ನು ಮುಂದುವರಿಸಿ ಉನ್ನತ ಸ್ಥಾನಕ್ಕೆ ಹೋಗಬಹುದಿತ್ತು ಆದರೆ ಯುವಕರಿಗೆ ಅವಕಾಶ ದೊರೆಯಲಿ ಎಂದು ಸ್ವತಃ ಇವರೇ ವಿಆರ್ ಎಸ್ ತೆಗೆದುಕೊಂಡರು ನಂತರ ಇಲ್ಲಿ ಬಂದು ಯಾವ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದ್ದರೂ ಅವರಿಗೆ ಕೆಲಸ ನಿರಾಯಾಸವಾಗಿ ಸಿಗುತ್ತಿತ್ತು ಆದರೆ ಇನ್ನೊಬ್ಬ ಯುವಕನ ಕೆಲಸವನ್ನು ಕಬಳಿಸುವ ಮನಸಾಗದೆ ಇವರು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಇಷ್ಟೊಂದು ಉದಾರ ಮನಸ್ಸು ಇರುವಂತಹ ನಮ್ಮೂರಿನ ಹೆಮ್ಮೆಯ ಸೈನಿಕನಿಗೆ ನಮ್ಮದೊಂದು ಸಲಾಂ.ಭಾರತಾಂಬೆಯ ಸೇವೆ ಸಲ್ಲಿಸಿದ ನಮ್ಮೂರಿನ ಈ ಹೆಮ್ಮೆಯ ಯೋಧನಿಗೆ ಈ ಬಿರುದು ಸಿಕ್ಕಿದ್ದು ಮಲೆನಾಡಿಗೆ ಬಿರುದು ಸಿಕ್ಕಷ್ಟು ಹೆಮ್ಮೆಯೆನಿಸುತ್ತಿದೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್