Headlines

ಪರಿಸರ ಸಂರಕ್ಷಣೆಗೆ ನಿತ್ಯ ಜಾಗೃತಿ ಅಗತ್ಯ – ಪಿಎಸ್‌ಐ ರಾಜುರೆಡ್ಡಿ | ರಿಪ್ಪನ್‌ಪೇಟೆಯಲ್ಲಿ ರೋಟರಿ ಕ್ಲಬ್‌ನಿಂದ ವನಮಹೋತ್ಸವ

ಪರಿಸರ ಸಂರಕ್ಷಣೆಗೆ ನಿತ್ಯ ಜಾಗೃತಿ ಅಗತ್ಯ – ಪಿಎಸ್‌ಐ ರಾಜುರೆಡ್ಡಿ | ರಿಪ್ಪನ್‌ಪೇಟೆಯಲ್ಲಿ ರೋಟರಿ ಕ್ಲಬ್‌ನಿಂದ ವನಮಹೋತ್ಸವ

PSI Rajureddy stressed the need for continuous environmental awareness during a Vanamahotsava sapling plantation drive organized by Rotary Club on the Hosanagara Road divider.

ರಿಪ್ಪನ್‌ಪೇಟೆ: ಪರಿಸರ ದಿನಾಚರಣೆ ಅಥವಾ ವನಮಹೋತ್ಸವವನ್ನು ಕೇವಲ ಒಂದು ದಿನ ಆಚರಿಸಿದರೆ ಸಾಕಾಗುವುದಿಲ್ಲ. ಪರಿಸರ ಸಂರಕ್ಷಣೆ ಕುರಿತು ಪ್ರತಿದಿನವೂ ಜಾಗೃತಿ ವಹಿಸುವುದು ಅತ್ಯಗತ್ಯ. ಇಲ್ಲವಾದರೆ ಪ್ರಕೃತಿಗೆ ಗಂಭೀರ ಅಪಾಯ ಎದುರಾಗಲಿದೆ ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಹೇಳಿದರು.

ಪಟ್ಟಣದ ಹೊಸನಗರ ರಸ್ತೆಯ ಅಗಲೀಕರಣದ ಬಳಿಕ ನಿರ್ಮಿಸಲಾಗಿರುವ ಡಿವೈಡರ್‌ಗಳ ಮಧ್ಯಭಾಗದಲ್ಲಿ ರೋಟರಿ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ ನೂರಾರು ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ಬೆಳೆಸುವುದೇ ವನಮಹೋತ್ಸವದ ನಿಜವಾದ ಉದ್ದೇಶವಾಗಿದೆ. ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು, ಮರಗಳ ನಾಶ, ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿರುವುದು ವಾಯುಮಾಲಿನ್ಯ ಮತ್ತು ಉಷ್ಣಾಂಶ ಏರಿಕೆಗೆ ಕಾರಣವಾಗುತ್ತಿದೆ. ಇದರ ಪರಿಣಾಮವಾಗಿ ಮಳೆಯ ಪ್ರಮಾಣ ಹಾಗೂ ಕೃಷಿ ಉತ್ಪಾದನೆಯ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ಹೀಗಾಗಿ ಪರಿಸರ ಸಮತೋಲನ ಕಾಪಾಡಲು ವಿಶೇಷವಾಗಿ ಯುವಜನತೆ ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ ಎಂದು ಅವರು ತಿಳಿಸಿದರು.

ರೋಟರಿ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷ ಎಂ ಬಿ ಲಕ್ಷ್ಮಣಗೌಡ ಮಾತನಾಡಿ, ನಿರಂತರ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಖಚಿತ. ಸ್ವಚ್ಛ ಹಾಗೂ ಆರೋಗ್ಯಕರ ಪರಿಸರವೇ ಉತ್ತಮ ಶಿಕ್ಷಣ ಮತ್ತು ಆರೋಗ್ಯಕರ ಸಮಾಜದ ಅಡಿಪಾಯವಾಗಿದೆ. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು, ಇತರರಲ್ಲೂ ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ಬಲ್ಲಾಳ್ ಮಾತನಾಡಿ, ಹಿಂದೆ ಜನರು ಹೆಚ್ಚು ಸೈಕಲ್ ಬಳಸುತ್ತಿದ್ದ ಕಾರಣ ಆರೋಗ್ಯವೂ ಉತ್ತಮವಾಗಿತ್ತು, ಪರಿಸರವೂ ಮಾಲಿನ್ಯದಿಂದ ಮುಕ್ತವಾಗಿತ್ತು. ಪ್ರತಿಯೊಬ್ಬರೂ ಪರಿಸರದ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ರೋಟರಿ ಕ್ಲಬ್ ನ ಕಾರ್ಯದರ್ಶಿ ರಮೇಶ್ ಹೆಬ್ಬಾರ್ , ಗಣೇಶ್ ಕಾಮತ್, ರಾಧಾಕೃಷ್ಣ ಹೆಚ್.ಎ. ಎಂ ಬಿ‌ ಮಂಜುನಾಥ್ , ರಾಧಾಕೃಷ್ಣ ಜೆ., ಡಾಕಪ್ಪ, ಹುಗುಡಿ ವರ್ತೇಶ್ ಗೌಡ, ಶಿವಕುಮಾರ್ ಶೆಟ್ಟಿ ,ಅಮಿತಾ ಬಲ್ಲಾಳ್ ,  ಗಣೇಶ್ ಆರ್., ಸಬಾಸ್ಟಿನ್ ಮ್ಯಾಥ್ಯೂಸ್ , ಮುಖೇಶ್  ಹಾಗೂ ಇನ್ನಿತರರು ಇದ್ದರು.

Create a WordPress feature image

About The Author

Exit mobile version