Headlines

ಶಿವಮೊಗ್ಗದಲ್ಲಿ ಆಲಿಕಲ್ಲಿನ ಸಮೇತ ಭಾರಿ ಮಳೆ: ಹಲವು ಬಡಾವಣೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

Heavy rain with hailstorm lashed Shivamogga at around 4:30 PM, causing waterlogging, house damage, and disruption to normal life in several areas including Vinoba Nagar and Gopalagowda Layout.

ಶಿವಮೊಗ್ಗ: ಇಂದು ಸಂಜೆ ಸುಮಾರು 4:30ರ ವೇಳೆಗೆ ನಗರದಲ್ಲಿ ಅಚ್ಚರಿಯ ರೀತಿಯಲ್ಲಿ ಗುಡುಗು-ಮಿಂಚಿನೊಂದಿಗೆ ಆಲಿಕಲ್ಲಿನ ಸಮೇತ ಭರ್ಜರಿ ಮಳೆಯಾಗಿದ್ದು, ದಿನಪೂರ್ತಿ ಬಿಸಿಲಿನ ತಾಪದಿಂದ ಬಳಲುತ್ತಿದ್ದ ಜನತೆಗೆ ತಾತ್ಕಾಲಿಕ ತಂಪು ತಂದಿದೆ. ಆದರೆ ಈ ಮಳೆಯ ರಭಸ ನಗರದಲ್ಲಿ ಹಲವೆಡೆ ಅವಾಂತರಗಳಿಗೂ ಕಾರಣವಾಗಿದೆ.

ಮಳೆಯ ಜೊತೆಗೆ ಸುರಿದ ಆಲಿಕಲ್ಲು ಜನರಲ್ಲಿ ಧಾರವಾಡ ಭಾಗದ ಕಲ್ಗಡಕಿಯ ದೃಶ್ಯವನ್ನು ನೆನಪಿಸುವಂತಿತ್ತು. ವಿನೋಬ ನಗರ ಪ್ರದೇಶದಲ್ಲಿ ಮಳೆಯ ತೀವ್ರತೆಗೆ ರಸ್ತೆಗಳಲ್ಲಿ ನೀರು ನಿಂತು ವಾಹನಗಳ ಟಯರ್‌ಗಳು ಜಲಾವೃತಗೊಂಡ ದೃಶ್ಯಗಳು ಕಂಡುಬಂದವು. ಕೆಲವೆಡೆ ವಿದ್ಯುತ್ ತಂತಿಗಳು ನೇತಾಡುತ್ತಿರುವುದು ಆತಂಕಕ್ಕೆ ಕಾರಣವಾಯಿತು.

ಆಲಿಕಲ್ಲಿನ ಮಳೆಯ ಪರಿಣಾಮವಾಗಿ ರಸ್ತೆ ಬದಿಗಳಲ್ಲಿದ್ದ ಮರಗಳ ಹಸಿರು ಎಲೆಗಳು ಉದುರಿ ರಸ್ತೆಗಳಿಗೆ ಹಸಿರು ಮೆರಗು ತಂದುಕೊಟ್ಟವು. ತರಕಾರಿ ಮಾರುಕಟ್ಟೆಯಿಂದ ಪೊಲೀಸ್ ಚೌಕಿಯವರೆಗೆ ಹಲವು ಕಡೆ ರಸ್ತೆಗಳಲ್ಲಿ ನೀರು ನಿಂತು ದ್ವಿಮುಖ ಸಂಚಾರಕ್ಕೆ ಅಡ್ಡಿಯಾಯಿತು.

ಗಾಳಿ-ಮಳೆಯ ಅಬ್ಬರಕ್ಕೆ ಕೆಲವು ಮನೆಗಳ ಚಾವಣಿಗಳು ಹಾರಿಹೋಗಿರುವ ವರದಿಗಳು ಲಭ್ಯವಾಗಿವೆ. ನ್ಯೂ ಮಂಡ್ಲಿ ಪ್ರದೇಶದಲ್ಲಿ ಈಶ್ವರಪ್ಪ ಎಂಬವರ ಮನೆಯ ಹೆಂಚುಗಳು ಗಾಳಿಗೆ ಹಾರಿ ಹೋಗಿದ್ದು, ಮನೆಯೊಳಗೆ ಮಳೆಯ ನೀರು ನುಗ್ಗಿ ಹಾನಿ ಉಂಟಾಗಿದೆ.

ಇನ್ನೂ ಕೆಲವು ಬಡಾವಣೆಗಳಲ್ಲಿ ರಾಜಕಾಲುವೆ ನೀರು ನುಗ್ಗಿ ಮನೆಗಳು ಜಲಾವೃತಗೊಂಡಿವೆ. ಗೋಪಾಲಗೌಡ ಬಡಾವಣೆಯ ಬಿ ಬ್ಲಾಕ್‌ನಲ್ಲಿ ಮೂರು ರಸ್ತೆಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎ ಬ್ಲಾಕ್‌ನಲ್ಲೂ ಇದೇ ಪರಿಸ್ಥಿತಿ ಕಂಡುಬಂದಿದೆ.

ಜೈಲ್ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳು ಜಲಾವೃತಗೊಂಡು ವಾಹನ ಸಂಚಾರಕ್ಕೂ ತೊಂದರೆಯಾಗಿದ್ದು, ಒಟ್ಟಾರೆ ಮಳೆಯ ಪರಿಣಾಮ ಶಿವಮೊಗ್ಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

About The Author

Exit mobile version