Headlines

ಖಾಸಗಿ ಬಸ್ ಮಾಫಿಯಾಗೆ ಶರಣಾದ KSRTC : ಹೊಸನಗರ, ರಿಪ್ಪನ್‌ಪೇಟೆ ಜನರ ಪರದಾಟ!

ಖಾಸಗಿ ಬಸ್ ಮಾಫಿಯಾಗೆ ಶರಣಾದ KSRTC : ಹೊಸನಗರ, ರಿಪ್ಪನ್‌ಪೇಟೆ ಜನರ ಪರದಾಟ!

ಈ ಭಾಗದ ಮಹಿಳೆಯರಿಗೆ ‘ಶಕ್ತಿ’ ಯೋಜನೆ ಇಲ್ವಾ?ಖಾಸಗಿಯವರಿಗೆ ಆಗುವ ಲಾಭ ಸರ್ಕಾರಿ ಬಸ್‌ಗೆ ಯಾಕಾಗಲ್ಲ? ಅಧಿಕಾರಿಗಳೇ ಉತ್ತರಿಸಿ!??

ರಾಜ್ಯದ ನಂ 1 ಹೆದ್ದಾರಿಯಲ್ಲಿ ಸರ್ಕಾರಿ ಬಸ್ಸೇ ಇಲ್ಲ: ಖಾಸಗಿ ಲಾಭಿಗೆ ತಲೆಬಾಗಿದ ಸಾರಿಗೆ ಇಲಾಖೆ!

Residents of Hosanagara, Ripponpet and surrounding areas have demanded more KSRTC buses, alleging inadequate public transport has deprived women and students of the benefits of Karnataka’s Shakti Scheme

​ರಾಜ್ಯದ ನಂಬರ್ 1 ಹೆದ್ದಾರಿಯಲ್ಲೇ ಸರ್ಕಾರಿ ಬಸ್‌ಗಳ ಸುಳಿವಿಲ್ಲ! ಹೌದು, ಇದು ಅಭಿವೃದ್ಧಿಯ ಹೆಸರಿನಲ್ಲಿ ಬಡವರನ್ನು ಶೋಷಿಸುತ್ತಿರುವ ಕಟು ಸತ್ಯ.

ಶಿವಮೊಗ್ಗ, ಹೊಸನಗರ, ಆನಂದಪುರ, ರಿಪ್ಪನ್‌ಪೇಟೆ, ಕೋಣಂದೂರು, ತೀರ್ಥಹಳ್ಳಿ ಭಾಗದ ಜನರಿಗೆ ಕೆಎಸ್‌ಆರ್‌ಟಿಸಿ (KSRTC) ಬಸ್ ಎನ್ನುವುದು ಕೇವಲ ಕನಸಿನ ಮಾತಾಗಿದೆ. ಸರ್ಕಾರದ ಬಹುನಿರೀಕ್ಷಿತ ‘ಶಕ್ತಿ’ ಯೋಜನೆ ಜಾರಿಗೆ ಬಂದು ರಾಜ್ಯದ ಇತರೆಡೆ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದರೆ, ಈ ಭಾಗದ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಮಾತ್ರ ಖಾಸಗಿ ಬಸ್‌ಗಳ ಸುಲಿಗೆಗೆ ಬಲಿಯಾಗಿ ಅನಾಥರಂತೆ ಪರದಾಡುತ್ತಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿದೆಯೇ?

ರಾಜ್ಯ ಸರ್ಕಾರ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ ಘೋಷಿಸಿದೆ. ಆದರೆ, ಸರ್ಕಾರಿ ಬಸ್‌ಗಳೇ ಓಡಾಡದ ಈ ಭಾಗದಲ್ಲಿ ಆ ಗ್ಯಾರಂಟಿ ಯೋಜನೆಯ ಲಾಭ ಪಡೆಯುವುದು ಹೇಗೆ? ಕೇವಲ ಕಾಗದದ ಮೇಲೆ ಯೋಜನೆಗಳನ್ನು ತಂದರೆ ಸಾಕೆ? ಖಾಸಗಿ ಬಸ್ ಮಾಲೀಕರ ಬಲಿಷ್ಠ ಮಾಫಿಯಾದ ಮುಂದೆ ಸರ್ಕಾರಿ ಅಧಿಕಾರಿಗಳು ಮತ್ತು ನಮ್ಮನ್ನು ಆಳುವ ಜನಪ್ರತಿನಿಧಿಗಳು ಅಕ್ಷರಶಃ ಮಂಡಿಯೂರಿ ಕೂತಿದ್ದಾರೆಯೇ? ಎಂಬುದು ಸಾರ್ವಜನಿಕರ ಆಕ್ರೋಶದ ಪ್ರಶ್ನೆಯಾಗಿದೆ.ಖಾಸಗಿ ಬಸ್ ಮಾಲೀಕರಿಗೆ ಲಾಭ ಮಾಡಿಕೊಡುವ ಏಕೈಕ ಕೀಳು ಉದ್ದೇಶದಿಂದ, ಉದ್ದೇಶಪೂರ್ವಕವಾಗಿಯೇ ಈ ಭಾಗಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಿಡುತ್ತಿಲ್ಲ ಎಂಬ ಗಂಭೀರ ಆರೋಪ ಈಗ ಬೀದಿ ಬೀದಿಗಳಲ್ಲಿ ಪ್ರತಿಧ್ವನಿಸುತ್ತಿದೆ.

​”ಸೀಟ್ ಫುಲ್ ಆಗಲ್ಲ, ನಿಗಮಕ್ಕೆ ಕಲೆಕ್ಷನ್ ಇಲ್ಲ, ಬಸ್ ಓಡಿಸಿದರೆ ನಷ್ಟವಾಗುತ್ತದೆ” ಎಂದು ಸಾರ್ವಜನಿಕರ ಮುಂದೆ ಬಂದು ಕುಂಟು ನೆಪ ಹೇಳುವ ಡಿಪೋ ಮ್ಯಾನೇಜರ್‌ಗಳೇ… ನಿಮ್ಮ ಎದೆಮುಟ್ಟಿ ಹೇಳಿಕೊಳ್ಳಿ. ಅದೇ ಮಾರ್ಗದಲ್ಲಿ ಒಂದೇ ಒಂದು ಬಸ್ಸಿನಿಂದ ಶುರು ಮಾಡಿದ ಖಾಸಗಿ ಬಸ್ ಮಾಲೀಕರು ಇಂದು ಹತ್ತಾರು ಬಸ್‌ಗಳ ಒಡೆಯರಾಗಿ ಕೋಟಿ ಕೋಟಿ ಸಂಪಾದಿಸುತ್ತಿರುವುದು ಹೇಗೆ? ಖಾಸಗಿಯವರಿಗೆ ಆಗುವ ಲಾಭ ಸರ್ಕಾರಿ ಬಸ್‌ಗಳಿಗೆ ಯಾಕಾಗುವುದಿಲ್ಲ? ರಾಜ್ಯದ ನಂಬರ್ 1 ಹೆದ್ದಾರಿಯಲ್ಲಿ ಬಸ್ ಬಿಡಲು ಇಷ್ಟೆಲ್ಲಾ ಹಿಂದೇಟು ಹಾಕುವ ಅಧಿಕಾರಿಗಳು ಖಾಸಗಿ ಬಸ್ ಮಾಲೀಕರ ಬಳಿ ಎಷ್ಟರಮಟ್ಟಿಗೆ ಲಂಚ ತಿಂದಿರಬಹುದು? ಈ ಲಂಚಬಾಕತನಕ್ಕೆ ಕೊನೆಯೇ ಇಲ್ಲವೇ?

​ಚುನಾವಣೆಗೂ ಮುನ್ನ ಮಹಿಳೆಯರ ಉದ್ಧಾರ ಮಾಡುತ್ತೇವೆ, ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದು ಬೊಬ್ಬೆ ಹೊಡೆದು ಅಧಿಕಾರಕ್ಕೆ ಬಂದ ನಾಯಕರು, ಇಂದು ಶಿವಮೊಗ್ಗ-ತೀರ್ಥಹಳ್ಳಿ-ಹೊಸನಗರ-ಕುಂದಾಪುರ ಮಾರ್ಗದಲ್ಲಿ ಕೇವಲ ಖಾಸಗಿ ಬಸ್‌ಗಳು ದರ್ಬಾರು ನಡೆಸುತ್ತಿರುವಾಗ ಕಣ್ಮುಚ್ಚಿ ಕುಳಿತಿದ್ದಾರೇಕೆ?

ಶಾಲಾ-ಕಾಲೇಜುಗಳಿಗೆ ಹೋಗುವ ಸಾವಿರಾರು ಬಡ ವಿದ್ಯಾರ್ಥಿಗಳು, ಉದ್ಯೋಗಕ್ಕೆ ತೆರಳುವ ಮಹಿಳೆಯರು ಪ್ರತಿನಿತ್ಯ ದುಪ್ಪಟ್ಟು ಹಣ ಕೊಟ್ಟು ಖಾಸಗಿ ಬಸ್‌ಗಳಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಸಿಗುತ್ತದೆ. ಆದರೆ ಇಲ್ಲಿ ಸರ್ಕಾರಿ ಬಸ್ಸೇ ಇಲ್ಲದಿರುವಾಗ ಈ ಯೋಜನೆ ಯಾವ ಪುರುಷಾರ್ಥಕ್ಕೆ? ಮಹಿಳೆಯರ ಹಾಗೂ ವಿದ್ಯಾರ್ಥಿಗಳ ಉಚಿತ ಬಸ್ ಪ್ರಯಾಣ ಕೇವಲ ಮೂಗಿಗೆ ತುಪ್ಪ ಸವರುವ ತಂತ್ರವೇ?

​ಕೇವಲ ಸಾರ್ವಜನಿಕರ ಕಣ್ಣೊರೆಸಲು ಒಂದೆರಡು ಬಸ್ಸುಗಳನ್ನು ಬಿಟ್ಟು, “ಪ್ರಯಾಣಿಕರಿಲ್ಲ” ಎಂಬ ಸುಳ್ಳು ರಿಪೋರ್ಟ್ ಸೃಷ್ಟಿಸಿ ವಾಪಸ್ ಪಡೆಯುವ ನಾಟಕವನ್ನು ಅಧಿಕಾರಿಗಳು ನಿಲ್ಲಿಸಬೇಕು. ಸಾಗರ ಮತ್ತು ಶಿವಮೊಗ್ಗದಲ್ಲಿ ದೊಡ್ಡ ಮಟ್ಟದ ಕೆಎಸ್‌ಆರ್‌ಟಿಸಿ ಡಿಪೋಗಳಿದ್ದರೂ, ಖಾಸಗಿಯವರಂತೆ ಅರ್ಧ ಗಂಟೆಗೊಂದು ಸರ್ಕಾರಿ ಬಸ್ ಬಿಡಲು ಇವರಿಗೆ ಬಂದಿರುವ ರೋಗವಾದರೂ ಏನು? ಸಾಮಾನ್ಯ ಜನರ ಕಷ್ಟಕ್ಕೆ ಕರಗದ, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ಇಲ್ಲದ ಈ ಭ್ರಷ್ಟ ವ್ಯವಸ್ಥೆಯ ವಿರುದ್ಧ ಜನತೆ ಈಗ ರೊಚ್ಚಿಗೆದ್ದಿದ್ದಾರೆ.

ಈ ಅನ್ಯಾಯದ ವಿರುದ್ಧ, ಜನಸಾಮಾನ್ಯರ ರಕ್ತ ಹೀರುತ್ತಿರುವ ಖಾಸಗಿ ಬಸ್ ಮಾಲೀಕರ ಲಾಬಿಯ ವಿರುದ್ಧ ಪೋಸ್ಟ್ ಮ್ಯಾನ್ ನ್ಯೂಸ್ ನಿರಂತರವಾಗಿ ಧ್ವನಿ ಎತ್ತುತ್ತಿದೆ. ಈಗಾಗಲೇ ಸಾರಿಗೆ ಸಚಿವ ಬೈರತಿ ಸುರೇಶ್ ಅವರ ಗಮನಕ್ಕೂ ಈ ಗಂಭೀರ ಸಮಸ್ಯೆಯನ್ನು ನಮ್ಮ ಪೋಸ್ಟ್ ಮ್ಯಾನ್ ನ್ಯೂಸ್ ತಂದಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಆದರೆ ಭರವಸೆಗಳು ಕಾರ್ಯರೂಪಕ್ಕೆ ಬರಬೇಕು.

ಇನ್ನಾದರೂ ದಪ್ಪ ಚರ್ಮದ ಜನಪ್ರತಿನಿಧಿಗಳು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು, ತಕ್ಷಣವೇ ಈ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಚ್ಚರ!

 – ರಫಿ ರಿಪ್ಪನ್ ಪೇಟೆ

About The Author

Exit mobile version