ಹೊಸನಗರ: ಇತ್ತೀಚಿಗೆ ಇತಿಹಾಸ ಸಂಶೋಧಕರಾದ ನವೀನ್ ಜಿ ಆಚಾರ್ಯ ವರಕೋಡು ಅವರು ಗಂಗನಕೊಪ್ಪ ಗ್ರಾಮದಲ್ಲಿ ಕ್ಷೇತ್ರ ಕಾರ್ಯ ನಡೆಸಿದಾಗ ಪ್ರಾಇತಿಹಾಸ ಹಾಗೂ 15-16ನೇ ಶತಮಾನಕ್ಕೆ ಸೇರಿದ ಪ್ರಾಚ್ಯಾವಶೇಷಗಳು ಪತ್ತೆಯಾಗಿದೆ.
ಗಂಗನಕೊಪ್ಪ ಗ್ರಾಮದ ಹೊರವಲಯದಲ್ಲಿ ಹರಿಯುವ ಕಲ್ಲುಹಳ್ಳ ಹೊಳೆಯ ಬಲದಂಡೆಯ ಮೇಲೆ ಸುಪ್ರಕಾಶ ಎಂಬುವವರು ತಮ್ಮ ತೋಟದಲ್ಲಿ ಸಸಿಗಳನ್ನು ನೆಡಿಸಲು ಗುಣಿಗಳನ್ನು ತೆಗೆಯುವ ಸಂಧರ್ಭದಲ್ಲಿ ಪ್ರಾಗೈತಿಹಾಸ ಹಾಗೂ 15-16ನೇ ಶತಮಾನಕ್ಕೆ ಸಂಬಂಧಿಸಿದ ಅನೇಕ ಅವಶೇಷಗಳು ಲಭ್ಯವಾಗಿದೆ.
ಅವುಗಳಲ್ಲಿ ಮುಖ್ಯವಾದವುಗಳೆಂದರೆ ಇತಿಹಾಸ ಕಾಲದ ನವಶಿಲಾಯುಗಕ್ಕೆ ಸಂಬಂಧಿಸಿದ ರಿಂಗ್‌ಸ್ಟೋನ್, ಪ್ರಾಗೈತಿಹಾಸ ಕಾಲಕ್ಕೆ ಸಂಬಂಧಿಸಿದಂತೆ ಇದೊಂದೇ ಅವಶೇಷ ಈ ನೆಲೆಯಲ್ಲಿ ಲಭ್ಯವಾಗಿದೆ. ಪ್ರಾಗೈತಿಹಾಸ ಮಾನವನು ಕಲ್ಲುಹಳ್ಳ ಭೂ ಪರಿಸರದಲ್ಲಿ ನೆಲೆಸಿದ್ದರ ಕುರಿತು ಅನೇಕ ಅವಶೇಷಗಳನ್ನು ಈ ಹಿಂದೆ ಡಾ.ಪ್ರವೀಣ್‌ದೊಡ್ಡಗೌಡ್ರು ಮತ್ತು ನವೀನ್ ಜಿ ಆಚಾರ್ಯ ವರಕೋಡು ಇವರು ಪತ್ತೆ ಮಾಡಿ ವರದಿ ಮಾಡಿದ್ದಾರೆ.
ಅವುಗಳ ಆಧಾರದ ಮೇಲೆ ಈ ನೆಲೆಯವರೆಗು ಪ್ರಾಗೈತಿಹಾಸಿಕ ಮಾನವನು ತನ್ನ ಚಟುವಟಿಕೆಗಳನ್ನು ವಿಸ್ತರಿಸಿರುವ ಸಾಧ್ಯತೆಇದೆ ಎಂದು ಹೇಳಬಹುದು. ಹಾಗಾಗಿಯೇ ರಿಂಗ್‌ಸ್ಟೋನ್ ಈ ನೆಲೆಯಲ್ಲಿ ದೊರೆತಿದೆ. ಪ್ರಾಗೈತಿಹಾಸಿಕ ಅವಶೇಷಗಳಲ್ಲದೆ ಈ ನೆಲೆಯಲ್ಲಿ 16ನೇ ಶತಮಾನಕ್ಕೆ ಸಂಬಂಧಿಸಿದ ನಾಯಕರ ಕಾಲಾವಧಿಯ ಕಬ್ಬಿಣದ ಪಿರಂಗಿಗುಂಡು, ಕಬ್ಬಿಣದ ಸಲಾಕೆ, ಗ್ರಾನೈಟ್ ಶಿಲೆಯಿಂದ ಮಾಡಿದ ಪಿರಂಗಿಗುಂಡುಗಳು ಹಾಗೂ ಔಷೋದೋಪಚಾರ ಹಾಗೂ ಇತರ ಕಾರ್ಯಗಳಿಗೆ ಬಳಸುತ್ತಿದ್ದ ಅರೆಯುವ ಕಲ್ಲುಗಳು, ರುಬ್ಬುವ ಕಲ್ಲುಗಳು ಹಾಗೂ 15-16ನೇ ಶತಮಾನದಲ್ಲಿ ಮನೆಗಳ ನಿರ್ಮಾಣದಲ್ಲಿ ಬಳಸುತ್ತಿದ್ದ ಕೀ ಸ್ಟೋನ್(ಚಿಲಕ)ಗಳು ಹಾಗೂ ಕೆಂಪುವರ್ಣದ ದಪ್ಪನಾದ ಮಡಿಕೆಚೂರು ಲಭ್ಯವಾಗಿದೆ. ಇದಲ್ಲದೆ ಗ್ರಾನೈಟ್ ಶಿಲೆಯಿಂದ ಮಾಡಿದ ಗಣೇಶನ ಭಗ್ನಗೊಂಡ ಶಿಲ್ಪವನ್ನು ಈ ನೆಲೆಯಲ್ಲಿ ಕಾಣಬಹುದು. ಇವುಗಳ ಆಧಾರದ ಮೇಲೆ ಗಂಗನಕೊಪ್ಪ ನೆಲೆಯಲ್ಲಿ ಪ್ರಾಗೈತಿಹಾಸ ಕಾಲದಿಂದ ಐತಿಹಾಸಿಕ ಕಾಲದವರೆಗೆ ಮಾನವನು ನೆಲೆನಿಂತಿದ್ದರ ಕುರಿತು ದೃಢಿಕರಿಸಬಹುದು.
ಕ್ರಿ.ಶ. 1499- ಕ್ರಿ.ಶ. 1763 ರ ವರೆಗೆ ಕೆಳದಿ ನಾಯಕರು ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಆಳಿದ ರಾಜವಂಶ ಶಿವಮೊಗ್ಗ ಜಿಲ್ಲೆಯ ಕೆಳದಿ, ಬಿದನೂರು, ಇಕ್ಕೇರಿ, ರಾಜಧಾನಿಯನ್ನಾಗಿ ಮಾಡಿಕೊಂಡು ಚೌಡಪ್ಪನಾಯಕರಿಂದ ಹಿಡಿದು ರಾಣಿ ವೀರಮ್ಮಾಜಿ ವರೆಗೆ ಈ ರಾಜವಂಶ ಆಳಲ್ಪಟ್ಟಿದೆ. ಇವರು ಆರಂಭದಲ್ಲಿ ವಿಜಯನಗರ ಸಾಮಂತರಾಗಿ ಆಳಿದರು. 1565 ವಿಜಯನಗರ ಪತನ ನಂತರ ಸ್ವತಂತ್ರರಾದರು ನಂತರ ಶಿವಮೊಗ್ಗ, ಕರಾವಳಿ ಜಿಲ್ಲೆ, ಮಧ್ಯಭಾಗದ ಜಿಲ್ಲೆಗಳ ಮಲೆನಾಡು ಭಾಗಗಳಲ್ಲಿ ಆಳ್ವಿಕೆಯನ್ನು ನಡೆಸಿದರು. ಹೀಗೆ ಗಂಗನಕೊಪ್ಪ ಗ್ರಾಮದಲ್ಲಿ ಇವರ ಕಾಲಕ್ಕೆ ಸೇರಿದ ನೆಲೆ ದೊರೆತಿದ್ದು, ಅಲ್ಲಿ ದೊರೆತಿರುವಂತಹ ಅವಶೇಷಗಳು ಸಾಕ್ಷಿಯಾಗಿದೆ ಎಂದು ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರವೀಣ್ ದೊಡ್ಡಗೌಡ್ರು ತಿಳಿಸಿರುತ್ತಾರೆ.
ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ👇👇👇*