ಮನೆಗೆ ಬಂದ ಬಳಿಕ ಮಹಿಳೆಗೆ ಆಘಾತ; ಕುತ್ತಿಗೆಯಲ್ಲಿದ್ದ 30 ಗ್ರಾಂ ಚಿನ್ನದ ಸರ ನಾಪತ್ತೆ , ದೂರು ದಾಖಲು
ಆನ್ ಲೈನ್ ಶಾಪಿಂಗ್ ಮಾಡಿದ್ದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ₹1.45 ಲಕ್ಷ ಮಾಯ
A 65-year-old woman lost a 30-gram gold chain worth ₹1.60 lakh while returning home from work in Shivamogga. A case has been registered at Kote Police Station, and an investigation is underway.
ಶಿವಮೊಗ್ಗ, ಜುಲೈ 5: ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಸುಮಾರು ₹1.60 ಲಕ್ಷ ಮೌಲ್ಯದ ಚಿನ್ನದ ಸರ ನಾಪತ್ತೆಯಾಗಿರುವ ಘಟನೆ ಶಿವಮೊಗ್ಗ ನಗರದ ವಿದ್ಯಾನಗರದಲ್ಲಿ ನಡೆದಿದೆ.
ವಿದ್ಯಾನಗರ ನಿವಾಸಿ ಹಾಗೂ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 65 ವರ್ಷದ ಯಲ್ಲಮ್ಮ ಅವರು ಚಿನ್ನದ ಸರ ಕಳೆದುಕೊಂಡಿರುವ ಮಹಿಳೆ. ಇವರು ಹೊಳೆ ಬಸ್ ನಿಲ್ದಾಣದ ಸಮೀಪದ ಮಂಜುಶ್ರೀ ದಂತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಜೂನ್ 27ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳಿದ ಬಳಿಕ, ಮನೆಗೆ ಬಂದಿದ್ದ ಸಂಬಂಧಿಯೊಬ್ಬರು ಯಲ್ಲಮ್ಮ ಅವರ ಕುತ್ತಿಗೆಯಲ್ಲಿ ಸರ ಇಲ್ಲದಿರುವುದನ್ನು ಗಮನಿಸಿದ್ದಾರೆ. ಆಗ ಕುತ್ತಿಗೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಸರ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ಘಟನೆ ತಿಳಿದ ಬಳಿಕ ಯಲ್ಲಮ್ಮ ಅವರು ತಾವು ಸಂಚರಿಸಿದ್ದ ಮಾರ್ಗ ಹಾಗೂ ಆಸ್ಪತ್ರೆ ಸುತ್ತಮುತ್ತ ವ್ಯಾಪಕವಾಗಿ ಹುಡುಕಾಟ ನಡೆಸಿದರೂ ಚಿನ್ನದ ಸರ ಪತ್ತೆಯಾಗಿಲ್ಲ. ತಮ್ಮ ಚಿನ್ನದ ಸರವನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ ಅವರು ದೂರು ನೀಡಿದ್ದಾರೆ.
ಈ ಸಂಬಂಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆನ್ ಲೈನ್ ಶಾಪಿಂಗ್ ಮಾಡಿದ್ದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ₹1.45 ಲಕ್ಷ ಮಾಯ
ಭದ್ರಾವತಿ: ಆನ್ಲೈನ್ ಶಾಪಿಂಗ್ ಆಪ್ ಮೀಶೋದ ಕಸ್ಟಮರ್ ಕೇರ್ ಹೆಸರಿನಲ್ಲಿ ಬಂದ ಕರೆಯನ್ನು ನಂಬಿ OTP ಹಂಚಿಕೊಂಡ ವೃದ್ಧರೊಬ್ಬರು ₹1.45 ಲಕ್ಷ ಕಳೆದುಕೊಂಡಿದ್ದಾರೆ.
ಸೀಗೇಬಾಗಿಯ ನಿವಾಸಿಯೊಬ್ಬರು ವಂಚನೆಗೊಳಗಾದವರು. ಇವರು ಮೀಶೋ ಆಪ್ ಮೂಲಕ ₹138 ಮೌಲ್ಯದ ಜಪಾನಿ ಜೆಲ್ ಆಯಿಲ್ ಬುಕ್ ಮಾಡಿದ್ದರು. ಜೂನ್ 6ರಂದು ಬಂದಿದ್ದ ಉತ್ಪನ್ನ ಸರಿಯಿಲ್ಲದ ಕಾರಣ ಅದನ್ನು ವಾಪಸ್ ಮಾಡಲು ಯತ್ನಿಸಿದಾಗ, ಹಣ ಮರುಪಾವತಿಯಾಗುವುದಿಲ್ಲ ಎಂಬ ಸಂದೇಶ ಬಂದಿತ್ತು.
ಗೂಗಲ್ನಲ್ಲಿ ಸಿಕ್ಕ ಮೀಶೋ ಗ್ರಾಹಕ ಸೇವಾ ಕೇಂದ್ರದ ಸಂಖ್ಯೆಗೆ ಭಾಷಾ ಕರೆ ಮಾಡಿದ್ದರು. ಅಂದೇ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ತಾನು ಮೀಶೋ ಕಂಪನಿಯಿಂದ ಮಾತನಾಡುತ್ತಿರುವುದಾಗಿ ನಂಬಿಸಿದ್ದ. ಹಣ ಮರುಪಾವತಿ ಮಾಡುವುದಾಗಿ ಹೇಳಿ ಮೊಬೈಲ್ಗೆ ಬಂದ ಎರಡು ಒಟಿಪಿ ಸಂಖ್ಯೆಗಳನ್ನು ಪಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಮರುದಿನ ಬೆಳಿಗ್ಗೆ ಭಾಷಾ ತಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ, ಎಸ್ಬಿಐ ಖಾತೆಯಿಂದ ₹99,000 ಹಾಗೂ ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ₹46,000 ಸೇರಿದಂತೆ ಒಟ್ಟು ₹1,45,000 ಆನ್ಲೈನ್ ಮೂಲಕ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸಂಬಂಧ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




