ಲೀಗ್ ಪಂದ್ಯ ವೇಳೆ ಕುಸಿದು ಬಿದ್ದ ಶಿವಮೊಗ್ಗದ ಕ್ರಿಕೆಟಿಗ ಅಕ್ಷಯ್ ನಿಧನ
Former Karnataka first-class cricketer and Shivamogga native SL Akshay passed away due to a heart attack while playing a Division-III league match in Bengaluru at the age of 39.
ಬೆಂಗಳೂರು: ಕರ್ನಾಟಕದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಹಾಗೂ ಶಿವಮೊಗ್ಗ ಮೂಲದ ಸಂತೇಬೆನ್ನೂರು ಲೋಕೇಶ್ ಅಕ್ಷಯ್ (39) ಅವರು ಬೆಂಗಳೂರಿನಲ್ಲಿ ಲೀಗ್ ಕ್ರಿಕೆಟ್ ಪಂದ್ಯವಾಡುವ ವೇಳೆ ಹೃದಯಾಘಾತದಿಂದ ಭಾನುವಾರ ಅಕಾಲಿಕವಾಗಿ ನಿಧನರಾಗಿದ್ದಾರೆ.
ಡಿವಿಷನ್-III ಲೀಗ್ ಪಂದ್ಯದಲ್ಲಿ ಪಾಲ್ಗೊಂಡಿದ್ದ ವೇಳೆ ಅಕ್ಷಯ್ ಏಕಾಏಕಿ ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಎಸ್ಎಲ್ ಅಕ್ಷಯ್ ಅವರು 2014-15ರ ರಣಜಿ ಟ್ರೋಫಿ ವಿಜೇತ ಕರ್ನಾಟಕ ತಂಡದ ಸದಸ್ಯರಾಗಿದ್ದರು. ಆ ಋತುವಿನಲ್ಲಿ ಪಂದ್ಯಾವಕಾಶ ಸಿಗದಿದ್ದರೂ ತಂಡದ ಭಾಗವಾಗಿ ಗುರುತಿಸಿಕೊಂಡಿದ್ದರು. ಬಳಿಕ ಕರ್ನಾಟಕ ಪರ ವಿವಿಧ ಪ್ರಥಮ ದರ್ಜೆ ಹಾಗೂ ವೈಟ್-ಬಾಲ್ ಮಾದರಿಯ ಪಂದ್ಯಗಳಲ್ಲಿ ಆಡಿದ್ದರು.
ಅಕ್ಷಯ್ ತಮ್ಮ ವೃತ್ತಿಜೀವನದಲ್ಲಿ ಕರ್ನಾಟಕ ಪರ ಒಟ್ಟು ಆರು ಪ್ರಥಮ ದರ್ಜೆ ಪಂದ್ಯಗಳು, ಮೂರು ಏಕದಿನ ಹಾಗೂ ಒಂಬತ್ತು ಟಿ20 ಪಂದ್ಯಗಳನ್ನು ಆಡಿದ್ದು, ಒಟ್ಟು 32 ವಿಕೆಟ್ಗಳನ್ನು ಪಡೆದಿದ್ದರು. 2019ರ ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಬಿಜಾಪುರ ಬುಲ್ಸ್ ತಂಡವನ್ನು ಪ್ರತಿನಿಧಿಸಿ ಕೊನೆಯ ವೃತ್ತಿಪರ ಪಂದ್ಯವನ್ನಾಡಿದ್ದರು.
ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೌರಾಷ್ಟ್ರ ವಿರುದ್ಧ ನಡೆದ ಪಂದ್ಯದಲ್ಲಿ ರಣಜಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಅಕ್ಷಯ್, ನಂತರ ರಾಜ್ಯ ತಂಡದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.ಶಿವಮೊಗ್ಗ ಜಿಲ್ಲೆಯ ಸಂತೇಬೆನ್ನೂರಿನವರಾದ ಅಕ್ಷಯ್ ಅವರ ನಿಧನಕ್ಕೆ ಕ್ರಿಕೆಟ್ ವಲಯದಲ್ಲಿ ಸಂತಾಪ ವ್ಯಕ್ತವಾಗಿದೆ.




