ಹೆಲ್ಮೆಟ್ ವಿಚಾರಕ್ಕೆ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ : ಇಬ್ಬರು ಆರೋಪಿಗಳು ಬಂಧನ
Two individuals were arrested in Shivamogga’s Gandhi Bazaar for allegedly assaulting traffic police officers and obstructing them from duty after being questioned for riding without helmets.
ಶಿವಮೊಗ್ಗ: ನಗರದ ಗಾಂಧಿ ಬಜಾರ್‌ನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ವಿಚಾರವಾಗಿ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೇ 04ರ ಸೋಮವಾರ ಬೆಳಿಗ್ಗೆ, ಪೂರ್ವ ಸಂಚಾರ ಪೊಲೀಸ್ ಠಾಣೆಯ ಎಎಸ್‌ಐ ಮಂಜುನಾಥ್ ಹಾಗೂ ಸಿಪಿಸಿ ಸಂತೋಷ್ ಅವರು ಗಾಂಧಿ ಬಜಾರ್‌ನಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದರು. ಈ ವೇಳೆ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸಯ್ಯದ್ ಮುಜಾಮಿಲ್ ಅವರನ್ನು ಪೊಲೀಸರು ತಡೆದು, ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸುವಂತೆ ಸೂಚನೆ ನೀಡಿದರು.
ಇದಕ್ಕೆ ಆಕ್ರೋಶಗೊಂಡ ಸಯ್ಯದ್ ಮುಜಾಮಿಲ್ ರಸ್ತೆ ಮಧ್ಯದಲ್ಲೇ ವಾಗ್ವಾದಕ್ಕಿಳಿದನು. ಇದೇ ವೇಳೆ ಸ್ಥಳಕ್ಕೆ ಬಂದ ಜಬಿವುಲ್ಲಾ ಕೂಡ ಸೇರಿಕೊಂಡು, ಅವಾಚ್ಯ ಪದಗಳನ್ನು ಬಳಸುತ್ತಾ, “ನಾವು ಹೆಲ್ಮೆಟ್ ಹಾಕುವುದಿಲ್ಲ, ನೀವು ಏನು ಮಾಡುತ್ತೀರಾ?” ಎಂದು ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ.
ಇದಲ್ಲದೆ, ಇಬ್ಬರು ಆರೋಪಿಗಳು ಸಮವಸ್ತ್ರದಲ್ಲಿದ್ದ ಅಧಿಕಾರಿಗಳನ್ನು ದೂಡಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೈಕ್ ಕೀ ಕಿತ್ತುಕೊಂಡು ಬೆದರಿಕೆ ಹಾಕಿ ಪರಾರಿಯಾಗಲು ಯತ್ನಿಸಿದ್ದಾರೆ.
ಈ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಯ್ಯದ್ ಮುಜಾಮಿಲ್ ಮತ್ತು ಜಬಿವುಲ್ಲಾ ಎಂಬಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.




